ವಿಟ್ಲ: ಗ್ರಾಮದ ಪ್ರತಿಯೊಬ್ಬರಿಗೆ ನ್ಯಾಯಯುತ ಜೀವನ ನಡೆಸಲು ಅವಕಾಶ ಮಾಡಬೇಕಾಗಿರುವುದು ಗ್ರಾಮ ಅಧ್ಯಕ್ಷನ ಜವಾಬ್ದಾರಿಯಾಗಿದೆ. ಇದರ ಬದಲು ಹಿಂದು ವಿರೋಧಿ ನೀತಿಯನ್ನು ನಿರಂತರವಾಗಿ ಮಾಡುತ್ತಾ ಹೋದರೆ ಸರಿಯಾದ ಉತ್ತರ ನೀಡಬೇಕಾಗುತ್ತದೆ. ಪಂಚಾಯತ್ ಸ್ಮಶಾನದ ಭೂಮಿಯನ್ನು ಅಭಿವೃದ್ಧಿ ಪಡಿಸದೆ ಹೋದರೆ, ಸಮಿತಿಯ ಕಡೆಯಿಂದ ಸುಂದರ ರುದ್ರ ಭೂಮಿಯನ್ನು ನಿರ್ಮಾಣ ಮಾಡಿ ತೋರಿಸಬೇಕಾಗುತ್ತದೆ ಎಂದು ಭಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತಡ್ಕ ಹೇಳಿದರು.
ಅವರು ಕನ್ಯಾನ ಗ್ರಾಮ ಪಂಚಾಯತ್ ಮುಂಭಾಗ ಹಿಂದೂ ರುದ್ರ ಭೂಮಿ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ರುದ್ರ ಭೂಮಿ ಜಾಗವನ್ನು ಇತರೇ ಉದ್ದೇಶಕ್ಕೆ ಬಳಸುವುದನ್ನು ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಸಮಾಜ, ದೇಶ ಬದಲಾಗಿದೆ ಎಂಬುದನ್ನು ಅರಿಯದೆ ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸುವುದನ್ನು ತಕ್ಷಣ ನಿಲ್ಲಿಸಬೇಕು. ಹಿಂದು ಸಮಾಜ ಜಾಗೃತವಾಗಿದ್ದು, ಹಿಂದು ವಿರೋಧಿ ಆಡಳಿತವನ್ನು ತೊಲಗಿಸುವ ಕಾರ್ಯ ಕನ್ಯಾನದಲ್ಲಿ ಮಾಡುತ್ತೇವೆ. ಹಿಂದು ರುದ್ರ ಭೂಮಿಯ ಪಕ್ಕದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡಲು ಹೊರಟವರು ಅನ್ಯ ಧರ್ಮದ ದಫನ ಭೂಮಿಯ ಪಕ್ಕದಲ್ಲಿ ಇದನ್ನು ಮಾಡುವಿರಾ ಎಂದು ಪ್ರಶ್ನಿಸಿದ ಅವರು ಗ್ರಾ.ಪಂ.ನ ಮುಂದಿನ ಸಭೆಯಲ್ಲಿ ತ್ಯಾಜ್ಯ ಘಟಕದ ಸ್ಥಳಾಂತರದ ನಿರ್ಣಯ ಮಾಡದೇ ಹೋದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸದಸ್ಯ ರಾಧಾಕೃಷ್ಣ ಅಡ್ಯಂತಾಯರವರು ಮಾತನಾಡಿ ಜನ ಸಂಖ್ಯೆಯು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕ ರುದ್ರ ಭೂಮಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ರುದ್ರ ಭೂಮಿ ಹಿಂದುಗಳ ಹಕ್ಕಾಗಿದ್ದು, ಅದನ್ನು ತುಂಡರಿಸುವ ಹಕ್ಕು ಪಂಚಾಯತ್ ಗೆ ಇಲ್ಲ. ಶಾಸ್ತ್ರ ಬದ್ಧವಾಗಿ ಸಂಸ್ಕಾರ ನೀಡುವ ಜಾಗದಲ್ಲಿ ತ್ಯಾಜ್ಯ ಘಟಕ ಮಾಡುವುದು ಸರಿಯಲ್ಲ. ಹಿಂದುಗಳು ಎಚ್ಚರ ತಪ್ಪಿದರೆ ಅಪಾಯ ನಿಶ್ಚಿತ ಎಂದು ತಿಳಿಸಿದರು. ಕನ್ಯಾನ ರಾಘವೇಂದ್ರ ಭಜನಾ ಮಂದಿರದಿಂದ ಕನ್ಯಾನ ಗ್ರಾಮ ಪಂಚಾಯತ್ ವರೆಗೆ ಪ್ರತಿಭಟನಾ ಜಾಥಾ ನಡೆಯಿತು.
ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಸಹ ಸಂಚಾಲಕ ನರಸಿಂಹ ಮಾಣಿ, ವಿಶ್ವ ಹಿಂದು ಪರಿಷತ್ ವಿಟ್ಲ ಪ್ರಖಂಡ ಅಧ್ಯಕ್ಷ ಪದ್ಮನಾಭ ಕಟ್ಟೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕುಸುಮ ವಿ. ನಾಯ್ಕ, ಸದಸ್ಯರಾದ ಕೆ.ಪಿ. ರಘುರಾಮ ಶೆಟ್ಟಿ, ವನಿತಾ ಧರ್ಮರಾಜ್, ಮನೋಜ್ ಬನಾರಿ, ಧರಣಮ್ಮ ಗೌಡ, ಹಿಂದು ರುದ್ರ ಭೂಮಿ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಕೇಶವ ಗೌಡ ಕಾಣಿಚ್ಚಾರು, ಗೌರವಾಧ್ಯಕ್ಷ ಪೂವಪ್ಪ ಗೌಡ ಕಾಣಿಚ್ಚಾರು, ಕಾರ್ಯದರ್ಶಿ ಜಯಪ್ರಸಾದ್ ಬಾಳೆಕ್ಕೋಡಿ, ಜತೆ ಕಾರ್ಯದರ್ಶಿ ಸುಧಾಕರ ಗುರಿಮಾರ್ಗ, ಬಾಳಪ್ಪ ಎನ್. ಕಂಬ್ಳ, ಉಪಾಧ್ಯಕ್ಷ ರಾಜೇಶ್ ಭಟ್ ಕಾಣಿಚ್ಚಾರು, ಊರಿನ ಪ್ರಮುಖರಾದ ಕುಮಾರ್ ಭಟ್ ಬದಿಕ್ಕೋಡಿ, ಲೋಕೇಶ್ ಗೌಡ, ಕೃಷ್ಣಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಆಕ್ಷೇಪ ಬಾರದ ಹಿನ್ನೆಲೆಯಲ್ಲಿ ತ್ಯಾಜ್ಯ ಘಟಕಕ್ಕೆ ಜಾಗ ಮಂಜೂರು ಮಾಡಲಾಗಿದೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕನ್ಯಾನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಪ್ಪ ಪಿ.ಆರ್.ರವರು ಕನ್ಯಾನ ಗ್ರಾಮದ ಬಾಳೆಕೋಡಿಯಲ್ಲಿ ರುದ್ರ ಭೂಮಿಗಾಗಿ ೨.೨೫ಎಕ್ರೆ ಜಾಗ ಇದ್ದು, ೨೦೨೧ಆಗಸ್ಟ್ ೬ ರಂದು ೭೮ಸೆಂಟ್ಸ್ ಕಟ್ ಮಾಡಿ ತ್ಯಾಜ್ಯ ಘಟಕಕ್ಕೆ ಮೀಸಲು ಇಡಲಾಗಿದೆ. ಸ್ಮಶಾನದ ಜಾಗದಲ್ಲಿ ಸ್ಮಶಾನದ ಕಟ್ಟಡ ಸಹಿತ ಅಗತ್ಯ ವ್ಯವಸ್ಥೆ ನಿರ್ಮಿಸಲಾಗಿದೆ. ಘನ ತ್ಯಾಜ್ಯಕ್ಕೆ ಜಾಗ ಖಾದಿರಿಸುವ ನಿಟ್ಟಿನಲ್ಲಿ ಹಲವು ಭಾಗದಲ್ಲಿ ನೋಡಿದರೂ, ಸಾಧ್ಯವಾಗದ ಹಿನ್ನಲೆಯಲ್ಲಿ ಸಹಾಯಕ ಆಯುಕ್ತರು ರುದ್ರ ಭೂಮಿಯ ಜಾಗ ತುಂಡರಿಸುವ ನಿಟ್ಟಿನಲ್ಲಿ ೨೦೨೧ ಜುಲೈ ೬ಕ್ಕೆ ಹದಿನೈದು ದಿನಗಳ ಆಕ್ಷೇಪ ಇದೆಯಾ ಎಂದು ಕೇಳಲಾಗಿತ್ತು. ಆದರೆ ಆ ಸಂದರ್ಭ ಯಾವುದೇ ಆಕ್ಷೇಪ ಬಾರದ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರು ತ್ಯಾಜ್ಯ ಘಟಕ್ಕೆ ಜಾಗ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.