ಪುತ್ತೂರು:ಸಾರ್ವಜನಿಕರ್‍ಯಾರೂ ಕಚೇರಿ ಕೆಲಸಗಳಿಗಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸುವ ಅಗತ್ಯವಿಲ್ಲ.ಈ ಬಗ್ಗೆ ಯಾವುದಾದರೂ ಕಚೇರಿಗಳಲ್ಲಿ ತಮಗೆ ಸ್ಪಂದಿಸುತ್ತಿಲ್ಲ, ಸೇವೆ ನೀಡುತ್ತಿಲ್ಲ ಎನ್ನುವ ದೂರುಗಳಿದ್ದರೆ ನಮ್ಮ ಗಮನಕ್ಕೆ ತಂದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್ ತಿಳಿಸಿದ್ದಾರೆ.`ಸುದ್ದಿ’ಯೊಂದಿಗೆ ಮಾತನಾಡಿದ ಅವರು, ಕೆಲವೊಂದು ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯಿದೆ. ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎನ್ನುವ ದೂರುಗಳು ಕೇಳಿಬರುತ್ತಿದೆ.
ಈ ಬಗ್ಗೆ `ಸುದ್ದಿ’ಯ ಮೂಲಕ ಜನಾಂದೋಲನ ಕಾರ್ಯಕ್ರಮ ನಡೆಯುತ್ತಿದೆ. ಯಾವುದೇ ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸಬೇಕಾದ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲಾ ಕಚೇರಿಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆಗಳನ್ನು ಮಾಡಿಕೊಂಡಿದ್ದೇವೆ. ಸಕಾಲ, ಅಟಲ್ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ ಹೀಗೆ ಹಲವಾರು ವಿಧಾನಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅನೇಕ ಯೋಜನೆಗಳ ಮೂಲಕ ನಿಗದಿತ ಅವಧಿಯಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸಲು ಪ್ರಯತ್ನ ಮಾಡುತ್ತಿದ್ದೇವೆ. ಉದ್ದೇಶಪೂರ್ವಕವಾಗಿ ಮಧ್ಯವರ್ತಿಗಳು ಮುಗ್ಧ ಸಾರ್ವಜನಿಕರ ಕೆಲಸದಲ್ಲಿ ಮಧ್ಯಪ್ರವೇಶಿಸಿ ತಪ್ಪು ತಿಳುವಳಿಕೆ ನೀಡಿ ಅವರಿಂದ ಹಣ ವಸೂಲಿ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ.ಹೀಗಾಗಿ ಸಾರ್ವಜನಿಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.ನನ್ನ ಸೇವೆಯನ್ನು ನಾನೇ ನೇರವಾಗಿ ಪಡೆದುಕೊಳ್ಳುತ್ತೇನೆ ಎನ್ನುವ ನೆಲೆಯಲ್ಲಿ ಬರಬೇಕು ಎಂದು ಡಾ|ಕುಮಾರ್ ಹೇಳಿದ್ದಾರೆ