ಬಂಟ್ವಾಳ ತಾಲೂಕಿನ ಕಾವಳ ಪಡೂರು ಗ್ರಾಮದ ಕೆಲೊಂಜಿಕೋಡಿ ಮಿತ್ತಕೋಡಿ ನಿವಾಸಿ ಚೆಲುವಮ್ಮ ಎಂಬವರ ದುಸ್ಥಿತಿಯಲ್ಲಿದ್ದ ಮನೆಯನ್ನು ಕೆಡವಿ ನೂತನ ಮನೆಯನ್ನು ಮಾಡಿ ಕೊಡುವ ಮೂಲಕ ಕಾವಳ ಪಡೂರು ಬಿಲ್ಲವ ಸೇವಾ ಸಮಾಜ ಸೇವಾ ಸಂಘ ಹೊಸ ಬಾಷ್ಯ ಬರೆದಿದೆ.
ಚೆಲುವಮ್ಮ ಹೆಸರಿಗಷ್ಟೆ… ಆದರೆ ಅವರ ಬದುಕು ಸುಖಕರವಾಗಿರಲಿಲ್ಲ. ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿರುವ ಮನೆ, ಅನಾರೋಗ್ಯದಿಂದ ಬಳಲುತ್ತಿರುವ ಮಗ, ಕಷ್ಟಪಟ್ಟು ಬೆಳಗ್ಗಿನಂದ ಸಂಜೆಯವರೆಗೆ ದುಡಿದರೆ ಸಿಗುವ ಕಾಸು ಮನೆ ಖರ್ಚಿಗೂ ಸಾಕಾಗುತ್ತಿರಲಿಲ್ಲ. ಇದನ್ನೆಲ್ಲ ಪ್ರತಿನಿತ್ಯ ಕಾಣುತ್ತಿದ್ದ ಸ್ಥಳೀಯ ನಿವಾಸಿಗಳು ಬಿಲ್ಲವ ಸಂಘಕ್ಕೆ ಸಹಾಯಕ್ಕಾಗಿ ಮನವಿ ಸಲ್ಲಿಸುತ್ತಾರೆ. ಮನವಿಗೆ ಸ್ಪಂಧಿಸಿದ ಬಿಲ್ಲವ ಸಂಘ ನೂತನ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತದೆ. ಸುಮಾರು 48ಯುವಕ, ಯುವತಿಯರ ತಂಡ ಜಾತಿ ಮತ ಬೇಧವಿಲ್ಲದೆ ಒಂದಾಗಿ ಶ್ರಮದಾನ ಮಾಡುವ ಮೂಲಕ ಚೆಲುವಮ್ಮನಿಗೊಂದು ಸೂರಿನ ನಿರ್ಮಾಣ ಮಾಡುತ್ತಾರೆ. ಕಾವಳುಪಡೂರಿನಲ್ಲಿ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಈ ಬಿಲ್ಲವ ಸಂಘ ಕಾಡಬೆಟ್ಟು ಎಂಬಲ್ಲಿಯೂ ಮನೆ ನಿರ್ಮಾಣ ಮಾಡಿಕೊಟ್ಟಿತ್ತು. ಸರಕಾರದ ಅನುದಾನಕ್ಕೆ ಕಾಯದೆ ಆಸಕ್ತರಿಗೆ ಸೂರು ನಿರ್ಮಿಸುವ ಸಂಘದ ಕಾರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.