ಬಂಟ್ವಾಳ : ಕಲ್ಲಡ್ಕದಲ್ಲಿ ನಡೆಯಿತ್ತಿರುವ ಚತುಷ್ಪದ ರಸ್ತೆಯ ಕಾಮಗಾರಿ ಮತ್ತು ಮಳೆಯ ಕಾರಣದಿಂದ ಹೊಂಡ ಬಿದ್ದಿರುವ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸರಕಾರಿ ಬಸ್ ರಸ್ತೆ ಹೊಂಡವೊಂದಕ್ಕೆ ಬಿದ್ದು ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಯುವಕನೋರ್ವ ಸೊಂಟ ಮುರಿತಕ್ಕೊಳಗಾಗಿದ್ದು ಬಂಟ್ವಾಳ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಸೀಟಿನಿಂದ ಮೇಲಕ್ಕೆ ಎಸೆಯಲ್ಪಟ್ಟು ಬೀಳುವಾಗ ಬಸ್ಸಿನ ಸೀಟಿನ ರಾಡ್ ಸೊಂಟಕ್ಕೆ ಬಡಿದು ಸೊಂಟದಿಂದ ಕೆಳಭಾಗ ಸ್ಪರ್ಶ ಕಳೆದುಕೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ .
ಗಾಯಗೊಂಡ ಯುವಕ ಬೆಳ್ಳಾರೆಯ ತಡೆಗಜೆ ನಿವಾಸಿ ವಿಜಯ ಕುಮಾರ್ ಸುಳ್ಯದ ಮೊಬೈಲ್ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಕೆಲಸದ ನಿಮಿತ್ತ ಮಂಗಳೂರಿಗೆ ತೆರಳಿದ್ದ ವಿಜಯ್ ಕುಮಾರ್ ಮರಳಿ ಬರುವ ವೇಳೆ ಈ ದುರ್ಘಟನೆ ನಡೆದಿದೆ. ವೈದ್ಯರು ಬೆನ್ನುಹುರಿ ಹಾಗೂ ಕುತ್ತಿಗೆ ಸಮೀಪದ ಎಲುಬು ಜಖಂಗೊಂಡಿದೆ ಎಂದು ತಿಳಿಸಿದ್ದಾರೆ. ರಸ್ತೆ ಕಾಮಗಾರಿಯ ಸಮರ್ಪಕ ನಿರ್ವಹಣೆಯ ಕೊರತೆ ಮತ್ತು ಚಾಲಕನ ನಿರ್ಲಕ್ಷ್ಯ ಈ ಅವಘಡಕ್ಕೆ ಕಾರಣವೆಂದು ಜನರಾಡಿಕೊಳ್ಳುತ್ತಿದ್ದು ಬಂಟ್ವಾಳ ಪೋಲಿಸರು ಬಸ್ ಚಾಲಕನ ವಿರುದ್ದ ದೂರು ದಾಖಲಿಸಿಕೊಂಡಿದ್ದಾರೆ. ತಡಗಜೆಯಲ್ಲಿರುವ ವಿಜಯ್ ಪತ್ನಿ ಮತ್ತು ಇಬ್ಬರು ಮಕ್ಕಳು ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ.