ದ.ಕ ರೈತರಿಗೆ ಕೋವಿ ಠೇವಣಿಗೆಯಲ್ಲಿ ವಿನಾಯಿತಿ

0

ಬಂಟ್ವಾಳ: ರಾಜ್ಯದಲ್ಲಿ ಚುನಾವಣೆ ಬಂದಿರುವುದರಿಂದ ಶಸ್ತ್ರಾಸ್ತ್ರ ಡೆಪಾಸಿಟ್ ಮಾಡುವಂತೆ ರಾಜ್ಯದಲ್ಲಿ ಆದೇಶ ಮಾಡಲಾಗಿದೆ. ಆದರೆ ಈ ಆದೇಶದಿಂದಾಗಿ ಬೆಳೆ ರಕ್ಷಣೆಗಾಗಿ ಕೋವಿಗಳನ್ನು ಹೊಂದಿರುವ ರೈತರಿಗೆ ತೊಂದರೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಪ್ರಾರಂಭದಲ್ಲಿ ಜಿಲ್ಲಾಧಿಕಾರಿ ಈ ಆದೇಶವನ್ನು ಮಾಡಿದ್ದರು. ಆದರೆ ಆ ಬಳಿಕ ರೈತರಿಗೆ ಆಗುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಹೀಗಾಗಿ ಇದೀಗ ಜಿಲ್ಲಾಧಿಕಾರಿಗಳು ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಅಪರಾಧ ಹಿನ್ನಲೆ, ಜಾಮೀನಿನಲ್ಲಿ ಬಿಡುಗಡೆಯಾದವರು, ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ದೊಂಬಿ ಗಲಾಟೆಯಲ್ಲಿ ಭಾಗಿಯಾದವರನ್ನು ಹೊರತುಪಡಿಸಿ ಉಳಿದ ರೈತರಿಗೆ ಶಸ್ತ್ರಾಸ್ತ್ರ ಠೇವಣಿಯಲ್ಲಿ ವಿನಾಯಿತಿ ನೀಡಿದ್ದಾರೆ.

ಶಸ್ತ್ರಾಸ್ತ್ರ ಕಾಯ್ದೆಯಡಿ ಪರವಾನಿಗೆದಾರರಿಗೆ ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರದ ಅವಶ್ಯಕತೆ ಇದ್ದರೆ ಪೂರಕ ದಾಖಲೆಗಳೊಂದಿಗೆ ತಾಲೂಕು ತಹಶೀಲ್ದಾರರಿಗೆ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕಾಗಿ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಸ್ಕ್ರೀನಿಂಗ್ ಸಮಿತಿಗಳನ್ನು ರಚಿಸಲಾಗಿದ್ದು,ಈ ಸಮಿತಿಗಳಲ್ಲಿ ತಹಶೀಲ್ದಾರ್, ಪೊಲೀಸ್ ಉಪನಿರೀಕ್ಷಕರು, ವಲಯ ಅರಣ್ಯಾಧಿಕಾರಿ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಇರಲಿದ್ದಾರೆ. ಈ ಸಮಿತಿ ಅಹವಾಲುಗಳ ಪರಿಶೀಲಿಸಿ ಅರ್ಹ ಪ್ರಕರಣಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹಾಗೂ ಆತ್ಮ ರಕ್ಷಣೆಗಾಗಿ ಆಯುಧದ ಅವಶ್ಯಕತೆ ಇದ್ದವರಿಗೆ ಠೇವಣಿ ಇಡುವುದರಿಂದ ವಿನಾಯಿತಿ ನೀಡಲು ಅವಕಾಶ ನೀಡಲಾಗಿದೆ.

ರೈತರು ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದರೆ ಅನಿವಾರ್ಯತೆ ಪರಿಶೀಲಿಸಿ ವಿನಾಯಿತಿ ನೀಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಇದರಿಂದ ಕೆಲ ರೈತರಿಗೆ ನಿರಾಳ ಎನಿಸಿದೆ.

LEAVE A REPLY

Please enter your comment!
Please enter your name here