ಬಂಟ್ವಾಳ: ಆರೋಗ್ಯ ಕ್ಷೇತ್ರದ ಅಮೂಲಾಗ್ರ ಬದಲಾವಣೆಯ ದೃಷ್ಟಿಯಿಂದ ಕೋವಿಡ್ ಬಳಿಕ ಗ್ರಾಮೀಣ ಭಾಗಗಳಲ್ಲೂ ಗುಣಮಟ್ಟದ ಆರೋಗ್ಯ ಕೇಂದ್ರಗಳ ಅನುಷ್ಠಾನಕ್ಕೆ ಒತ್ತು ನೀಡಲಾಗುತ್ತಿದ್ದು, ಪ್ರಧಾನಿಗಳ ಆಶಯದಂತೆ ಪ್ರತಿ ಜಿಲ್ಲೆಗಳಲ್ಲೂ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ದ.ಕ.ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಪುಂಜಾಲಕಟ್ಟೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯ ವತಿಯಿಂದ ೧೨.೪೪ ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪುಂಜಾಲಕಟ್ಟೆ ಅಮೃತ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಜಗತ್ತಿನಲ್ಲೇ ಅದ್ಬುತ ಯೋಜನೆಯಾಗಿ ಪ್ರಧಾನಿಗಳು ಆಯುಷ್ಮಾನ್ ಭವ, ಜನೌಷಧಿ ಕೇಂದ್ರ, ಆಸ್ಪತ್ರೆಯನ್ನು ಮೇಲ್ದರ್ಜೆ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಡಬಲ್ ಇಂಜಿನ್ ಸರಕಾರ ಹೆಚ್ಚಿನ ಅನುದಾನ ನೀಡುವ ಕಾರ್ಯ ಮಾಡುತ್ತಿದೆ. ಸಿಎಂ ಬೊಮ್ಮಾಯಿ ಅವರ ಸರಕಾರ ಹಳ್ಳಿ ಹಳ್ಳಿಗಳಲ್ಲೂ ನಮ್ಮ ಕ್ಲಿನಿಕ್ ತೆರಯುವ ಕಾರ್ಯ ನಡೆಯುತ್ತಿದೆ. ಆಕ್ಸಿಜನ್, ವೆಂಟಿಲೇಟರ್, ವೈದ್ಯರ ನೇಮಕ, ಎಲ್ಲಾ ಕೊರತೆ ನೀಗಿಸುವ ಕಾರ್ಯ ಮಾಡಲಾಗುತ್ತಿದೆ. ಪುಂಜಾಲಕಟ್ಟೆಯಲ್ಲಿ ಖಾಸಗಿ ಆಸ್ಪತ್ರೆಗಿಂತಲೂ ಉತ್ತಮ ಗುಣಮಟ್ಟದ ಆಸ್ಪತ್ರೆಯ ನಿರ್ಮಾಣಕ್ಕೆ ಯೋಜನೆ ರೂಪಿಸಿದ ರಾಜೇಶ್ ನಾಯ್ಕ್ ಅವರು ಅಭಿವೃದ್ಧಿ ಸಲ್ಲಿಸುತ್ತಿದ್ದು, ಕಳೆದ ಐದು ವರ್ಷಗಳಲ್ಲಿ ಬಂಟ್ವಾಳ ಅಭಿವೃದ್ಧಿ ವೇಗಕ್ಕೆ ಸಿಕ್ಕಿದ್ದು, ಇಡೀ ರಾಜ್ಯದಲ್ಲೇ ಮೊದಲ ಐಸಿಯು ಬಸ್ಸಿನ ಮೂಲಕ ಗ್ರಾಮೀಣ ಭಾಗದ ಜನತೆ ಚಿಕಿತ್ಸೆ ನೀಡಿದ ಕೀರ್ತಿ ಬಂಟ್ವಾಳ ಕ್ಷೇತ್ರಕ್ಕೆ ಸಲ್ಲುತ್ತದೆ. ಬಹಳ ಮುಖ್ಯವಾಗಿ ಗಲಭೆಗಳಿಲ್ಲದ ಬಂಟ್ವಾಳ ನಿರ್ಮಾಣ ಮಾಡಿದ ಕೀರ್ತಿ ಶಾಸಕರಿಗೆ ಸಲ್ಲುತ್ತದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಆರೋಗ್ಯ ಸಚಿವರು ಬಂಟ್ವಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅದೇ ದಿನ ಸಚಿವರಿಂದ ಪುಂಜಾಲಕಟ್ಟೆ ಆಸ್ಪತ್ರೆಯ ಮೇಲ್ದರ್ಜೆ ಘೋಷಣೆ ಮಾಡಿಸಿ ಅದನ್ನು ಬೆನ್ನು ಹಿಡಿದು ಶಿಲಾನ್ಯಾಸ ಹಂತಕ್ಕೆ ತಂದಿದ್ದು, ಶೀಘ್ರದಲ್ಲಿ ಕಾಮಗಾರಿಯೂ ಆರಂಭಗೊಳ್ಳಲಿದೆ. ಆರೋಗ್ಯ ಕ್ಷೇತ್ರದಲ್ಲಿ ಇಡೀ ದೇಶವೇ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಬದಲಾವಣೆಯನ್ನು ಕಂಡಿದೆ ಎಂದರು.
ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಮಾತನಾಡಿ, ಪುಂಜಾಲಕಟ್ಟೆಯ ೩೦ ವರ್ಷಗಳ ಹೋರಾಟದ ಕನಸು ನನಸಾಗುವ ಸಂತಸದಲ್ಲಿದ್ದು, ಹೋರಾಟ, ಧನ್ವಂತರಿ ಯಾಗ ಹೀಗೆ ಹಲವು ಪ್ರಯತ್ನಗಳ ಮೂಲಕ ಈ ಕಾರ್ಯ ಕೈಗೂಡಿದೆ ಎಂದರು.
ವೇದಿಕೆಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಪಿಲಾತಬೆಟ್ಟು ಗ್ರಾ.ಪಂ.ಹರ್ಷಿಣಿ ಪುಷ್ಪಾನಂದ, ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಹೆಗ್ಡೆ, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ನಗರ ನೀರು ಸರಬರಾಜು, ಒಳಚರಂಡಿ ಮಂಡಳಿಯ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ರಾಜೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ಪುಂಜಾಲಕಟ್ಟೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಿತೇಶ್ ಕುಮಾರ್, ಮಸೀದಿ ಧರ್ಮಗುರು ಅಬ್ದುಲ್ ಸಖಾಫಿ, ಮಡಂತ್ಯಾರು ಸೆಕ್ರೆಡ್ ಹಾರ್ಟ್ ಕಾಲೇಜಿನ ಆಲ್ವಿನ್ ರಾಡ್ರಿಗಸ್, ಇರ್ವತ್ತೂರು ಗ್ರಾ.ಪಂ.ಅಧ್ಯಕ್ಷ ಶೇಖರ್ ನೆತ್ತರ, ಬಡಗಕಜೆಕಾರು ಗ್ರಾ.ಪಂ.ಅಧ್ಯಕ್ಷ ಅಸ್ಮಾ, ಉದ್ಯಮಿ ಹರೀಂದ್ರ ಪೈ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಪ್ರಸ್ತಾವನೆಗೈದರು. ಪ್ರಭಾಕರ ಪಿ.ಎಂ.ಕಾರ್ಯಕ್ರಮ ನಿರ್ವಹಿಸಿದರು.