ಬಂಟ್ವಾಳ:`ಗ್ರಾಮದೆಡೆಗೆ ಶಾಸಕರ ನಡಿಗೆ’ ಕಾರ್ಯಕ್ರಮದಲ್ಲಿ ಡಾ.ಅಶ್ವಥ್‌ನಾರಾಯಣ

0

ಬಂಟ್ವಾಳ:ಅಭಿವೃದ್ದಿ ಕಾರ್ಯದ ಸ್ಪಷ್ಟತೆ ಇಲ್ಲದೆ ತುಷ್ಟೀಕರಣದ ರಾಜಕಾರಣದ ಮೂಲಕ ಸಮಾಜದಲ್ಲಿ ಗೊಂದಲ, ಸಮಸ್ಯೆ ಉಂಟು ಮಾಡಿದ ಕಾಂಗ್ರೆಸ್ ಜಾತಿ, ಧರ್ಮದ ಆಧಾರದಲ್ಲಿ ಸಮಾಜವನ್ನು ಇಬ್ಭಾಗ ಮಾಡಿ ತಮ್ಮ ಸ್ವಾರ್ಥಕ್ಕಾಗಿ ದೇಶದ ಹಿತವನ್ನು ಕಡೆಗಣಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದರು.


ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ `ಗ್ರಾಮವಿಕಾಸ ಯಾತ್ರೆ-ಗ್ರಾಮದೆಡೆಗೆ ಶಾಸಕರ ನಡಿಗೆ’ಯ ೫ನೇ ದಿನದ ಪಾದಯಾತ್ರೆಯ ಸಮಾರೋಪದಲ್ಲಿ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್, ಅತಿವೃಷ್ಟಿ ಅನಾವೃಷ್ಟಿಯಿಂದ ದೇಶ ಸಮಸ್ಯೆಯನ್ನು ಎದುರಿಸಿದರೂ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಶಕ್ತ ರಾಷ್ಟ್ರವಾಗಿ ಇಡೀ ವಿಶ್ವಕ್ಕೆ ನಾಯಕತ್ವ ಕೊಡುವ ಮೂಲಕ ದೇಶದ ಐಕ್ಯತೆ, ಸಮಗ್ರತೆಯನ್ನು ಕಾಪಾಡಿದೆ.ಬಿಜೆಪಿ ಪಕ್ಷ ಒಳ್ಳೆಯ ನಾಯಕತ್ವ, ಒಳ್ಳೆಯ ಸರಕಾರ ನೀಡಿದೆ ಎಂದು ಅವರು ತಿಳಿಸಿದರು.ಪ್ರತಿಭೆ ಆಧಾರಿತವಾಗಿ ಪ್ರತಿಯೊಬ್ಬರಿಗೆ ಉದ್ಯೋಗಾವಕಾಶ ಕೊಡುವ ಕಾರ್ಯ ಆಗುತ್ತಿದ್ದು ರಾಜ್ಯ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿ ಕಾಣುತ್ತಿದೆ ಎಂದು ಹೇಳಿದ ಸಚಿವರು,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ.ಆದರೆ ಕಾಂಗ್ರೆಸ್ ಸರಕಾರವೇ ಭ್ರಷ್ಟಾಚಾರವನ್ನು ಬೆಳೆಸಿ ಪೋಷಿಸಿದೆ ಎಂದು ಆರೋಪಿಸಿದರು.


ಸಚಿವರಾಗಿ ಮಾಡಲಾಗದ ಸಾಧನೆ ರಾಜೇಶ್ ನಾಯ್ಕ್ ಮಾಡಿದ್ದಾರೆ-ಬಿ.ಸಿ.ನಾಗೇಶ್: ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ ಸಚಿವರಾಗಿ ನಾವು ತರಲಾಗದಷ್ಟು ಅನುದಾನವನ್ನು ಶಾಸಕರಾಗಿ ರಾಜೇಶ್ ನಾಯ್ಕ್ ತನ್ನ ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಕಾರ್ಯ ಮಾಡಿರುವುದು ಅಭಿನಂದನೀಯ.ರಾಜೇಶ್ ನಾಯ್ಕ್ ಮಾಡಿದ ಸಾಧನೆಯನ್ನು ಪ್ರತೀ ಮನೆಗೂ ತಿಳಿಸುವ ಕಾರ್ಯ ಕಾರ್ಯಕರ್ತರು ಮಾಡಬೇಕಾಗಿದೆ.ಮತ್ತೊಮ್ಮೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಈಗಿಂದಲೇ ನಾವು ಕೆಲಸ ಮಾಡಬೇಕು ಎಂದರು.


ವಿರೋಧಿಗಳಿಗೆ ನಮ್ಮೆದುರು ಸ್ಪರ್ಧಿಸಲಾಗದ ಪರಿಸ್ಥಿತಿ ನಿರ್ಮಾಣವಾಗಬೇಕು -ಎಸ್.ಅಂಗಾರ: ಬಂದರು ಮತ್ತು ಮೀನುಗಾರಿಕೆ, ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ, ಜನರು ನಮಗೆ ನೀಡಿರುವ ಅವಕಾಶವನ್ನು ನಿರಂತರವಾಗಿ ಉಳಿಸುವ ಕಾರ್ಯ ಆಗಬೇಕಾಗಿದೆ.ವಿರೋಧಿಗಳ ಅಪಪ್ರಚಾರ ಹಾಗೂ ನಾವು ಮಾಡಿದ ಸಾಧನೆಯನ್ನು ಜನರಿಗೆ ತಿಳಿಸುವಲ್ಲಿ ವಿಫಲವಾದ ಕಾರಣ ಬಿಜೆಪಿಯ ಕೈಯಲ್ಲಿದ್ದ ಅಧಿಕಾರ ಕಾಂಗ್ರೆಸ್‌ಗೆ ಹೋಗಿ ೧೦ ವರ್ಷಗಳ ಕಾಲ ಕಾಂಗ್ರೆಸ್ ನ ದುರಾಡಳಿತವನ್ನು ಕಾಣಬೇಕಾಯಿತು.ಮತ್ತೆ ಅಂತಹ ಪರಿಸ್ಥಿತಿ ಬಾರದಂತೆ ಎಚ್ಚರ ವಹಿಸಬೇಕಾಗಿದೆ ಎಂದರಲ್ಲದೆ, ಮುಂದಿನ ದಿನಗಳಲ್ಲಿ ವಿರೋಧಿಗಳು ನಮ್ಮ ಮುಂದೆ ಸ್ಪರ್ಧಿಸಲು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.


ಶಾಸಕ ರಾಜೇಶ್ ನಾಯ್ಕ್ ಸಂದರ್ಭೋಚಿತ ಮಾತನಾಡಿದರು.ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಶಾಸಕ ಎ.ರುಕ್ಮಯ ಪೂಜಾರಿ,ಕ.ನ.ನೀ.ಸ.ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಭಟ್, ಗ್ರಾಮೀಣ ವಿಕಾಸ ಯಾತ್ರೆಯ ಸಹ ಸಂಚಾಲಕ ಮಾಧವ ಮಾವೆ, ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಬರಿಮಾರು ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ಬಾಳ್ತಿಲ ಗ್ರಾ.ಪಂ.ಅಧ್ಯಕ್ಷೆ ಹಿರಣ್ಮಯಿ, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಪಿ.ಎಸ್. ಮೋಹನ್, ಯಶೋಧರ ಕರ್ಬೆಟ್ಟು, ಜಿಲ್ಲಾ ಮಾಧ್ಯಮ ಸಂಚಾಲಕ ಸತೀಶ್ ಶೆಟ್ಟಿ, ಮೋನಪ್ಪ ದೇವಸ್ಯ ವೇದಿಕೆಯಲ್ಲಿದ್ದರು.ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು.ಗ್ರಾಮ ವಿಕಾಸ ಯಾತ್ರೆಯ ಸಂಚಾಲಕ ದೇವದಾಸ್ ಶೆಟ್ಟಿ,ರಾಜೇಶ್ ಕೊಟ್ಟಾರಿ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.ಮಂಡಲ ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ ವಂದಿಸಿದರು.


ಗ್ರಾಮವಿಕಾಸ ಯಾತ್ರೆ ಗ್ರಾಮದೆಡೆಗೆ ಶಾಸಕರ ನಡಿಗೆ ಐದನೇ ದಿನದ ಪಾದಯಾತ್ರೆ ಕಡೇಶಿವಾಲಯದ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಿಂದ ಹೊರಟು ಕಲ್ಲಡ್ಕ ಶ್ರೀ ರಾಮ ಮಂದಿರದಲ್ಲಿ ಸಮಾಪನಗೊಂಡಿತು.

LEAVE A REPLY

Please enter your comment!
Please enter your name here