ಹಂತಕ ಪ್ರವೀಣ್ ಕುಮಾರ್‌ನನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸಬಾರದು – ಪ್ರವೀಣ್ ಪತ್ನಿ, ಸಂಬಂಧಿಕರಿಂದ ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ

0

ಮಂಗಳೂರು : ವಾಮಂಜೂರಿನಲ್ಲಿ ತನ್ನದೇ ಕುಟುಂಬದ ನಾಲ್ವರನ್ನು ಕೊಲೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಪ್ರವೀಣ್ ಕುಮಾರ್ ಇದೀಗ ಸನ್ನಡತೆಯ ಆಧಾರದಲ್ಲಿ ಜೈಲಿನಿಂದ ಬಿಡುಗಡೆಯಾದರೆ ತಮಗೆ ಜೀವಬೆದರಿಕೆಯಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಆತನನ್ನು ಬಿಡುಡೆಗೊಳಿಸಬಾರದು ಎಂದು ಕುಟುಂಬಸ್ಥರು ಆ.9ರಂದು ಮಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಪ್ರವೀಣ್ ಕುಮಾರ್ ಪತ್ನಿ ಹಾಗೂ ಕೊಲೆಗೀಡಾಗಿದ್ದವರ ನಿಕಟ ಸಂಬಂಧಿಗಳು ಸೇರಿದಂತೆ ಸುಮಾರು 50ಕ್ಕೂ ಅಧಿಕ ಮಂದಿ ಇಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್‌ರನ್ನು ಭೇಟಿಯಾದರು. ತನ್ನ ನಿಕಟ ಸಂಬಂಧಿಕರನ್ನೇ ಕೊಲೈಗೈದ ಪ್ರಕರಣದ ಆರೋಪಿ ಪ್ರವೀಣ್ ಕುಮಾರ್ ಸಮಾಜಕ್ಕೆ ಕಂಟಕ ಪ್ರಾಯವಾಗಿದ್ದು, ಆತನನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸಬಾರದು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಕೊಲೆಗೀಡಾಗಿದ್ದ ಅಪ್ಪಿ ಶೇರಿಗಾರ್ತಿಯ ಪುತ್ರ ಸೀತಾರಾಮ ಗುರುಪುರ ಮಾತನಾಡಿ ಉಪ್ಪಿನಂಗಡಿ ಪೆರಿಯಡ್ಕದ ಪ್ರವೀಣ್ ಕುಮಾರ್ ತನ್ನ ತಂದೆಯ ವಯೋವೃದ್ಧೆ ಅಕ್ಕ ಅಪ್ಪಿ ಶೇರಿಗಾರ್ತಿ ಸೇರಿದಂತೆ ಮನೆಯಲ್ಲಿದ್ದ ನಾಲ್ಕು ಮಂದಿಯನ್ನು 1994ರ ಫೆಬ್ರವರಿ 23ರ ಮಧ್ಯರಾತ್ರಿ ಕೊಲೆಗೈದು 80000 ರೂ. ಮೌಲ್ಯದ ಚಿನ್ನಾಭರಣ, ಐದು ಸಾವಿರ ನಗದಿನೊಂದಿಗೆ ಪರಾರಿಯಾಗಿದ್ದ. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆತನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಸಂದರ್ಭದಲ್ಲೂ ಒಂದು ಜೈಲಿನಿಂದ ಮತ್ತೊಂದು ಜೈಲಿಗೆ ಸಾಗಿಸುತ್ತಿದ್ದ ವೇಳೆ ತಪ್ಪಿಸಿಕೊಂಡಿದ್ದ ಆತ ಸುಮಾರು ನಾಲ್ಕು ವರ್ಷಗಳ ಕಾಲ ಗೋವಾದಲ್ಲಿ ತಲೆಮರೆಸಿಕೊಂಡಿದ್ದ. ಕೊಲೆಗೆ ಮುನ್ನವೇ ವಿವಾಹಿತನಾಗಿದ್ದ ಆತ ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಸಂದರ್ಭ ಅಕ್ರಮವಾಗಿ ಮರು ವಿವಾಹವಾಗಿದ್ದ. ಆತನನ್ನು ಪತ್ತೆ ಹಚ್ಚುವಂತೆ ಬಹುಮಾನದ ಘೋಷಣೆಯನ್ನು ಆ ಸಂದರ್ಭ ಮಾಡಲಾಗಿತ್ತು. ಆಗ ಆತನನ್ನು ಎರಡನೆ ವಿವಾಹವಾಗಿದ್ದ ಮಹಿಳೆಯ ತಮ್ಮನೇ ಪೊಲೀಸರಿಗೆ ಮಾಹಿತಿ ನೀಡಿದ ಕಾರಣ ಆತನನ್ನು ಮತ್ತೆ ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಆತನ ಶಿಕ್ಷೆಯನ್ನು ಬಳಿಕ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯಾಗಿಸಿತ್ತು. ಇದರಿಂದ ನಾವೆಲ್ಲಾ ನೆಮ್ಮದಿಯಿಂದ ಬದುಕು ಕಟ್ಟಿಕೊಂಡಿದ್ದೆವು. ಪ್ರವೀಣ್ ಕುಮಾರ್‌ಗೆ ಜೈಲು ಶಿಕ್ಷೆಯಾಗಿದ್ದ ಸಂದರ್ಭ ಆತನನ್ನು ಭೇಟಿ ಮಾಡಲು ಹೋಗಿದ್ದಾಗ ಆತ, ಈಗಾಗಲೇ ನಾಲ್ಕು ಕೊಲೆ ಮಾಡಿ ಜೈಲಿನಲ್ಲಿದ್ದೇನೆ. ಇಲ್ಲಿಂದ ಬಂದು ನಿಮ್ಮನ್ನೂ ಕೊಲೆ ಮಾಡುವುದಾಗಿ ಬೆದರಿಸಿದ್ದ. ಆತನ ಪತ್ನಿಯೂ ಆತಂಕದಲ್ಲೇ ಜೀವನ ನಡೆಸುತ್ತಿದ್ದಾರೆ. ಇದೀಗ ಸನ್ನಡತೆ ಆಧಾರದಲ್ಲಿ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭ ಆತನಿಗೆ ಬಿಡುಗಡೆಗೆ ಸಿದ್ಧತೆ ನಡೆಯುತ್ತಿರುವುದು ನಮಗೆಲ್ಲಾ ಭಯವುಂಟು ಮಾಡಿದೆ. ಯಾವುದೇ ಕಾರಣಕ್ಕೂ ಆತನ ಬಿಡುಗಡೆಯಾಗದಂತೆ ಕ್ರಮ ವಹಿಸಬೇಕು ಎಂದು ಆಯುಕ್ತರಿಗೆ ಮನವಿ ಮಾಡಿದರು.

ನಾನು ಆತನ ಜತೆ ಸ್ವಲ್ಪ ಸಮಯ ಮಾತ್ರ ಜೀವನ ನಡೆಸಿದ್ದು. ಆ ಕೊಲೆಗಡುಕನನ್ನು ಬಿಡಬಾರದೆಂದು ನಾನು ಈ ಹಿಂದೆಯೂ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಆತನನ್ನು ಜೈಲಿನಿಂದ ಬಿಡುಗಡೆ ಮಾಡಬೇಡಿ ಎಂದು ಆರೋಪಿ ಪ್ರವೀಣ್ ಕುಮಾರ್ ಪತ್ನಿ ಕೂಡಾ ಮನವಿ ಮಾಡಿದರು.

ಪ್ರವೀಣ್ ಕುಮಾರ್‌ನನ್ನು ನನ್ನ ತಾಯಿ ಹಾಗೂ ತಂಗಿ, ತಮ್ಮ ಎಲ್ಲರೂ ಅತ್ಯಂತ ಪ್ರೀತಿಯಿಂದ ಆ ದಿನ ಊಟ ನೀಡಿ ಸತ್ಕರಿಸಿದ್ದರು. ಅಂತಹ ಮನೆಗೆ ದ್ರೋಹ ಬಗೆದು ಅತ್ಯಂತ ಅಮಾನುಷವಾಗಿ ಕೊಲೆಗೈದ ಆತನಿಗೆ ಗಲ್ಲು ಶಿಕ್ಷೆಯಾಗಿತ್ತು. ಇದಕ್ಕಾಗಿ ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ. ಇದೀಗ ಸನ್ನಡತೆಯ ಆಧಾರದಲ್ಲಿ ಆತನಿಗೆ ಬಿಡುಗಡೆ ಎಂಬ ಸುದ್ದಿ ನಮಗೆ ಆಘಾತವಾಗಿದೆ. ಇದು ಸಮಾಜದಲ್ಲಿ ತಪ್ಪು ಸಂದೇಶವನ್ನು ನೀಡಲಿದೆ. ಅಂತಹ ಘೋರ ಅಪರಾಧಿಯನ್ನು ಬಿಡುಗಡೆ ಮಾಡುವುದಾದರೆ ಅದು ಭಾರತೀಯರ ಪಾಲಿಗೆ ಕಪ್ಪು ದಿನವಾಗಲಿದೆ. ಆ ರೀತಿ ಆಗದಂತೆ ಕ್ರಮ ವಹಿಸಬೇಕು. ಎಂದು ಸೀತಾರಾಮರವರ ಪುತ್ರಿ ಸ್ನೇಹಾ ಗುರುಪುರ ಒತ್ತಾಯಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಇಂದು ತನ್ನ ಗಮನಕ್ಕೆ ಬಂದಿದ್ದು ಪ್ರವೀಣ್ ಕುಮಾರ್ ಪತ್ನಿ ಸೇರಿದಂತೆ ಕುಟುಂಬಸ್ಥರು ಕೂಡಾ ಆರೋಪಿಯ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ನೊಂದವರ ಹೇಳಿಕೆಗಳನ್ನು ಪಡೆದುಕೊಂಡು ವರದಿ ತಯಾರಿಸಿ ತಕ್ಷಣವೇ ಸಂಬಂಧಪಟ್ಟವರಿಗೆ ಕಳುಹಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.

LEAVE A REPLY

Please enter your comment!
Please enter your name here