ಪ್ರಧಾನಿ ಮೋದೀಜೀಯವರೇ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ, 10%ನ ಕಾಂಗ್ರೆಸ್ ಸರಕಾರ ತೊಲಗಿಸಿ ಎಂದಿದ್ದೀರಿ. ಜನರು ನಿಮಗೆಂದೇ ಓಟು ಕೊಟ್ಟಿದ್ದಾರೆ, ನಿಮ್ಮ ಹೆಸರಿನಲ್ಲಿಯೇ ನಮ್ಮ ಶಾಸಕರು, ಸಂಸದರು ಆಯ್ಕೆ ಆಗಿದ್ದಾರೆ. ನೀವು ಹೇಳಿದರೆ ಚಪ್ಪಾಳೆ ತಟ್ಟುತ್ತೇವೆ, ದೀಪ ಹಚ್ಚುತ್ತೇವೆ, ನಿಮ್ಮನ್ನು ದೇವರ ಅವತಾರ ಎಂದೂ ಹೇಳುವವರಿದ್ದಾರೆ.

0

130 ಕೋಟಿ ಜನರ ವಿಶ್ವಾಸ ನಿಮ್ಮ ಮೇಲಿದೆ, ನಾ ಕಾವೂಂಗ, ನಾ ಕಾನೆದೂಂಗ ಜಾರಿಗೆ ತನ್ನಿ, ಊರನ್ನು ಲಂಚ ಭ್ರಷ್ಟಾಚಾರ ಮುಕ್ತಗೊಳಿಸಿ

ನಿಮಗೆ ಪತ್ರ ಬರೆದರೆ ರಾಜ್ಯದ ಮುಖ್ಯಮಂತ್ರಿ, ಮಂತ್ರಿಗಳು ಮುಗಿ ಬೀಳುತ್ತಾರೆ. ಪುರಾವೆ ಕೇಳುತ್ತಾರೆ. ಜನ ಸಾಮಾನ್ಯರನ್ನು ಕೇಳಲಿ. ಸರಕಾರಿ ಕಚೇರಿಯ ಕಂಬ ಕಂಬಗಳ ಲಂಚದ ಹಣ ಎಲ್ಲಿಗೆ ಹೋಗುತ್ತದೆ ಹೇಳಲಿ

ಮಾನ್ಯ ಪ್ರಧಾನಿ ಮೋದಿಜೀಯವರೇ…

ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದ ಗಂಗೋತ್ರಿ. ಸಿದ್ದರಾಮಯ್ಯ ಸರಕಾರ 10% ಕಮಿಷನ್ ಪಡೆಯುವ ಸರಕಾರ. ಅದನ್ನು ತೊಲಗಿಸಿ ಲಂಚ, ಭ್ರಷ್ಟಾಚಾರ ಮುಕ್ತ ಸರಕಾರಕ್ಕಾಗಿ ಗೆಲ್ಲಿಸಿ ಎಂದು ಕರೆ ನೀಡಿದ್ದೀರಿ. ನಾ ಕಾವೂಂಗ, ನಾ ಕಾನೆದೂಂಗ (ನಾನು ತಿನ್ನುವುದಿಲ್ಲ, ನಾನು ತಿನ್ನಲು ಬಿಡುವುದಿಲ್ಲ) ಎಂದು ಘೋಷಣೆ ಮಾಡಿದ್ದೀರಿ. ಜನರು ಅದನ್ನು ಒಪ್ಪಿ ನಿಮ್ಮನ್ನು ಗೆಲ್ಲಿಸಿದ್ದಾರೆ. ಆದರೆ ಇದೀಗ ನಿಮ್ಮದೇ ರಾಜ್ಯ ಸರಕಾರ 40% ಸರಕಾರ ಆಗಿದೆ ಎಂದು ವ್ಯಾಪಕ ಆರೋಪ ಬಂದಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣರು ಅದರ ಬಗ್ಗೆ ಸೂಕ್ತ ಕ್ರಮಕ್ಕಾಗಿ, ರಕ್ಷಣೆಗಾಗಿ ಪ್ರಧಾನಿಯಾದ ನಿಮಗೆ ಪತ್ರ ಬರೆದಿದ್ದಾರೆ. ಇದೀಗ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷರೂ ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ನಿಮಗೆ ಪತ್ರ ಬರೆದಿದ್ದಾರೆ. ಪಿಎಸ್‌ಐ ನೇಮಕಾತಿಯಲ್ಲಿ ಲಕ್ಷಾಂತರ ರೂ. ಹಗರಣದ ಬಗ್ಗೆ ತಮಗೆ ತಿಳಿದಿದೆ. ಸುಪ್ರೀಂ ಕೋರ್ಟ್‌ನ ಆದೇಶದ ಹೊರತಾಗಿಯೂ ಬಿಡಿಎಯಲ್ಲಿ ಅಕ್ರಮ ಸೈಟು ವಿತರಣೆ ಆಗಿದ್ದಕ್ಕೆ ಸುಪ್ರೀಂ ಕೋರ್ಟ್ ಬಿಡಿಎ ಆಯುಕ್ತರ ಮೇಲೆ ಕ್ರಮಕ್ಕೆ ಆದೇಶ ಹೊರಡಿಸಿದೆ. ಈ ನಡುವೆ ರಾಜ್ಯ ಗುತ್ತಿಗೆದಾರರ ಸಂಘದವರು ಸಮಸ್ಯೆ ಇನ್ನೂ ಪರಿಹಾರವಾಗಿರುವುದಿಲ್ಲ ಎಂದು ಪತ್ರಿಕಾಗೋಷ್ಠಿ ಕರೆದು ತಮಗೆ ಪುನಃ ಪತ್ರ ಬರೆಯುವುದಾಗಿ ಅಧ್ಯಕ್ಷ ಕೆಂಪಣ್ಣರು ತಿಳಿಸಿದ್ದಾರೆ. ರಾಜ್ಯ ಸರಕಾರದ, ಮತ್ತಿತರ ಪಕ್ಷದ ಕೆಲವರ ಮೇಲೆ ಗಂಭೀರ ಆಪಾದನೆ ಮಾಡಿದ್ದಾರೆ.

ಪ್ರಧಾನಿಯವರೇ, ನೊಂದವರು ನಿಮಗೆ ದೂರು ನೀಡಿದರೆ ಅದು ಅಪರಾಧವೇ? ಶಿಕ್ಷಾರ್ಹವೇ?.

ಇಂತಹ ಆರೋಪಗಳು ಬಂದಾಗ ರಾಮ ರಾಜ್ಯದ ಪಾರದರ್ಶಕ ಆಡಳಿತದ ಭರವಸೆ ನೀಡಿದ್ದ ಸರಕಾರ ಅದರ ತನಿಖೆ ನಡೆಸುವುದು ಬಿಟ್ಟು ದೂರು ನೀಡಿದವರ ಬಗ್ಗೆ ಆಪಾದನೆ ಮಾಡುತ್ತಿದ್ದಾರೆ. ಪುರಾವೆ ಕೇಳುತ್ತಿದ್ದಾರೆ?! ಬಿಲ್ ಪಾಸ್ ಮಾಡಲು, ಕೆಲಸ ಮಾಡಿ ಕೊಡಲು, ಲಂಚ, ಭ್ರಷ್ಟಾಚಾರ ಮಾಡುವ ಜನಪ್ರತಿನಿಽಗಳು, ಅಽಕಾರಿಗಳು ಬಹಿರಂಗವಾಗಿ ಪುರಾವೆ ಕೊಡುತ್ತಾರೆಯೇ. ಬಿಲ್ ಪಾಸ್ ಮಾಡದೆ ಕೆಲಸ ಮಾಡದೆ ಸುಮ್ಮನೆ ಇದ್ದರೆ ಅದರಿಂದ ಅವರಿಗೇನು ನಷ್ಟವಿರುವುದಿಲ್ಲ. ತೊಂದರೆಯೂ ಇಲ್ಲ. ಕೆಲಸ ಅವರಲ್ಲಿಯೇ ಆಗಬೇಕಾಗಿರುವುದರಿಂದ ಬಿಲ್ ಪಾಸ್ ಆಗದೇ, ಕೆಲಸ ಆಗದೇ ಇದ್ದರೆ ಅದರ ಹಿಂದೆ ಇರುವವರಿಗೆ ಅಪಾರ ನಷ್ಟವಾಗುತ್ತದೆ. ಅದಕ್ಕಾಗಿ ಅವರು ಹೇಗಾದರೂ ಮಾಡಿ ಲಂಚ, ಪಾಲು ಕೊಟ್ಟಾದರೂ ಕೆಲಸ ಮಾಡಿಸಿಕೊಳ್ಳಲೇ ಬೇಕು. ಇಲ್ಲದಿದ್ದರೆ ಗುತ್ತಿಗೆದಾರ ಸಂತೋಷ್ ಪಾಟೀಲ್‌ನಂತೆ ಆತ್ಮಹತ್ಯೆ ಮಾಡಿಕೊಳ್ಳಬೇಕು. ಅದರೊಂದಿಗೆ ಲಂಚ ಕೊಟ್ಟವನೂ ಅಪರಾಧಿ ಅವನನ್ನು ಶಿಕ್ಷಿಸುತ್ತೇವೆ ಎಂದು ಹೇಳಿದರೆ, ಲಂಚ ಕೊಟ್ಟ ಮೇಲೆ ಕೇಸ್ ಕೊಡುವಂತಿಲ್ಲ, ದೂರು ಕೊಡುವಂತಿಲ್ಲ ಎಂದಿರುವಾಗ ಜನರು ಆಧಾರ ಕೊಡಲು ಹಿಂಜರಿಯುತ್ತಾರೆ. ಅದನ್ನು ಮೀರಿ ದೂರು ನೀಡಿದರೆ ಮುಂದಕ್ಕೆ ಅವನ ಯಾವುದೇ ಕೆಲಸಗಳು ಆಗದಂತೆ ನೋಡಿಕೊಂಡು ಅವನನ್ನು ನಾಶ ಮಾಡಿ ಬಿಡುತ್ತಾರೆ. ಅಂತಹ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ. ಇಷ್ಟೆಲ್ಲಾ ಗೊತ್ತಿದ್ದರೂ ಪುರಾವೆ ಕೇಳುತ್ತಾರೆ! ಅದಕ್ಕಿಂತ ಮುಖ್ಯವಾಗಿ ದೇಶದ ಪ್ರಧಾನಿಯಾದ ನಿಮಗೆ ಪತ್ರ ಬರೆದದಕ್ಕೆ ಹೆದರುವ ಬದಲು ಪತ್ರ ಬರೆದವರ ಮೇಲೆ ಆಪಾದನೆ ಮಾಡಿ ಅವರ ಮೇಲೆ ಮುಗಿ ಬೀಳುತ್ತಿದ್ದಾರೆ. ಅದರ ಅರ್ಥವೇನು? ಮನ್ ಕೀ ಬಾತ್ ನಲ್ಲಿ ದೇಶದ ಜನರನ್ನು ಮುಟ್ಟಲು ಪ್ರಯತ್ನಿಸುತ್ತಿರುವ ಜನರ ಭಾವನೆಗಳಿಗೆ ಬೆಲೆ ಕೊಡುವ ನಿಮಗೆ ನೊಂದವರು ಧ್ವನಿ ಮುಟ್ಟಿಸಿದರೆ ಅದು ಅಪರಾಧವೇ, ಶಿಕ್ಷಾರ್ಹವೇ?

ಲಂಚ, ಭ್ರಷ್ಟಾಚಾರ ವಿರುದ್ಧದ ನಿಮ್ಮ ಕರೆ ಜನರಿಗೆ ಭರವಸೆ ನೀಡಿದೆ.

ಮೋದೀಜೀಯವರೇ ದೇಶದ 130 ಕೋಟಿ ಜನರ ಪ್ರೀತಿ, ವಿಶ್ವಾಸ ನಿಮ್ಮ ಮೇಲಿದೆ ಎಂದಿದ್ದೀರಿ. ದೇಶದ ಹಿತ ಕಾಯುವ ಚೌಕಿದಾರ ತಾನು ಎಂದು ಹೇಳಿಕೊಂಡಿದ್ದೀರಿ. ಜನರು ನಿಮ್ಮ ಮೇಲಿನ ಪ್ರೀತಿ ವಿಶ್ವಾಸದಿಂದ ನೋಟು ಬ್ಯಾನ್‌ನ ಸಂಕಷ್ಟಗಳನ್ನು ಸಹಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಬಂದ್‌ನ ಕಷ್ಟಗಳನ್ನು ಅನುಭವಿಸಿದ್ದಾರೆ. ಅಂತಹ ಸಂದರ್ಭದಲ್ಲಿಯೂ ನಿಮ್ಮ ಕರೆಗೆ ಚಪ್ಪಾಳೆ ತಟ್ಟಿದ್ದಾರೆ, ದೀಪ ಹಚ್ಚಿದ್ದಾರೆ, ಉಪವಾಸ ಕೂತಿದ್ದಾರೆ. ಜನರು ನಮ್ಮ ಶಾಸಕರಿಗೆ, ಸಂಸದರಿಗೆ ಎಂದು ಓಟು ಕೊಟ್ಟದ್ದಲ್ಲ. ನಿಮಗಾಗಿ ಓಟು ಕೊಟ್ಟಿದ್ದಾರೆ. ನಿಮ್ಮ ಹೆಸರಿಲ್ಲದಿದ್ದರೆ ಎಷ್ಟೋ ಜನ ಗೆಲ್ಲುತ್ತಿರಲಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಹೀಗಿರುವಾಗ ಈ ಲಂಚ, ಭ್ರಷ್ಟಾಚಾರದ ಪಿಡುಗನ್ನು ಯಾರಲ್ಲಿ ಹೇಳಿಕೊಳ್ಳಲಿ. ನಿಮ್ಮಲ್ಲೇ ಹೇಳಿಕೊಳ್ಳಬೇಕಲ್ಲವೇ? ನೀವೇ ಅದನ್ನು ನಿವಾರಿಸಬೇಕಲ್ಲವೇ? ಕಳೆದ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದ ಭ್ರಷ್ಟಾಚಾರ ಗೆದ್ದಲಿನಂತೆ, ಅದನ್ನು ಬಹಿಷ್ಕರಿಸಬೇಕು. ಅದನ್ನು ತೊಲಗಿಸಲು ಜನತೆ ಸಹಕಾರ ಕೊಡಬೇಕು ಎಂದು ಕರೆಕೊಟ್ಟಿದ್ದೀರಿ. ಅದು ಜನರಿಗೆ ಹೊಸ ಭರವಸೆ ನೀಡಿದೆ.

ದೂರು ನೀಡಿದವರಿಗೆ ತೊಂದರೆಯಾಗದಂತೆ ಭರವಸೆ ನೀಡಿದರೆ ಲಂಚ, ಭ್ರಷ್ಟಾಚಾರದ ಪುರಾವೆಗಳ ಪಟ್ಟಿ ಬರುತ್ತದೆ.

ಲಂಚ, ಭ್ರಷ್ಟಾಚಾರಕ್ಕೆ ಪುರಾವೆ ಕೇಳುವ ಮುಖ್ಯಮಂತ್ರಿ ಮತ್ತು ಮಂತ್ರಿಗಳು, ಶಾಸಕರು ನಮ್ಮಲ್ಲಿಗೆ ಬರಲಿ, ಪುರಾವೆ ಕೊಡುತ್ತೇವೆ. ರಾಜ್ಯದಾದ್ಯಂತ ಪ್ರತೀ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರತಿಯೊಂದು ದಾಖಲೆಗೆ ನೀಡುವ ಪರ್ಸಂಟೇಜ್ ಹಣದ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಮ್ಮ ಪ್ರತಿಯೊಂದು ಊರಿನಲ್ಲಿರುವ ಸರಕಾರಿ ಕಚೇರಿಯ ಕಂಬ ಕಂಬಗಳನ್ನು ಕೇಳಿ ನೋಡಿ, ಎಷ್ಟೆಷ್ಟು ಲಂಚ ಯಾವ ಯಾವ ಕೆಲಸಕ್ಕೆ ಎಂದು ಬಾಯಿ ಬಿಟ್ಟು ಹೇಳುತ್ತಾರೆ. ಅದನ್ನು ಪಡೆಯುವಾಗ ಎಲ್ಲೆಲ್ಲಿಗೆ ನೀಡಬೇಕು, ಅಧಿಕಾರಿಗಳಿಗೆ, ಶಾಸಕರಿಗೆ, ಮಂತ್ರಿಗಳಿಗೆ ಎಷ್ಟೆಷ್ಟು ಕೊಡಬೇಕು ಎಂಬ ಸಮಜಾಯಿಷಿಕೆ ನೀಡುತ್ತಾರೆ. ಕೆಲಸ ಪಡೆಯಲು ಕೊಟ್ಟ ಹಣವೆಷ್ಟು, ವರ್ಗಾವಣೆಗೆ ಎಷ್ಟು ಕೊಡಬೇಕು, ಇಲ್ಲಿ ಉಳಿಯಲು ಏನು ಕೊಡಬೇಕು, ಯಾರು ಯಾರಿಗೆ ಕೊಡಬೇಕು ಎಂಬ ಪಟ್ಟಿ ಅವರಲ್ಲಿದೆ. ಲಂಚ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯ ಕಷ್ಟವನ್ನು ಹೇಳಿಕೊಳ್ಳುತ್ತಾರೆ. ನಿಮ್ಮ ತನಿಖಾಧಿಕಾರಿಗಳನ್ನು ಕಚೇರಿಗೆ ಕಳುಹಿಸಿರಿ, ಅಲ್ಲಿಗೆ ಬರುವ ಜನರನ್ನು ವಿಚಾರಿಸಿರಿ. ನೀವು ಜನರಿಗೆ ರಕ್ಷಣೆ ನೀಡುವ ಭರವಸೆ ನೀಡಿದರೆ ರಾಜ್ಯದ ಎಲ್ಲಾ ಜನರು ತಮ್ಮ ಲಂಚ, ಭ್ರಷ್ಟಾಚಾರದ ಅನುಭವಗಳನ್ನು ನಿಮ್ಮ ಮುಂದೆ ಇಡುವಂತೆ ಮಾಡುತ್ತೇನೆ. ಕೆಲವು ಪ್ರಾಮಾಣಿಕರನ್ನು ಹೊರತು ಪಡಿಸಿ ಇಲ್ಲಿಯವರೆಗೆ ಆಡಳಿತ ನಡೆಸಿರುವ ಎಲ್ಲಾ ಪಕ್ಷದ ಶಾಸಕರನ್ನು, ಮುಖ್ಯವಾಗಿ ಮಂತ್ರಿಗಳನ್ನು, ಅಧಿಕಾರಿಗಳನ್ನು ತನಿಖೆ ನಡೆಸಿ ಅವರು ಸಂಪಾದಿಸಿರುವ ಅಕ್ರಮ ಸಂಪತ್ತನ್ನು ವಶಪಡಿಸಿಕೊಂಡರೆ ಜನರಿಂದ ಹಲವು ವರ್ಷ ತೆರಿಗೆ ಸಂಗ್ರಹಿಸಬೇಕಾಗಿ ಬರಲಿಕ್ಕಿಲ್ಲ. ವಿದೇಶಗಳಿಂದ ಕಪ್ಪು ಹಣ ಬಾರದಿದ್ದರೂ ಸದ್ಯದ ಪರಿಸ್ಥಿತಿ ಸುಧಾರಣೆ ಆಗಬಹುದು.

ಮೋದಿಜೀಯವರೇ, ನೀವು ಕರೆ ಕೊಟ್ಟರೆ ನಿಮ್ಮ ಅಭಿಮಾನಿಗಳು, ಕಾರ್ಯಕರ್ತರು ಊರಿನಲ್ಲಿ ಲಂಚ ಭ್ರಷ್ಟಾಚಾರವನ್ನು ಕೊನೆಗೊಳಿಸುತ್ತಾರೆ.

ಕೇಂದ್ರ ಸರಕಾರದಲ್ಲಿ ಲಂಚ, ಭ್ರಷ್ಟಾಚಾರ ಕಡಿಮೆ ಆಗಿದೆ. ಕಚೇರಿಗಳಲ್ಲಿ ಪಾರದರ್ಶಕ ಶೀಘ್ರ ಕೆಲಸ ಆಗುತ್ತಿದೆ ಎಂಬುದನ್ನು ಸರಕಾರದ ವಿರೋಧಿಗಳು, ನಿಮ್ಮ ಕಡು ವಿರೋಧಿಗಳು ಒಪ್ಪುತ್ತಿದ್ದಾರೆ. ಆದರೆ ಕರ್ನಾಟಕ ಸರಕಾರದಲ್ಲಿ ಲಂಚ, ಭ್ರಷ್ಟಾಚಾರ ಹಲವು ಪಟ್ಟು ಜಾಸ್ತಿಯಾಗಿದೆ ಎಂದು ಸರಕಾರದ ಪರ ಇರುವವರು ನಿಮ್ಮ ಅಭಿಮಾನಿಗಳು ಹೇಳುತ್ತಿದ್ದಾರೆ. ಅದನ್ನು ನೀವೇ ಸರಿಪಡಿಸಬೇಕು. ಮೋದೀಜೀಯವರೇ, ಲಂಚ, ಭ್ರಷ್ಟಾಚಾರ ಮುಕ್ತ ಊರು ನಮ್ಮದಾದರೆ ಅದುವೇ ನಿಜವಾದ ಸ್ವಾತಂತ್ರ್ಯ ಎಂಬುದನ್ನು ತಾವು ಜನರಿಗೆ ತಿಳಿಸಿದರೆ ಜನರು ವ್ಯಾಪಕವಾಗಿ ಹೋರಾಡುವುದು, ಪ್ರಯತ್ನ ಪಡುವುದು ಖಂಡಿತ. ನೀವು ಒಂದು ಕರೆ ಕೊಟ್ಟರೆ ನಿಮ್ಮ ದೇವ ದುರ್ಲಭ ಕಾರ್ಯಕರ್ತರಿರುವಾಗ, ದೇಶದಾದ್ಯಂತ ಅಭಿಮಾನಿಗಳಿರುವಾಗ ಪ್ರತೀ ಕಚೇರಿಯಲ್ಲಿಯ ಲಂಚ, ಭ್ರಷ್ಟಾಚಾರದ ಪ್ರಕರಣ ನಿಲ್ಲಿಸಬಹುದು. ಅಽಕಾರಿಗಳು, ಜನಪ್ರತಿನಿಧಿಗಳು ಜನರಿಗೆ ಉತ್ತಮ ಸೇವೆ ನೀಡುವಂತೆ ಮಾಡಬಹುದು.ಜಗತ್ತಿನಲ್ಲಿ ಲಂಚ, ಭ್ರಷ್ಟಾಚಾರದ ಪ್ರಮಾಣದಲ್ಲಿ 85ನೇ ಸ್ಥಾನ ಪಡೆದಿರುವ ನಮ್ಮ ದೇಶವನ್ನು ಲಂಚ, ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡಬಹುದು. ಊರಿನ ಅಭಿವೃದ್ಧಿಗೆ ಅದೇ ಒಂದು ಪ್ರಮುಖ ಕಾರಣವಾಗಬಹುದು. ಅದಕ್ಕಿಂತೆಲ್ಲಾ ಮುಖ್ಯವಾಗಿ ಜನರ ಕಷ್ಟ ಭವಣೆಗಳನ್ನು ನಿವಾರಿಸಬಹುದು. ಕಣ್ಣೀರು ಒರೆಸಬಹುದು. ಅವರ ಸಂತೋಷಕ್ಕೆ ಕಾರಣವಾಗಬಹುದು. ಅದರ ಯಶಸ್ವಿಗಾಗಿ ಲಂಚ, ಭ್ರಷ್ಟಾಚಾರದ ಅನುಭವಗಳನ್ನು ಜನರು ಸಾರ್ವಜನಿಕವಾಗಿ ಹೇಳುವುದರೊಂದಿಗೆ ನಿಮಗೂ ನೇರವಾಗಿ ಬರೆಯುವಂತೆ ಕರೆ ಕೊಡುತ್ತಿದ್ದೇನೆ.

ನಮ್ಮ ಜನ ಪ್ರತಿನಿಧಿಗಳು ನಿಜವಾದ ಅರ್ಥದಲ್ಲಿ ಜನಪ್ರತಿನಿಧಿಗಳಾದರೆ ಜನರ ಸಮಸ್ಯೆ ಪರಿಹಾರವಾಗುತ್ತದೆ. ನೀವೇ ಗೆಲ್ಲಿಸುವುದು ಎಂದಾದರೆ ಅವರು ನಿಮ್ಮ ಸೇವಕರಾಗುತ್ತಾರೆ, ಜನರ ಸೇವಕರಾಗುವುದಿಲ್ಲ.

ಮಹಾತ್ಮಗಾಂಧಿಯವರ ಗ್ರಾಮ ಸ್ವರಾಜ್ಯದ, ಹಳ್ಳಿಯಿಂದ ಡೆಲ್ಲಿಗೆ ಆಡಳಿತದ ಬಗ್ಗೆ ನನ್ನ ಅಭಿಪ್ರಾಯ, ವಿಚಾರಧಾರೆಗಳನ್ನು ನಿಮ್ಮ ಮತ್ತು ರಾಹುಲ್ ಗಾಂಧಿಯವರ ಮುಂದಿಡಲು ಆ ಮೂಲಕ ದೇಶಕ್ಕೆ ತಲುಪುವಂತೆ ಮಾಡಲು ಪ್ರಯತ್ನ ಪಟ್ಟಿದ್ದೇನೆ. ಅದಕ್ಕಾಗಿ ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ರಾಹುಲ್‌ಗಾಂಧಿಯವರ ಕ್ಷೇತ್ರ ಅಮೇಥಿಯಲ್ಲಿ ಸ್ಪರ್ಧಿಸಿದ್ದೇನೆ. ನಿಮ್ಮ ಕ್ಷೇತ್ರ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ್ದೆ. ಅದು ತಿರಸ್ಕೃತಗೊಂಡಿದ್ದರೂ ನನ್ನ ವಿಚಾರಧಾರೆಯನ್ನು ನಿಮ್ಮ ಮುಂದಿಡುವ ಪ್ರಯತ್ನವನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ನಮ್ಮ ಕ್ಷೇತ್ರದ ಓಟು ನಮ್ಮ ಪ್ರತಿನಿಽಗೇ ಮತ್ತು ಅವನ ಸಾಮರ್ಥ್ಯಕ್ಕೆ ಎಂದಾಗಬೇಕು. ನಿಮಗೇ ಎಂದಾಗಬಾರದು ಕೆಲಸ ನಿಮ್ಮ ನೇತೃತ್ವದಲ್ಲಿ ಎಂದಾಗಬೇಕು ಎಂದು ಅಂದೂ ಪ್ರತಿಪಾಽಸಿದ್ದೇನೆ ಇಂದೂ ಮಾಡುತ್ತಿದ್ದೇನೆ. ಯಾಕೆಂದರೆ ಅವರನ್ನು ಗೆಲ್ಲಿಸಿರುವುದು ನೀವು. ನಿಮಗೇ ಜನರು ಓಟು ನೀಡಿದ್ದು, ಅವರಿಗಾಗಿ ಅಲ್ಲ ಎಂದು ಅವರಿಗೆ ಗೊತ್ತಿದೆ. ಆದುದರಿಂದ ನಿಮ್ಮ ಹೆಸರಿನಲ್ಲಿ ಗೆದ್ದ ನಮ್ಮ ಜನಪ್ರತಿನಿಧಿಗಳು ನಿಮ್ಮನ್ನು ಮಾತ್ರ ಓಲೈಸುತ್ತಾರೆ. ಜನರನ್ನು ಓಲೈಸಬೇಕಿಲ್ಲ ಎಂದು ತಿಳಿದು ಜನರನ್ನು ಕಡೆಗಣಿಸಬಹುದು. ಅದು ಎಲ್ಲಾ ಪಕ್ಷದ ನಾಯಕರ ಹೆಸರಲ್ಲಿ ಗೆದ್ದ ಜನಪ್ರತಿನಿಧಿಗಳಿಗೆ ಅನ್ವಯವಾಗುತ್ತದೆ. ನೀವೇ ಗೆಲ್ಲಿಸುವುದು ಎಂದಾದರೆ ಅರ್ಹತೆ ಇಲ್ಲದವ, ಜನರ ಬೆಂಬಲ ಇಲ್ಲದವನು ಆಯ್ಕೆಯಾಗುತ್ತಾನೆ. ಅರ್ಹತೆ ಇದ್ದರೂ ಜನರ ಪ್ರತಿನಿಧಿಯ ಕೆಲಸದ ಜವಾಬ್ದಾರಿ ಕಳೆದುಕೊಳ್ಳುತ್ತಾನೆ. ಒಟ್ಟಿನಲ್ಲಿ ಹೇಳುವುದಾದರೆ ನೀವು ಹೇಳಿದಂತೆ ಕೇಳುತ್ತಾನೆ. ನಿಮ್ಮ ಸೇವಕನಾಗುತ್ತಾನೆ, ಜನರ ಆಶೋತ್ತರಗಳಿಗೆ ಸ್ಪಂದಿಸುವ ಜನರ ಸೇವಕನಾಗುವುದಿಲ್ಲ.  ಆದುದರಿಂದ ನಿಜವಾದ ಅರ್ಥದಲ್ಲಿ ಅವರು ನಮ್ಮ ಜನಪ್ರತಿನಿಧಿಗಳಾಗುವುದಿಲ್ಲ, ನಮ್ಮ ಹಿತ ಕಾಪಾಡಲು ಸಾಧ್ಯವಾಗುವುದಿಲ್ಲ. ಅವರು ನಿಜವಾದ ಅರ್ಥದಲ್ಲಿ ನಮ್ಮಿಂದ ನಮಗಾಗಿ ಎಂದೇ ಆಯ್ಕೆಯಾಗುವ ಜನಪ್ರತಿನಿಧಿಗಳಾದರೆ ನಮ್ಮ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಗಂಭೀರ ವಿಷಯವನ್ನು ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ.

ಸುದ್ದಿ ಕೇಂದ್ರದಿಂದ ಕೃಷಿಕರಿಗೆ ಸಂಪೂರ್ಣ ಸ್ವಾತಂತ್ರ್ಯದ ಘೋಷಣೆ

ಜನರಿಂದ ‘ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ’ ದೇಶದಲ್ಲಿಯೇ ವಿಶೇಷ ಕಾರ್ಯಕ್ರಮದಿಂದ ಲಂಚದ ಪ್ರಮಾಣ ಕಡಿಮೆಯಾಗುತ್ತಿದೆ.


ನಾವು ಕಳೆದ ಒಂದು ವರ್ಷದಿಂದ ‘ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ’ ಎಂಬ ಘೋಷಣೆಯೊಂದಿಗೆ ಪ್ರತೀ ಇಲಾಖೆಯಲ್ಲಿ, ಊರಿನಲ್ಲಿ ಉತ್ತಮ ಕೆಲಸ ಮಾಡುವ ಅಧಿಕಾರಿಗಳನ್ನು, ಜನಪ್ರತಿನಿಽಗಳನ್ನು ಗುರುತಿಸುವಂತೆ ಜನರಿಗೆ ಕರೆ ನೀಡಿದ್ದೇವೆ. ಅದರ ಪರಿಣಾಮವಾಗಿ ದೇಶದಲ್ಲಿ ಎಲ್ಲಿಯೂ ನಡೆಯದಂತಹ ವಿಶೇಷ ಘಟನೆ ಇಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ನಡೆದಿದೆ. ಲಂಚ ರಹಿತ ಉತ್ತಮ ಸೇವೆ ನೀಡುವ ಅಧಿಕಾರಿಗಳೆಂದು ಸುಳ್ಯ ತಾಲೂಕಿನಲ್ಲಿ 29, ಬೆಳ್ತಂಗಡಿಯಲ್ಲಿ 33, ಪುತ್ತೂರಿನಲ್ಲಿ 39 ಅಧಿಕಾರಿಗಳನ್ನು ಜನರು ಹೆಮ್ಮೆಯಿಂದ ಗುರುತಿಸಿದ್ದಾರೆ. ಅದನ್ನು ಊರಿಗೇ ಹೆಮ್ಮೆಯ ವಿಷಯವೆಂದು ಪರಿಗಣಿಸಿ ಅವರ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದೇವೆ. ಅವರಿಗೆ ಸಾರ್ವಜನಿಕರು ಅಪಾರ ಗೌರವ ನೀಡಿದ್ದಾರೆ, ಸನ್ಮಾನಿಸಿದ್ದಾರೆ. ಆ ಪಟ್ಟಿ ಬೆಳೆಯುತ್ತಾ ಇದೆ. ಇದರಿಂದ ಲಂಚಕೋರ ಅಽಕಾರಿಗಳಿಗೆ ಪರೋಕ್ಷವಾಗಿ ಬಹಿಷ್ಕಾರದ ಶಿಕ್ಷೆ ನೀಡಿದಂತಾಗಿದೆ. ಅದು ಈ ಮೂರು ತಾಲೂಕುಗಳಲ್ಲಿ ಉತ್ತಮ ಪರಿಣಾಮ ಬೀರಿದೆ. ಲಂಚಕೋರ ಅಧಿಕಾರಿಗಳು ಲಂಚ ರಹಿತ ಉತ್ತಮ ಸೇವೆ ನೀಡುವ ಅಽಕಾರಿಗಳಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಲಂಚ, ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗಿದೆ. ಜನರಿಗೆ ಸಣ್ಣ ಪ್ರಮಾಣದ ನೆಮ್ಮದಿ ನೀಡಿದೆ. ಅದನ್ನು ಇತರ ಊರುಗಳಿಗೂ ವಿಸ್ತರಿಸಬೇಕೆಂದು ಯೋಚಿಸಿದ್ದೇವೆ. ಅದಕ್ಕೆ ಸರಕಾರದ ಮತ್ತು ಜನರ ಬೆಂಬಲ ಬೇಕಾಗಿದೆ. ಅದಕ್ಕಾಗಿ ನಾವು ಮೇಲೆ ಹೇಳಿರುವ ವಿಷಯವನ್ನು, ಪರಿಣಾಮವನ್ನು ತಾವು ಪರಿಶೀಲಿಸಿ,ತಿಳಿದು ಬೆಂಬಲ ನೀಡಬೇಕಾಗಿ ವಿನಂತಿ ಮಾಡುತ್ತಿದ್ದೇನೆ. ಅದರೊಂದಿಗೆ ಕೃಷಿಕರಿಗೆ ಮನೆ ಬಾಗಿಲಿಗೆ ಸೇವೆ ಒದಗಿಸುವ, ಅವರ ಬೆಳೆಗಳಿಗೆ, ಸೇವೆಗಳಿಗೆ ಉತ್ತಮ ದರ ದೊರಕುವಂತೆ ಮಾಡುವ, ಕೃಷಿಕರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಅವರ ಹಿಂದೆ ನಿಂತು ಪ್ರಯತ್ನಿಸುವ ‘ಸುದ್ದಿ’ ಕೃಷಿ ಮಾಹಿತಿ ಮತ್ತು ಸೇವಾ ಕೇಂದ್ರ ಎಂಬ ಕೇಂದ್ರಗಳನ್ನು ದ.ಕ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮತ್ತು ಗ್ರಾಮ ಮಟ್ಟಗಳಲ್ಲಿ ತೆರೆಯಲಿದ್ದೇವೆ. ನಿಮ್ಮ ಆಶಯದ ಮತ್ತು ಸರಕಾರದ ಎಲ್ಲಾ ಸವಲತ್ತುಗಳನ್ನು ತಲುಪಿಸುವ ಪ್ರಯತ್ನವನ್ನೂ ಮಾಡಲಿದ್ದೇವೆ. ಆ ಮೂಲಕ ಕೃಷಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ಎಂಬ ಘೋಷಣೆಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಲು ಸಂತೋಷ ಪಡುತ್ತಿದ್ದೇನೆ. -ಸಂ.

LEAVE A REPLY

Please enter your comment!
Please enter your name here