ತುಳು ನಾಟಕ ಸ್ಪರ್ಧೆಗಳು ಭಾಷೆಯ ಉಳಿವಿಗೆ ಪೂರಕ: ಒಡಿಯೂರು ಶ್ರೀ
ತುಳುವಿನ ಉಳಿವಿಗೆ ಒಡಿಯೂರು ಶ್ರೀಗಳ ಪಾತ್ರ ಅಪಾರ: ಎ.ಸಿ. ಭಂಡಾರಿ
ನಾಟಕ ತಂಡಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮದ ಆಯೋಜನೆ: ಕದ್ರಿ ನವನೀತ ಶೆಟ್ಟಿ
ವಿಟ್ಲ: ತುಳು ನಾಟಕ ಸ್ಪರ್ಧೆಗಳು ಭಾಷೆಯ ಉಳಿವಿಗೆ ಪೂರಕ. ತುಳು ಭಾಷೆ, ಸಂಸ್ಕೃತಿ ಉಳಿವಿಗೆ ಇಂತಹ ಕಾರ್ಯಕ್ರಮಗಳ ಅಗತ್ಯ ಬಹಳಷ್ಟಿದೆ. ಕಲಾವಿದರ ಪ್ರತಿಭೆಗಳ ಅನಾವರಣಕ್ಕೆ ಇಂತಹ ಕಾರ್ಯಕ್ರಮ ಗಳು ವೇದಿಕೆಯಾಗಿದೆ. ಇದು ಕೇವಲ ಸ್ಪರ್ಧೆಯಲ್ಲ, ನಾಟಕ ತಂಡಗಳಿಗಿರುವ ಪ್ರೋತ್ಸಾಹ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಕ್ಷೇತ್ರದ ರಾಜಾಂಗಣದಲ್ಲಿ ಡಿ.6ರ ವರೆಗೆ ನಡೆಯಲಿರುವ `ಒಡಿಯೂರು ತುಳು ನಾಟಕೋತ್ಸವ’ವನ್ನು ಡಿ.೧ರಂದು ದೀಪಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಸೂತ್ರದಾರನನ್ನು ಮರೆತರೆ ಜೀವನ ನಾಟಕ ಸುಂದರವಾಗಲು ಸಾಧ್ಯವಿಲ್ಲ. ಅಂತರಂಗ ಬಹಿರಂಗದ ಸೂತ್ರದಾರನೊಬ್ಬನೇ. ಸಂಸ್ಕೃತಿಯನ್ನು ತೋರಿಸುವ ಕೆಲಸ ಇಂತಹ ನಾಟಕ ಪ್ರದರ್ಶನದಿಂದ ಆಗಲು ಸಾಧ್ಯವಿದೆ. ಸ್ಪಧೆ ಯ ಮೂಲಕ ಸಂಸ್ಕೃತಿಗೆ ಕೊಡುಗೆ ನೀಡುವ ಪ್ರಯತ್ನ ಕ್ಷೇತ್ರದಿಂದ ಆಗಲಿದೆ ಎಂದು ಹೇಳಿ ಅವರು ಶುಭಹಾರೈಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿರವರು ಮಾತನಾಡಿ ತುಳು ಭಾಷೆಯ ಪ್ರೀತಿ ಜನರಲ್ಲಿ ಮೂಡುವಂತೆ ಮಾಡುವಲ್ಲಿ ಶ್ರೀಗಳ ಪಾತ್ರ ಅಪಾರ. ತುಳುವಿನ ಸಂಸ್ಕೃತಿಯ ಉಳಿವಿಗೆ ಕ್ಷೇತ್ರದಿಂದ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ. ತುಳು ಭಾಷೆಯ ಉಳಿವಿಗೆ ನಾಟಕಕಾರರ ಸಹಕಾರವೂ ಬಹಳಷ್ಟಿದೆ. ಎಲ್ಲರ ಸಹಕಾರದಿಂದ ತುಳು ಭಾಷೆಯ ಬೆಳವಣಿಗೆ ಇನ್ನಷ್ಟು ಆಗಲಿ ಎಂದರು.
ಒಡಿಯೂರ್ದ ತುಳು ನಾಟಕೋತ್ಸವದ ಸಂಚಾಲಕರಾದ ಕದ್ರಿ ನವನೀತ ಶೆಟ್ಟಿರವರು ಪ್ರಾಸ್ತಾವಿಕ ಮಾತುಗಳನ್ನಾಡಿ ನಾಟಕ ತಂಡಗಳು ಬಂದ ಬಳಿಕ ಪ್ರಾದೇಶಿಕ ನಾಟಕಗಳು ಕಡಿಮೆಯಾಗುತ್ತಾ ಹೋಯಿತು. ಒಟ್ಟು 17ತಂಡಗಳು ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ನಾಟಕ ತಂಡಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಸೋಲು, ಗೆಲುವು ಸ್ಪರ್ಧೆಯಲ್ಲಿ ಇದ್ದುದೇ ಆದರೆ ಕ್ಷೇತ್ರದಲ್ಲಿ ಕಾರ್ಯಕ್ರಮ ನೀಡುವ ಸುಯೋಗ ನಿಮಗೆಲ್ಲರಿಗೂ ಬಂದಿರುವುದು ಖುಷಿತರುವ ವಿಚಾರ ಎಂದರು. ಸಾಧ್ವಿ ಶ್ರೀ ಮಾತಾನಂದಮಯಿ ಉಪಸ್ಥಿತರಿದ್ದರು. ಉದ್ಯಮಿ ವಾಮಯ್ಯ ಬಿ.ಶೆಟ್ಟಿ ಚೆಂಬೂರು, ಉದ್ಯಮಿ ಚಂದ್ರಹಾಸ ಶೆಟ್ಟಿ ತಂಗೋಲಿ, ಒಡಿಯೂರು ಶ್ರೀ ವಿವಿಧೋzಶ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಎ.ಸುರೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಶವಂತ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಭಂಡಾರಿ ವಂದಿಸಿದರು.