ವಿಟ್ಲ : ಬಂಟ್ವಾಳ ತಾಲೂಕು ಕಚೇರಿಯಲ್ಲಿ ದಾಖಲೆಗಳು ಕಾಣೆಯಾಗುತ್ತಿವೆ. ಅಧಿಕಾರಿಗಳ ಬೇಜವಾಬ್ದಾರಿ ಇದಕ್ಕೆ ಕಾರಣ ಮತ್ತು ಆ ಮೂಲಕ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಆದುದರಿಂದ ನಾಪತ್ತೆಯಾದ ನಮ್ಮ ಕಡತಗಳನ್ನು ಹುಡುಕಿಕೊಡಬೇಕೆಂದು
ವಿಟ್ಲದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡುರವರು ಹೇಳಿದರು.
ಅವರು ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಲ್ಲಿನ ಸಮಸ್ಯೆಯ ಬಗ್ಗೆ ತಹಶೀಲ್ದಾರರಿಗೆ, ಸಹಾಯಕ ಉಪ ಆಯುಕ್ತರಿಗೆ ದೂರು ನೀಡಲಾಗಿದೆ. ಆದರೆ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಅವರು ಹೇಳಿದರು. ಪೆರುವಾಯಿ ಗ್ರಾಮದ ಸರಕಾರಿ ಶಾಲೆ ಕಡತ, ವಿಟ್ಲಕಸಬಾ ಗ್ರಾಮದ ಹಕ್ಕುಪತ್ರ ಕಡತ, ಕೆದಿಲ ಗ್ರಾಮದ ಬಡೆಕ್ಕಿಲ ಪರಿಶಿಷ್ಟ ಜಾತಿಯ ವ್ಯಕ್ತಿಯ ಕಡತ, ಕೇಪು ಗ್ರಾಮದ ವ್ಯಕ್ತಿಯ ಕಡತ, ವೀರಕಂಬ ಗ್ರಾಮದ ಮಹಿಳೆಯ ಕಡತ ಸಹಿತ ಇನ್ನೂ ಅನೇಕ ಕಡತಗಳು ತಾಲೂಕು ಕಚೇರಿಯಲ್ಲಿ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದರು. ಈ ಬಗ್ಗೆ ಸಂಬಂಧಪಟ್ಟವರು ಸ್ಪಂಧಿಸಬೇಕೆಂದು ಅವರು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾರಪ್ಪ ಸುವರ್ಣ, ಗಣೇಶ್ ಸೀಗೆಬಲ್ಲೆ ಉಪಸ್ಥಿತರಿದ್ದರು.