ನಾಯಿ ಕಡಿದರೆ ತಕ್ಷಣ ಚಿಕಿತ್ಸೆ ಅಗತ್ಯ-ಡಿಎಚ್‌ಒ
ಬಂಟ್ವಾಳ:ಶಂಕಿತ ರೇಬಿಸ್‌ಗೆ ಯುವಕನೋರ್ವ ಬಲಿಯಾದ ಘಟನೆ ಸಂಭವಿಸಿದೆ. ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ನಿವಾಸಿ ಅಶೋಕ ಹೆಗ್ಡೆ ಅವರ ಪುತ್ರ ಪ್ರಶಾಂತ ಹೆಗ್ಡೆ ಅವರು ಮೃತ ಪಟ್ಟ ದುರ್ದೈವಿಯಾಗಿದ್ದಾರೆ.
ಮೂರು ತಿಂಗಳ ಹಿಂದೆ ಪ್ರಶಾಂತ್ ಅವರಿಗೆ ಅವರ ಮನೆಯ ನಾಯಿ ಕಡಿದಿದ್ದು, ಬಳಿಕ ನಾಯಿ ಮೃತ ಪಟ್ಟಿತ್ತು.ಆದರೆ ಪ್ರಶಾಂತ್ ಅವರು ನಾಯಿ ಕಡಿದಿರುವುದಕ್ಕೆ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ ಎನ್ನಲಾಗಿದೆ.ಕಳೆದೆರಡು ದಿನಗಳಿಂದ ಅವರು ತೀವ್ರ ಸಂಕಟ, ಜ್ವರದಿಂದ ಒದ್ದಾಡಿದ್ದು, ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದಲ್ಲಿ ಚಿಕಿತ್ಸೆಗಾಗಿ ತೆರಳಿದ್ದರು.ಜ್ವರ ತಪಾಸಣೆ ನಡೆಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಶಾಂತ್ ಮೃತಪಟ್ಟಿದ್ದಾರೆ.
ನಾಯಿ ಕಡಿದ ಬಳಿಕ ಶೀಘ್ರ ಚಿಕಿತ್ಸೆ ಪಡೆದಿದ್ದರೆ ಅವರು ಬದುಕುಳಿಯುತ್ತಿದ್ದರು.ಆದರೆ, ಅದಾಗಲೇ ರೇಬಿಸ್ ಲಕ್ಷಣಗಳು ಉಲ್ಬಣಗೊಂಡಿತ್ತು ಎಂದು ತಿಳಿದು ಬಂದಿದೆ.
ಪ್ರಶಾಂತ್ ಅವರ ಕ್ಲಿನಿಕಲ್ ಪರೀಕ್ಷೆ ವರದಿಗಳು ರೇಬಿಸ್ ಲಕ್ಷಣ ಹೊಂದಿದ್ದವು.ಆದರೆ ಅವರು ಯಾವ ಕಾರಣದಿಂದ ಮೃತರಾಗಿದ್ದಾರೆಂದು ನಿಖರವಾಗಿ ತಿಳಿದು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಅವರು ತಿಳಿಸಿದ್ದಾರೆ.
ನಾಯಿ ಕಡಿದ ಸಂದರ್ಭದಲ್ಲಿ ಹೆಚ್ಚಿನ ನಿಗಾ ವಹಿಸುವುದು, ತಕ್ಷಣ ಚಿಕಿತ್ಸೆ ಕೊಡಿಸುವುದು ಅಗತ್ಯ ಎಂದು ಅವರು ತಿಳಿಸಿದ್ದಾರೆ.
ಪ್ರಶಾಂತ್ ಅವರ ಸಾವಿಗೆ ರೇಬಿಸ್ ಕಾರಣವೆಂಬ ಮಾಹಿತಿಯಿಂದಾಗಿ,ಅವರ ಸಂಪರ್ಕದಲ್ಲಿದ್ದವರು ಆತಂಕಿತರಾಗಿದ್ದಾರೆ.ಅಶೋಕ್ ಹೆಗ್ಡೆಯವರ ಇಬ್ಬರು ಪುತ್ರರಲ್ಲಿ ಮೃತ ಪ್ರಶಾಂತ್ ಹಿರಿಯವರಾಗಿದ್ದು, ಅವಿವಾಹಿತರಾಗಿದ್ದರು.ಜಿಯೋ ಸಂಸ್ಥೆಯಲ್ಲಿ ಒಪ್ಪಂದದ ಮೇರೆಗೆ ಉದ್ಯೋಗಿಯಾಗಿದ್ದು, ಮನೆಗೆ ಆಧಾರವಾಗಿದ್ದರು.