ಬಂಟ್ವಾಳ : ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಬೊಳ್ಳಾಯಿ ಸಜೀಪಮೂಡ ಇದರ 8ನೇ ಮಾರ್ನಬೈಲು ಶಾಖೆಯನ್ನು ಸಜೀಪಮುನ್ನೂರು ಗ್ರಾ.ಪಂ. ಕಚೇರಿ ಮುಂಭಾಗದ ಕಟ್ಟಡದಲ್ಲಿ ಜು. 15ರಂದು ಶ್ರೀ ಕ್ಷೇತ್ರ ನಂದಾವರದ ಪ್ರಧಾನ ಅರ್ಚಕ ವೇ.ಮೂ. ಮಹೇಶ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಘದ ಕಚೇರಿ ಕಟ್ಟಡವನ್ನು ಸಜೀಪ ಮುನ್ನೂರು ಗ್ರಾ.ಪಂ.ಅಧ್ಯಕ್ಷೆ ಸಬೀನಾ ಟೇಪ್ ಕತ್ತರಿಸಿ ಉದ್ಘಾಟಿಸಿದರು. ಭದ್ರತಾ ಕೊಠಡಿಯನ್ನು, ನೌಕದಳದ ಮಾಜಿ ಸೈನಿಕ ಅಲೆಗ್ಸಾಂಡರ್ ಲೋಬೋ, ಗಣಕ ಯಂತ್ರವನ್ನು ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಅರ್ಚಕ ಕೇಶವ ಶಾಂತಿ ನಾಟಿ ಉದ್ಘಾಟಿಸಿ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಸ್ವಸಹಾಯ ಸಂಘದ ಮೂಲಕ ಮಹಿಳೆಯರಿಗೆ ಹೆಚ್ಚಿನ ಸಾಲ ವಿತರಿಸುವ ಕ್ರಮ ಕೈಗೊಂಡಿದೆ. ತನ್ನ ಸದಸ್ಯರಿಗೆ ಶೇ. 25 ಡಿವಿಡೆಂಡ್ ಘೋಷಿಸಿದೆ. ಅಲ್ಲದೆ ಉತ್ತಮ ಬಡ್ಡಿಯನ್ನು ಠೇವಣಿದಾರರಿಗೆ ನೀಡುವುದಾಗಿ ಘೋಷಿಸಿದರು. ನಮ್ಮಲ್ಲಿ ಎಲ್ಲಾ ಸಿಬಂದಿಗಳು ಮಹಿಳೆಯರಾಗಿದ್ದು ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ. ಇನ್ನಷ್ಟು ಶಾಖೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಆರಂಭಿಸುವ ಮೂಲಕ ಉದ್ಯೋಗ ಸೃಷ್ಟಿಯ ಉದ್ದೇಶವನ್ನು ಸಂಘವು ಹೊಂದಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಠೇವಣಿಪತ್ರ, ಖಾತೆ ಪುಸ್ತಕಗಳನ್ನು ವಿತರಿಸಲಾಯಿತು.
ಮಾರ್ನಬೈಲು ಬಿಲ್ಲವ ಸೇವಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಗನವಲಚ್ಚಿಲ್, ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಚಡ ಚೇಳೂರು, ಅಶೋಕ ಪೂಜಾರಿ ಕೋಮಾಲಿ, ಕೆ. ಸುಜಾತ ಎಂ., ವಾಣಿ ವಸಂತ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಮತಾ ಜಿ, ಶಾಖಾ ವ್ಯವಸ್ಥಾಪಕಿ ನಿಶ್ಮಿತಾ ಕೆ. ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ ಸ್ವಾಗತಿಸಿದರು. .ಜಯಶಂಕರ ಕಾನ್ಸಾಲೆ ವಂದಿಸಿದರು. ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರ್ವಹಿಸಿದರು.