- ಗುಲಾಮಗಿರಿ ಬಿಟ್ಟು ಜನಶಕ್ತಿಯ ಪ್ರದರ್ಶನವಾದರೆ ಲಂಚ ಮುಕ್ತ ಊರು, ತಾಲೂಕು, ಜಿಲ್ಲೆ ಖಂಡಿತ
ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ-ಉತ್ತಮ ಸೇವೆಗೆ ಪುರಸ್ಕಾರ. ಲಂಚ, ಭ್ರಷ್ಟಾಚಾರ ಮುಕ್ತ ಊರು, ತಾಲೂಕು, ಜಿಲ್ಲೆ ನಮ್ಮದಾಗಲಿ ಘೋಷಣೆ ಎಲ್ಲರ ಮನಸ್ಸು ಮುಟ್ಟಿದೆ. ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ಉತ್ತಮ ಪರಿಣಾಮ ಬೀರಿದೆ. ಜನರಿಗೆ ಧೈರ್ಯ ತುಂಬಿದೆ. ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕುಗಳಲ್ಲಿ ಹಲವಾರು ಕಡೆ ಜನರು ಸೇರಿ ಲಂಚ ಭ್ರಷ್ಟಾಚಾರ ದಹಿಸಿ ತಮ್ಮ ರೋಷವನ್ನು ತೋರಿಸಿದ್ದಾರೆ. ಮಂಗಳೂರಿನಲ್ಲಿ ಕೂಡ ಘೋಷಣೆ ಮತ್ತು ಪ್ರತಿಜ್ಞೆ ನಡೆದಿದೆ. ಸುದ್ದಿ ಜನಾಂದೋಲನದ ಫಲಕಗಳನ್ನು ಅಲ್ಲಲ್ಲಿ ಅಳವಡಿಸಿಕೊಳ್ಳುವ ಮೂಲಕ ಜನರು ಜಾಗೃತರಾಗಿದ್ದಾರೆ. ಲಂಚ ಭ್ರಷ್ಟಾಚಾರದ ವಿರುದ್ಧ ಘೋಷಣೆ ಅಲ್ಲಲ್ಲಿ ಸಭಾಸಮಾರಂಭಗಳಲ್ಲಿ, ಸಂಘ ಸಂಸ್ಥೆಗಳ ಸಭೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ನಡೆಯಬೇಕು. ಅಲ್ಲಲ್ಲಿ ಆ ಬಗ್ಗೆ ಬ್ಯಾನರ್‌ಗಳು ಬಿದ್ದು ಇನ್ನೂ ಹೆಚ್ಚಿನ ಜನಜಾಗೃತಿ ಮೂಡಬೇಕು.
ಅದು ಪೂರ್ಣ ಯಶಸ್ವಿಯಾಗಿ ನಮಗೆ ಉತ್ತಮ ಸೇವೆ ಸಿಗಬೇಕಾದರೆ ನಾವು ಪ್ರತೀ ಇಲಾಖೆಗಳಲ್ಲಿ ಮತ್ತು ಊರಿನಲ್ಲಿರುವ ಉತ್ತಮ ಜನಸೇವಕರನ್ನು ಗುರುತಿಸಿ ಗೌರವಿಸಬೇಕು. ಅದು ನಿರಂತರ ನಡೆಯಬೇಕು. ಪ್ರತೀ ಇಲಾಖೆಯಲ್ಲಿ ಅಲ್ಲಿಯ ಸೇವೆಗಳಿಗಾಗಿ ಸಿಬ್ಬಂದಿಗಳ ಕುಂದು ಕೊರತೆಗಳನ್ನು ನಿವಾರಿಸುವ ಪ್ರಯತ್ನ ನಡೆಯಬೇಕು. ಅದಕ್ಕಾಗಿ ನಾವು ಸಮಾಜ, ಸಂಘ ಸಂಸ್ಥೆಗಳು, ಜನಪ್ರತಿನಿಧಿ ಶಾಸಕರೊಂದಿಗೆ ಕೈ ಜೋಡಿಸಿ ಇಲಾಖೆಗಳ ಸಮಸ್ಯೆಗಳನ್ನು ಬಗೆಹರಿಸಿ ಉತ್ತಮ ಸೇವೆ ನೀಡುವ ವಾತಾವರಣ ಸೃಷ್ಠಿ ಮಾಡಬೇಕು. ಇಲಾಖೆಗಳಲ್ಲಿ ಜನರಿಗೆ ಹೆಲ್ಪ್ ಡೆಸ್ಕ್‌ಗಳನ್ನು ಒದಗಿಸಬೇಕು. ಮಹಾತ್ಮ ಗಾಂಧಿಯವರ ಆಶಯದಂತೆ ಗ್ರಾಮ ಸ್ವರಾಜ್ಯದ ಆಡಳಿತದ ‘ನಮ್ಮಿಂದ ನಮಗಾಗಿ ನಮ್ಮದೇ ಆಡಳಿತ’ ಎಂಬುವುದನ್ನು ಪ್ರತೀ ಊರಿನಲ್ಲಿ ಆಚರಣೆಗೆ ತಂದು ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಿ ಲಂಚ ಭ್ರಷ್ಟಾಚಾರ ಮುಕ್ತ ಊರನ್ನಾಗಿ ಮಾಡಿಸಲು ಪ್ರಯತ್ನಿಸೋಣ. ಅದಕ್ಕಾಗಿ ಗ್ರಾಮ ಗ್ರಾಮಗಳಲ್ಲಿ ಸಮಿತಿ ರಚಿಸೋಣ. ಗುಲಾಮಗಿರಿಯಿಂದ ಹೊರಗೆ ಬಂದು ಜನರ ಶಕ್ತಿ ಪ್ರದರ್ಶನವಾದರೆ ಮೂರು ತಿಂಗಳಲ್ಲಿ ನಮ್ಮ ಊರು, ತಾಲೂಕು ಲಂಚ ಭ್ರಷ್ಟಾಚಾರ ಮುಕ್ತವಾಗುವುದು ಖಂಡಿತ. ಅಲ್ಲಿಯವರೆಗೆ ಸುದ್ದಿ ಜನಾಂದೋಲನವನ್ನು ಮುಂದುವರಿಸಲು ಎಲ್ಲರೂ ಕೈ ಜೋಡಿಸೋಣ.