ಬಂಟ್ವಾಳ: ಬಂಟ್ವಾಳ ಕ್ಷೇತ್ರದ 39 ಗ್ರಾ.ಪಂ.ಗಳನ್ನೊಳಗೊಂಡು 6 ಜಿ.ಪಂ.ಕ್ಷೇತ್ರ ವ್ಯಾಪ್ತಿಯ ಜನಸ್ಪಂದನ ಕಾರ್ಯಕ್ರಮಕ್ಕೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಅಧಿಕಾರಿಗಳು, ಗ್ರಾ.ಪಂ.ಜನಪ್ರತಿನಿಧಿಗಳು ಸಭೆಯಲ್ಲಿ ಗ್ರಾಮಸ್ಥರನ್ನು ಸೇರಿಸಿ ಅವರ ಸಮಸ್ಯೆ, ದೂರುಗಳಿಗೆ ಸ್ಪಂದನೆ ನೀಡಲು ಸಹಕಾರ ನೀಡುವ ಜತೆಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಸಿದ್ಧರಾಗಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಅವರು ಬಂಟ್ವಾಳ ತಾ.ಪಂ. ಸಭಾಂಗಣದಲ್ಲಿ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಪಿಡಿಒಗಳ ಸಭೆ ನಡೆಸಿ ಮಾತನಾಡಿದರು. ಸಭೆಯಲ್ಲಿ ೨೫ಕ್ಕೂ ಅಧಿಕ ಇಲಾಖೆಗಳು ಭಾಗವಹಿಸಲಿದ್ದು, ಅವರಿಗೆ ಬೇಕಾದ ವ್ಯವಸ್ಥೆ ಮಾಡಬೇಕು. ಸ್ಥಳಾವಕಾಶದ ಕೊರತೆ ಇದ್ದಲ್ಲಿ ಹೆಚ್ಚುವರಿ ಶಾಮಿಯಾನ, ಕುರ್ಚಿ ವ್ಯವಸ್ಥೆ ಮಾಡಬೇಕು. ಬರುವ ಗ್ರಾಮಸ್ಥರಿಗೆ ಊಟೋಪಚಾರದ ವ್ಯವಸ್ಥೆ ಮಾಡಿ, ಅದರ ವಿವರ ನೀಡುವಂತೆ ತಿಳಿಸಿದರು.
ಸಂಗಬೆಟ್ಟು ಜಿಪಂ ವ್ಯಾಪ್ತಿಯ ಸಭೆ ನ.17 ರಂದು ಸಿದ್ಧಕಟ್ಟೆಯ ಹರ್ಷಾಲಿ ಸಭಾಂಗಣದಲ್ಲಿ ನಡೆಯಲಿದ್ದು, ಸಂಗಬೆಟ್ಟು, ಅರಳ, ರಾಯಿ, ಕುಕ್ಕಿಪ್ಪಾಡಿ, ಚೆನ್ನೈತೋಡಿ, ಇರ್ವತ್ತೂರು, ಪಿಲಾತಬೆಟ್ಟು, ಪಂಜಿಕಲ್ಲು ಗ್ರಾ.ಪಂ.ವ್ಯಾಪ್ತಿಯವರು ಭಾಗವಹಿಸಬೇಕು. ಸರಪಾಡಿ ಕ್ಷೇತ್ರದ ಸಭೆ ನ.21 ರಂದು ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಲಿದ್ದು, ಸರಪಾಡಿ, ನಾವೂರು, ಮಣಿನಾಲ್ಕೂರು, ಉಳಿ, ಬಡಗಕಜೆಕಾರು, ಕಾವಳಪಡೂರು, ಕಾವಳಮುಡೂರು ಗ್ರಾ.ಪಂ.ವ್ಯಾಪ್ತಿಯವರು ಭಾಗವಹಿಸಬೇಕು.
ಗೋಳ್ತಮಜಲು ಕ್ಷೇತ್ರದ ಸಭೆ ನ.25 ರಂದು ನರಿಕೊಂಬು ಸತ್ಯಶ್ರೀ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ನರಿಕೊಂಬು, ಗೋಳ್ತಮಜಲು, ಬಾಳ್ತಿಲ, ಬರಿಮಾರು, ಕಡೇಶಿವಾಲಯ ಗ್ರಾ.ಪಂ.ವ್ಯಾಪ್ತಿಯವರು ಭಾಗವಹಿಸಬೇಕು.
ಸಜಿಪಮುನ್ನೂರು ಕ್ಷೇತ್ರದ ಸಭೆ ಡಿ.1ರಂದು ಪೊಳಲಿ ಸರ್ವಮಂಗಳ ಸಭಾಂಗಣದಲ್ಲಿ ನಡೆಯಲಿದ್ದು, ಕರಿಯಂಗಳ, ಸಜೀಪಮುನ್ನೂರು, ಬಡಗಬೆಳ್ಳೂರು, ಅಮ್ಮುಂಜೆ, ಅಮ್ಟಾಡಿ, ಕಳ್ಳಿಗೆ, ಸಜಿಪಮೂಡ ಗ್ರಾ.ಪಂ.ವ್ಯಾಪ್ತಿಯವರು ಭಾಗವಹಿಸಬೇಕು.
ಮಾಣಿ ಕ್ಷೇತ್ರದ ಸಭೆ ಡಿ.6ರಂದು ನೆಟ್ಲಮುಡ್ನೂರು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದ್ದು, ನೆಟ್ಲಮುಡ್ನೂರು, ಅನಂತಾಡಿ, ಮಾಣಿ, ವೀರಕಂಭ, ಪೆರಾಜೆ, ಬೋಳಂತೂರು ಗ್ರಾ.ಪಂ.ವ್ಯಾಪ್ತಿಯವರು ಭಾಗವಹಿಸಬೇಕು.
ಕೊಳ್ನಾಡು ಕ್ಷೇತ್ರದ ಸಭೆ ಡಿ.9ರಂದು ಸಾಲೆತ್ತೂರು ಸೌಹಾರ್ದ ಸಭಾಭವನದಲ್ಲಿ ನಡೆಯಲಿದ್ದು, ಸಾಲೆತ್ತೂರು, ಕೊಳ್ನಾಡು, ಕನ್ಯಾನ, ಕರೋಪಾಡಿ, ಮಂಚಿ, ವಿಟ್ಲಪಡ್ನೂರು ಗ್ರಾ.ಪಂ.ವ್ಯಾಪ್ತಿಯವರು ಭಾಗವಹಿಸಬೇಕು ಎಂದು ತಿಳಿಸಿದರು.
ಸಭೆ ಬಂಟ್ವಾಳ ತಹಶೀಲ್ದಾರ್ ಡಾ| ಸ್ಮಿತಾ ರಾಮು, ತಾ.ಪಂ.ಇಒ ರಾಜಣ್ಣ ಉಪಸ್ಥಿತರಿದ್ದರು.