16 ಫಿಶ್‌ ಮಿಲ್‌ ಮುಚ್ಚಿಸಿದ ದ.ಕ ಜಿಲ್ಲೆಯ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ..!

0

ಮಂಗಳೂರು: ಜಲ ಮತ್ತು ವಾಯು ಸಂರಕ್ಷಣೆ ಹಾಗೂ ನಿಯಂತ್ರಣಾ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಉಳ್ಳಾಲ ಮತ್ತು ಮುಕ್ಕದಲ್ಲಿ ಕಾರ್ಯಚರಿಸುತ್ತಿದ್ದ 16 ಫಿಶ್ ಮಿಲ್‌ ಕಾರ್ಖಾನೆಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಂತೆ ಮುಚ್ಚಲಾಗಿದೆ. ಫಿಶ್ ಮಿಲ್‌ ಕಾರ್ಖಾನೆಗಳನ್ನು ಮುಚ್ಚುವಂತೆ ದ.ಕ.ಜಿಲ್ಲಾಧಿಕಾರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದೇಶಿಸಿದ್ದಾರೆ. ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೂ ಫಿಶ್ ಮಿಲ್‌ಗಳಿಗೆ ಒದಗಿಸಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಮಂಡಳಿಯ ಆದೇಶ ಪಾಲಿಸಿ ಕ್ರಮ ಕೈಗೊಳ್ಳುವಂತೆ, ಜಿಲ್ಲಾಧಿಕಾರಿಯ ಕಚೇರಿಯಿಂದ ತಹಶೀಲ್ದಾರ್ ಮತ್ತು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಎರಡೂ ಕಡೆ ಸ್ಥಳೀಯ ಕಂದಾಯ ನಿರೀಕ್ಷಕರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿ, ಉಳ್ಳಾಲದ 13 ಮತ್ತು ಮುಕ್ಕದ ಮೂರು ಫಿಶ್ ಮಿಲ್ ಕಾರ್ಖಾನೆಗಳಿಗೆ ಬೀಗ ಜಡಿದರು. ಅಲ್ಲದೆ ಮೆಸ್ಕಾಂ ವಿದ್ಯುತ್ ಸಂಪರ್ಕ ಕಡಿದು ಹಾಕಿದೆ ಎಂದು ತಿಳಿದು ಬಂದಿದೆ. ಫಿಶ್ ಮಿಲ್ ಕಾರ್ಖಾನೆಯ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವ ಮೊದಲು ಶುದ್ಧೀಕರಿಸಲು ಬಯೋ ಫಿಲ್ಟರ್ ಯಂತ್ರ ಅಳವಡಿಸಲು ಸೂಚಿಸಲಾಗಿತ್ತು. ಆದರೆ ಅದನ್ನು ಕೆಲವರು ಅಳವಡಿಸಿಲ್ಲ ಮತ್ತು ಇನ್ನು ಕೆಲವರು ಅಳವಡಿಸಿದರೂ ಕಾರ್ಯಾಚರಿಸುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಮುಚ್ಚಲಾಗಿದೆ.

ಹೈಕೋರ್ಟ್ ಮೊರೆ ಹೋದ ಮಾಲಕರು
ಫಿಶ್ ಮಿಲ್ ಕಾರ್ಖಾನೆಗಳನ್ನು ಮುಚ್ಚಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮದ ವಿರುದ್ಧ ಮಾಲಕರು ರಾಜ್ಯ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಅಲ್ಲದೆ ಮಂಡಳಿಯು ನಿಯಮ ಪಾಲಿಸದೆ ಆದೇಶ ಹೊರಡಿಸಿದೆ ಎಂದು ಫಿಶ್ ಮಿಲ್ ಕಾರ್ಖಾನೆಗಳ ಪರ ನ್ಯಾಯವಾದಿಗಳು ವಾದಿಸಿದ್ದಾರೆ ಎಂದು ತಿಳಿದು ಬಂದಿದೆ.ಆ ಹಿನ್ನೆಲೆಯಲ್ಲಿ ಮುಕ್ಕದ 1 ಫಿಶ್ ಮಿಲ್ ಮುಚ್ಚುವ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here