ಬಂಟ್ವಾಳ: ಚೆಸ್ ಪಂದ್ಯಾಟ ಮತ್ತಿತರ ಕ್ರೀಡೆಯಿಂದ ಮಕ್ಕಳ ಬುದ್ಧಿಶಕ್ತಿ ವೃದ್ಧಿ ಜೊತೆಗೆ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುತ್ತದೆ. ಗ್ರಾಮೀಣ ಮಕ್ಕಳ ಶಾರೀರಿಕ ಬೆಳವಣಿಗೆ ಜೊತೆಗೆ ಶೈಕ್ಷಣಿಕ ಗುಣಮಟ್ಟ ವೃದ್ಧಿಸಲು ಸರಕಾರ ಆದ್ಯತೆ ನೀಡುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಹೇಳಿದ್ದಾರೆ.
ಬಂಟ್ವಾಳ ತಾ.ನ ಕಾವಳಪಡೂರು ವಗ್ಗ ಸರಕಾರ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಜಿಲ್ಲಾ ಪಂಚಾಯಿತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಭಾಗಿತ್ವದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ‘ತಾಲೂಕು ಮಟ್ಟದ ಚೆಸ್ ಪಂದ್ಯಾಟ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತ್ ಅಧ್ಯಕ್ಷೆ ರಜನಿ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಮಾತನಾಡಿ, ವಗ್ಗ ಸರಕಾರಿ ಪ್ರೌಢಶಾಲೆಯು ಶಿಕ್ಷಣ ಮತ್ತು ಕ್ರೀಡೆ ಜೊತೆಗೆ ಮಕ್ಕಳ ಪ್ರತಿಭೆ ಅನಾವರಣಗೊಳಿಸುತ್ತಿದೆ ಎಂದರು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೋಯೆಲ್ ಲೋಬೊ ಶುಭ ಹಾರೈಸಿದರು. ಮೇಲ್ವಿಚಾರಕಿ ದೀಕ್ಷಿತಾ ಚೆಸ್ ಪಂದ್ಯಾಟ ನಿಯಮಾವಳಿ ಬಗ್ಗೆ ಮಾಹಿತಿ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ಪ ಗೌಡ ನಿನ್ನಿಕಲ್ಲು, ಶಿಕ್ಷಣ ಸಂಯೋಜಕಿ ಸುಜಾತ, ದೈಹಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಚಿನ್ನಪ್ಪ, ಅಧ್ಯಕ್ಷ ಜತ್ತಪ್ಪ ಗೌಡ, ಅಧ್ಯಕ್ಷೆ ರತ್ನಾವತಿ, ಪ್ರಧಾನ ಕಾರ್ಯದರ್ಶಿ ಸಂತೋಷ್, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ನವೀನ್ ಪಿ.ಎಸ್., ದಾನಿ ಬೆನಡಿಕ್ಟ್ ಡಿಸೋಜ, ಹಿರಿಯ ವಿದ್ಯಾರ್ಥಿ ನಾಗೇಶ್ ಮತ್ತಿತರರು ಇದ್ದರು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣುನಾರಾಯಣ ಹೆಬ್ಬಾರ್ ಪ್ರಸ್ತಾವನೆಗೈದು ವಲಯ ಮಟ್ಟದಲ್ಲಿ ಆಯ್ಕೆಗೊಂಡ 32 ಶಾಲೆಗಳ ಒಟ್ಟು 120 ಮಂದಿ ಸ್ಪರ್ಧಾಳುಗಳು ಇಲ್ಲಿ ಭಾಗವಹಿಸಿದ್ದರು, ಶೀಘ್ರ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಜಿಲ್ಲಾಮಟ್ಟದ ಪಂದ್ಯಾಟ ನಡೆಯಲಿದೆ ಎಂದರು.
ಮುಖ್ಯಶಿಕ್ಷಕ ಆದಂ ಶೇಖ್ ಸ್ವಾಗತಿಸಿ, ಪ್ರಾಧ್ಯಾಪಕ ಫೆಡ್ರಿಕ್ ಡಿಸೋಜ ವಂದಿಸಿದರು. ಶಿಕ್ಷಕ ಜನಾರ್ದನ ಕೊಯಿಲ ಮತ್ತು ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.