ಮಂಗಳೂರು: 1994ರ ಕೊಲೆ ಪಾತಕಿ ವಾಮಂಜೂರು ಪ್ರವೀಣ್ನನ್ನು ಜೈಲಿನಿಂದ ಬಿಡುಗಡೆ ಮಾಡುವ ಬಗ್ಗೆ ಆತನ ಕುಟುಂಬಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಕುಟುಂಬಿಕರ ಹೇಳಿಕೆ ಪಡೆದುಕೊಂಡಿದ್ದಾರೆ. ಪ್ರವೀಣ್ ಕುಮಾರ್ ಸಂಬಂಧಿ ಸೀತಾರಾಮ್ ಸೇರಿದಂತೆ ನಾಲ್ಕು ಮಂದಿ ಮಂಗಳೂರು ಗ್ರಾಮಾಂತರ ಠಾಣೆಗೆ ತೆರಳಿ ತಮ್ಮ ಹೇಳಿಕೆಯನ್ನು ನೀಡಿದರು. ಪ್ರವೀಣ್ ಪತ್ನಿ ಅನಸೂಯ ಅವರಿಗೆ ವೈಯಕ್ತಿಕ ಕಾರಣಗಳಿಂದ ಠಾಣೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಪೊಲೀಸರು ಸ್ವತ: ಅನಸೂಯ ಅವರ ಮನೆಗೆ ತೆರಳಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ಧಾರೆ. ಪ್ರವೀಣ್ ಸಹೋದರ ಕೂಡಾ ಹೇಳಿಕೆ ನೀಡಿದ್ದಾರೆ. ಹೇಳಿಕೆ ನೀಡಿದ ಎಲ್ಲರೂ ನಾಲ್ಕು ಮಂದಿಯನ್ನು ಕೊಲೆ ಮಾಡಿದ ಪಾತಕಿ ಪ್ರವೀಣ್ನನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡ ಬಾರದು. ಒಂದೊಮ್ಮೆ ಆತನನ್ನು ಜೈಲಿನಿಂದ ಬಿಟ್ಟರೆ ಕುಟುಂಬದ ನೆಮ್ಮದಿ ಹಾಳಾಗಬಹುದು ಮತ್ತು ಈ ಪ್ರಕರಣದಲ್ಲಿ ಸಾಕ್ಷಿ ಹೇಳಿದವರಿಗೆ ಅನಾಹುತ ತಪ್ಪಿದ್ದಲ್ಲ. ಹಾಗಾಗಿ ಸನ್ನಡತೆ ನೆಪದಲ್ಲಿ ಪ್ರವೀಣ್ನನ್ನು ಬಿಡುಗಡೆ ಮಾಡುವ ಯೋಜನೆಯನ್ನು ಕೈಬಿಡ ಬೇಕು ಎಂದು ಒತ್ತಾಯಿಸಿದ್ದಾರೆ. ಈ ತನ್ಮಧ್ಯೆ ಕುಟುಂಬಿಕರು ಮತ್ತು ಸಂಬಂಧಿಕರು ಆ.9ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರನ್ನು ಭೇಟಿ ಮಾಡಿ ಈ ಕುರಿತಂತೆ ಮನವಿ ಸಲ್ಲಿಸಲಿದ್ದಾರೆ.
ವಾಮಂಜೂರು ಮರ್ಡರ್ ಕೇಸ್: ಪೆರಿಯಡ್ಕದ ಪ್ರವೀಣ್ ಬಿಡುಗಡೆಗೆ ಕುಟುಂಬಸ್ಥರ ಆಕ್ಷೇಪ – ನಾಳೆ ಕಮೀಷನರ್ ಭೇಟಿ
ಕಮಿಷನರ್ ಆವರು ಪ್ರವೀಣ್ ಕುಟುಂಬಿಕರು ಸಲ್ಲಿಸುವ ಮನವಿಯನ್ನು ಹಾಗೂ ಈಗಾಗಲೇ ಗ್ರಾಮಾಂತರ ಠಾಣೆಯ ಪೊಲೀಸರು ದಾಖಲಿಸಿರುವ ಹೇಳಿಕೆಗಳನ್ನು ಸಮೀಕರಿಸಿ ವರದಿಯನ್ನು ಜೈಲು ಅಧಿಕಾರಿಗಳಿಗೆ ಕಳುಹಿಸಿ ಕೊಡಲಿದ್ದಾರೆ. ವಾಮಂಜೂರು ಪ್ರವೀಣ್ನನ್ನು ಬಿಡುಗಡೆ ಮಾಡುವ ಬಗ್ಗೆ ಆತನ ಸಂಬಂಧಿಕರಿಂದ ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರಿಂದಲೂ ತೀವ್ರ ವಿರೋಧವಿದೆ.