- ಕೃಷಿಕರ ಮನೆ ಬಾಗಿಲಿಗೆ ಸೇವೆ, ಮಾರಾಟ, ಖರೀದಿ, ಉಪಕರಣಗಳ, ಇಲಾಖೆಗಳ, ತಜ್ಞರ ಮಾಹಿತಿ
- ಕೃಷಿಕರಿಗೆ ಸ್ವಾವಲಂಬಿ, ಸ್ವಾಭಿಮಾನದ, ನೆಮ್ಮದಿಯ, ಸಮೃದ್ಧಿಯ, ಸಹಕಾರದ, ಸಾಮರಸ್ಯದ, ಲಂಚ, ಭ್ರಷ್ಟಾಚಾರ ರಹಿತ ಬದುಕು-ಸುದ್ದಿಯ ಯೋಚನೆ, ಯೋಜನೆ
75ನೇ ವರ್ಷದ ಅಮೃತೋತ್ಸವದ ಕೊನೆಯ ದಿನ ಇದೇ ಆಗಸ್ಟ್ 15-2022ರಂದು ಸುದ್ದಿ ಕೃಷಿ ಮಾಹಿತಿ ಮತ್ತು ಸೇವಾ ಕೇಂದ್ರ ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ಟೋಪರ್ ಕಾಂಪ್ಲೆಕ್ಸ್‌ನಲ್ಲಿ ತೆರೆಯಲಾಗಿದೆ. ಸುಳ್ಯದಲ್ಲಿ ಶ್ರೀಹರಿ ಕಾಂಪ್ಲೆಕ್ಸ್‌ನಲ್ಲಿ ಮುಂದಿನ ತಿಂಗಳು ಕಛೇರಿ ತೆರೆಯಲಾಗುವುದು. ಕೃಷಿಕರಿಗೆ ಸ್ವಾವಲಂಬಿ, ಸ್ವಾಭಿಮಾನದ ಜೀವನಕ್ಕೆ ಬೆಂಬಲ, ಸಹಾಯ ನೀಡಿ ಲಂಚ, ಭ್ರಷ್ಟಾಚಾರ ರಹಿತ ನೈಜ ಸ್ವಾತಂತ್ರ್ಯ ದೊರಕಿಸಿ ಕೊಡುವುದು ಅದರ ಉದ್ಧೇಶ ಎಂದು ಘೋಷಿಸಲಾಗಿದೆ. ಕೃಷಿಕರ ಬಗೆಗಿನ ಯೋಚನೆ, ಯೋಜನೆಗಳು ಯಾರ ವಿರುದ್ಧವೂ ಅಲ್ಲ. ಯಾವ ಪಕ್ಷದ ಪರ ಅಥವಾ ವಿರುದ್ಧವೂ ಅಲ್ಲ. ಕೃಷಿಕರ ಪರವಾಗಿದ್ದು ಅವರ ಹಿತಾಸಕ್ತಿಯನ್ನು ಕಾಪಾಡುವ ಜನಪರ ಅಭಿವೃದ್ಧಿಯ ಉದ್ಧೇಶ ಹೊಂದಿದೆ.
ನಮ್ಮ ದೇಶ ಕೃಷಿ ಪ್ರಧಾನ ದೇಶ. ಶೇ.೭೫ಕ್ಕಿಂತ ಹೆಚ್ಚುಜನ ಕೃಷಿಕರು ಮತ್ತು ಕೃಷಿ ಅವಲಂಬಿತ ಕಸುಬುದಾರರು. ಕೃಷಿಯೇ ನಮ್ಮ ದೇಶದ ಬೆನ್ನೆಲುಬು ಎಂದಿದ್ದರೂ ದೊಡ್ಡ ದೊಡ್ಡ ಕೃಷಿಕರನ್ನು ಬಿಟ್ಟರೆ ಹೆಚ್ಚಿನ ಕೃಷಿಕರನ್ನು ಕಸುಬುದಾರರನ್ನು ದ್ವಿತೀಯ ದರ್ಜೆಯ ಪ್ರಜೆಗಳಂತೆ ನೋಡಿಕೊಳ್ಳಲಾಗುತ್ತದೆ. ಸಮಾಜದಲ್ಲಿ ಗುರುತಿಸಿಕೊಳ್ಳಲು, ಗೌರವ ಪಡೆಯಲು ಕೃಷಿಕ ಪದ ಸಾಕಾಗುವುದಿಲ್ಲ. ಅದಕ್ಕೆ ಪಂಚಾಯತ್ ಸದಸ್ಯ, ತಾ.ಪಂ. ಸದಸ್ಯ, ರಾಜಕೀಯ ನೇತಾರ, ಸಂಘಟನೆಯ ಸದಸ್ಯ, ಸೊಸೈಟಿ ನಿರ್ದೇಶಕ, ಜೆಸಿ, ಲಯನ್ಸ್, ರೋಟರಿ ಸದಸ್ಯ, ಇಂಜಿನೀಯರ್, ಡಾಕ್ಟರ್‌ಗಳು, ಎಲೆಕ್ಟ್ರೀಶನ್, ವಕೀಲ, ಶಿಕ್ಷಕ, ಬಿಸಿನೆಸ್‌ಮ್ಯಾನ್ ಹೀಗೆ ಏನಾದರೂ ಕಸುಬಿನ ಹೆಸರಿದ್ದರೆ ಅವನಿಗೆ ಗೌರವ, ಮಾನ್ಯತೆ ದೊರಕುತ್ತದೆ. ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರು ‘ಜೈಜವಾನ್-ಜೈಕಿಸಾನ್’ ಎಂಬ ಘೋಷಣೆ ಕೂಗಿದ್ದು ಮರೆತೇ ಹೋಗಿದೆ. ಚುನಾವಣೆಯ ಸಂದರ್ಭದಲ್ಲಿ ಎಲ್ಲರೂ ಕೃಷಿಕರ ಶಾಲುಗಳನ್ನು ಹಾಕಿಕೊಂಡು ಅವರ ಬಗ್ಗೆ ಮಾತನಾಡುತ್ತಾರೆ. ನಂತರ ಮರೆಯುತ್ತಾರೆ. ಕೊರೋನಾ ಸಮಯದಲ್ಲಿ ಕೃಷಿ ಮತ್ತು ಕೃಷಿಕರ ಬೆಲೆ ಗೊತ್ತಾದರೂ ಕೊರೋನಾ ಮುಗಿದ ಕೂಡಲೇ ಹಿಂದಿನಂತೆ ಆಗಿದೆ. ಯಾಕೆಂದರೆ ಕೃಷಿಕ ಎಂಬ ಬ್ಯಾನರ್‌ನ ಅಡಿಯಲ್ಲಿ ಆತ ದುರ್ಬಲನಾಗಿದ್ದಾನೆ. ಕೃಷಿಯಲ್ಲಿ ಆತನಿಗೆ ಲಂಚ ಪಡೆಯಲು ಭ್ರಷ್ಟಾಚಾರದ ಎಸಗಿಸಲು ಅವಕಾಶವೇ ಇಲ್ಲ. ಲಂಚ ಕೊಡದೆ ಆತನ ಯಾವ ಕೆಲಸವೂ ಆಗುವುದಿಲ್ಲ. ಒಂದು ರಿಕ್ಷಾದವರಿಗಾದರು, ಇತರ ಯಾವುದೇ ಕಸುಬಿನವರಿಗೆ ಅನ್ಯಾಯವಾದರೆ ಎದುರಿಸಲು ಶಕ್ತಿ ಇದೆ. ಆದರೆ ಕೃಷಿಕ ಯಾವುದಾದರೂ ಬೇರೆ ಬ್ಯಾನರ್ ಅಡಿ ಇಲ್ಲದಿದ್ದರೆ ಅವನನ್ನು ಯಾರೂ, ಯಾವ ಅಧಿಕಾರಿಯೂ ಕ್ಯಾರ್ ಮಾಡುವುದಿಲ್ಲ.
ಈ ಎಲ್ಲಾ ವಿಷಯಗಳ ಹಿನ್ನೆಲೆಯಲ್ಲಿ ಕೃಷಿಕನಿಗೆ ಅವನ ಮನೆ ಬಾಗಿಲಿಗೆ ಕೃಷಿಯ ಕುರಿತಾದ ಎಲ್ಲಾ ಮಾಹಿತಿಯನ್ನು, ಸೇವೆಗಳನ್ನು, ಕೃಷಿ ತಜ್ಞರ ಅಭಿಪ್ರಾಯಗಳನ್ನು, ತರಬೇತಿಗಳನ್ನು ನೀಡುವುದು ಅಲ್ಲದೆ ಆತನ ಬೆಳೆಗೆ, ಉತ್ಪನ್ನಗಳಿಗೆ ಉತ್ತಮ ದರ ಸಿಗುವಂತೆ ಮಾಡುವ, ಆತ ಖರೀದಿ ಮಾಡುವ ವಸ್ತುಗಳು ಕಡಿಮೆ ದರದಲ್ಲಿ ದೊರಕುವಂತೆ ಮಾಡುವ, ಅನಗತ್ಯ ಶ್ರಮ, ಸಮಯ, ಹಣ ವೆಚ್ಚವಾಗದಂತೆ ನೋಡಿಕೊಳ್ಳುವ, ಸಾಮೂಹಿಕವಾಗಿ ಸಹಕಾರಿ ತತ್ವದಲ್ಲಿ ಕೃಷಿ ಮಾಡುವ, ನೆಮ್ಮದಿಯ, ಸಮೃದ್ಧಿಯ, ಸ್ವಾಭಿಮಾನದ, ಸ್ವಾವಲಂಬಿ, ಸಾಮರಸ್ಯದ ಜೀವನಕ್ಕೆ ಅನುಕೂಲವಾಗುವಂತೆ ಮಾಡುವ ಯೋಜನೆಗೆ ಸುದ್ದಿ ಪ್ರಥಮ ಹೆಜ್ಜೆ ಇರಿಸಿದೆ. ಅದರೊಂದಿಗೆ ಕೃಷಿಕ ಕೊಳ್ಳುವ ಯಾವುದೇ ವಸ್ತುವಿನಲ್ಲಿ, ಪಡೆಯುವ ಯಾವುದೇ ಸೇವೆಯಲ್ಲಿ ಆತನಿಗೆ ಅನ್ಯಾಯವಾಗದಂತೆ ಬಳಕೆದಾರರ ಹಿತ ದೃಷ್ಠಿಯಲ್ಲಿ ಆತನ ಹಿತ ಕಾಯುವ ಕೆಲಸವನ್ನು ಸುದ್ದಿ ಕೇಂದ್ರ ಮಾಡಲಿದೆ. ಯಾವುದೇ ಇಲಾಖೆಯು ಕೃಷಿಕನಿಗೆ ಆತನ ಸೌಲಭ್ಯಗಳಿಂದ ವಂಚಿತನಾಗಿ ಮಾಡದಂತೆ, ಸತಾಯಿಸದಂತೆ ಆತನಿಗೆ ಲಂಚ, ಭ್ರಷ್ಟಾಚಾರ ರಹಿತ ಉತ್ತಮ ಸೇವೆ ದೊರಕುವಂತೆ ಮಾಡುವ, ಲಂಚ ಕೊಟ್ಟರೂ ಅದನ್ನು ವಾಪಸ್ ತೆಗೆಸಿಕೊಡುವ ಪ್ರಯತ್ನಕ್ಕೂ ಕೈ ಹಾಕಲಿದ್ದೇವೆ. ಒಟ್ಟಿನಲ್ಲಿ ಕೃಷಿಕರ ಆಶೋತ್ತರಗಳ ಧ್ವನಿಯಾಗಿ ಸುದ್ದಿ ಕೆಲಸ ಮಾಡಲಿದೆ. ಆ ಮೂಲಕ ಕೃಷಿಕರಿಗೆ ನೈಜ ಸ್ವಾತಂತ್ರ್ಯ ದೊರಕುವಂತೆ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದೇವೆ.
ಆ ರೀತಿ ಮಾಡುವುದರಿಂದ ಕೃಷಿಕನ ಶ್ರಮ, ಹಣ, ಸಮಯ ಹಾಳಾಗದೆ ಪ್ರತಿ ನಿಮಿಷವೂ ಕೃಷಿಗೆ ಉಪಯೋಗವಾಗಿ ಆತನ ಪ್ರತೀ ಇಂಚು ಭೂಮಿ ಉಪಯುಕ್ತವಾಗಿ ಆತನ ಅಭಿವೃದ್ಧಿ ಮಾತ್ರವಲ್ಲ ಊರಿಗೆ ಊರೇ ಅಭಿವೃದ್ಧಿಯಾಗಿ ಎಲ್ಲರೂ ಸಂಪನ್ನರಾಗುತ್ತಾರೆ. ದೇಶವೂ ಸಮೃದ್ಧಿಯಾಗುತ್ತದೆ. ಮಹಾತ್ಮಗಾಂಧಿಯವರ ಊರಿನ ಎಲ್ಲರ ಸಹಭಾಗಿತ್ವದ, ಆಡಳಿತದ, ಗ್ರಾಮ ಸ್ವರಾಜ್ಯದ ಆಶಯ ಸಾಕಾರಗೊಳ್ಳಲಿದೆ ಎಂದು ತಿಳಿಸಲು ಸಂತೋಷ ಪಡುತ್ತೇನೆ. ಅದನ್ನು ಕಾರ್ಯರೂಪಕ್ಕೆ ತರಲು ಪ್ರತೀ ಗ್ರಾಮದಲ್ಲಿ ೧೦-೧೫ ಜನರ ತಂಡ ಈ ಯೋಜನೆಗೆ ಸಹಕಾರ ಕೊಡುವಂತೆ ಕೇಳಿಕೊಳ್ಳುವುದು. ತಾಲೂಕು ಮಟ್ಟದಲ್ಲಿ ೧೦-೧೫ರ ತಂಡ (ಲಯನ್ಸ್, ರೋಟರಿಗಳಂತೆ) ಸ್ವಯಂಸೇವಕರ ನೆಲೆಯಲ್ಲಿ ಸೇವೆಯನ್ನು ನೀಡುವಂತೆ ಮಾಡುವುದಾಗಿ ಯೋಚಿಸಿದ್ದೇವೆ. ಶಾಸಕರು ಮತ್ತು ಎಲ್ಲಾ ಪಕ್ಷದ, ಸಂಘಟನೆಯ ನಾಯಕರುಗಳನ್ನು ಪಕ್ಷ ರಹಿತವಾಗಿ ಚಿಂತಿಸುವಂತೆ ಮಾಡಿ ಈ ಆಂದೋಲನದಲ್ಲಿ ತೊಡಗಿಸಿಕೊಳ್ಳುವ ಯೋಚನೆ ನಮ್ಮಲ್ಲಿದೆ. ಈ ಮೇಲಿನ ಯೋಜನೆಯನ್ನು ಹಂಚಿಕೊಂಡಾಗ ಸುದ್ದಿಯ ಸಿಬ್ಬಂದಿಗಳಿಂದ ಅಪೂರ್ವ ಬೆಂಬಲ ದೊರಕಿದೆ. ಪುತ್ತೂರಿನ ಹಲವು ಪ್ರಮುಖರು ಈ ಯೋಜನೆಗೆ ಆಸಕ್ತಿ ತೋರಿದ್ದಾರೆ. ಶೀಘ್ರದಲ್ಲಿ ಅವರ ಸಭೆ ಕರೆದು ಕೃಷಿಕರಿಗೆ ನೈಜ ಸ್ವಾತಂತ್ರ್ಯದ ಯೋಜನೆಯ ರೂಪುರೇಷೆಗಳನ್ನು ರಚಿಸಲಿದ್ದೇವೆ. ಗಾಂಧಿ ಜಯಂತಿಯ ಮೊದಲು ಇದನ್ನು ತಾಲೂಕು ಮಟ್ಟದಿಂದ ದ.ಕ. ಜಿಲ್ಲಾ ಮಟ್ಟಕ್ಕೆ ವಿಸ್ತರಿಸಬೇಕೆಂದಿದ್ದೇವೆ. ಜನರು ತಮ್ಮಲ್ಲಿರುವ ಕೃಷಿ, ಉತ್ಪನ್ನ, ಸೇವೆಗಳ ಸಂಪೂರ್ಣ ಮಾಹಿತಿಯನ್ನು ಸುದ್ದಿಗೆ ನೀಡಬೇಕಾಗಿ ಕೇಳಿಕೊಂಡು ಅದಕ್ಕೆ ಜನರ ಸಂಪೂರ್ಣ ಸಹಕಾರವನ್ನು ಕೋರುತ್ತಿದ್ದೇವೆ.