ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ಕಾರ್ಯಾಚರಣೆ; ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಹಲ್ಲೆ ನಡೆಸಿ ಚಿನ್ನಾಭರಣ ಸುಲಿಗೆ ಮಾಡಿದ್ದ ಮೂವರ ಬಂಧನ

0

ಫೊಟೋ:

ಪುತ್ತೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೂಡಬಿದರೆ ಪೊಲೀಸ್ ಠಾಣಾ ಸರಹದ್ದಿನ ಅಶ್ವಥಪುರದ ಬೆರಿಂಜೆಗುಡ್ಡೆ ಎಂಬಲ್ಲಿ ವಾಸವಿದ್ದ ಒಂಟಿ ಮಹಿಳೆ ಕಮಲ ಎಂಬವರ ಮನೆಗೆ ನುಗ್ಗಿ ಅವರ ಕುತ್ತಿಗೆ ಅದುಮಿ ಹಿಡಿದು ತಲವಾರು ತೋರಿಸಿ ಬೆದರಿಸಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಮತ್ತು 2 ಚಿನ್ನದ ಬಳೆಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಮಂಗಳೂರು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 62 ಗ್ರಾಂ ತೂಕದ ಚಿನ್ನಾಭರಣ, 2 ಸ್ಕೂಟರ್ ಮತ್ತು 3 ಮೊಬೈಲ್ ಪೋನ್, 1 ತಲವಾರು, 2 ಮಂಕಿಕ್ಯಾಪ್ ಇತ್ಯಾದಿ ಸೇರಿ ಒಟ್ಟು 4
.5 ಲಕ್ಷ ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಮೂಡಬಿದ್ರೆಯ ಬಡಗಮಿಜಾರ್ ಗ್ರಾಮದ ಅಶ್ವತ್ಥಪುರ ಬೆರಿಂಜೆಗುಡ್ಡೆಯ ದಿನೇಶ್ ಪೂಜಾರಿ (36ವ), ಮೂಲತಃ ಬೆಳ್ತಂಗಡಿ ಮರೋಡಿಯ ಉಳಗಡ್ಡೆ ಹೊಸಮನೆಯ ನಿವಾಸಿಯಾಗಿದ್ದು ಪ್ರಸ್ತುತ ಮೂಡಬಿದ್ರೆಯ ಕಲ್ಲಗುಡ್ಡೆಯಲ್ಲಿ ವಾಸವಾಗಿರುವ ಸುಕೇಶ್ ಪೂಜಾರಿ (32ವ) ಮತ್ತು ಮೂಡಬಿದ್ರೆ ಮೂಡುಮಾರ್ನಾಡು ನಿವಾಸಿ ಹರೀಶ್ ಪೂಜಾರಿ (34ವ) ಎಂಬವರ ವಿರುದ್ಧ ಮೂಡಬಿದರೆಯ ಅಶ್ವಥಪುರದ ಬೇರಿಂಜೆಗುಡ್ಡೆ ಎಂಬಲ್ಲಿ ಒಂಟಿಯಾಗಿ ವಾಸವಿರುವ ಕಮಲರವರ‌ ಮನೆಗೆ ದಿನಾಂಕ 30-08-2022ರಂದು ರಾತ್ರಿ 10-30 ಗಂಟೆಗೆ ಮಂಕಿಕ್ಯಾಪ್ ಹಾಕಿ ಕೈಗೆ ಗ್ಲೌಸ್ ಹಾಕಿ ಕೈಯಲ್ಲಿ ತಲವಾರು ಹಿಡಿದುಕೊಂಡು ಬಂದು ಕಮಲರವರ ಕುತ್ತಿಗೆ ಅದುಮಿ ತಲವಾರಿನ ಹಿಡಿಯಿಂದ ಗುದ್ದಿ ಹಲ್ಲೆ ನಡೆಸಿ ಕಮಲರವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಮತ್ತು ಚಿನ್ನದ 2 ಬಳೆಗಳನ್ನು ಬಲವಂತದಿಂದ ತೆಗೆದು ಸುಲಿಗೆ ಮಾಡಿದ್ದ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿತ್ತು.

ಈ ಪ್ರಕರಣವು ಗಂಭೀರ ಪ್ರಕರಣವಾದ್ದರಿಂದ ಈ ಪ್ರಕರಣದ ಪತ್ತೆಗೆ ಸಿಸಿಬಿ ಘಟಕದ ವಿಶೇಷ ತಂಡ ರಚನೆ ಮಾಡಲಾಗಿತ್ತು. ಸಿಸಿಬಿ ಘಟಕದ ವಿಶೇಷ ತಂಡದವರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪತ್ತೆಗೆ ಪ್ರಯತ್ನ ನಡೆಸಿದ್ದರು. ಸುಲಿಗೆ ಮಾಡಿದ ಆರೋಪಿಗಳು ಚಿನ್ನಾಭರಣಗಳನ್ನು ಮಾರಾಟ ಮಾಡಲು ಮಂಗಳೂರಿಗೆ ಬರುತ್ತಿದ್ದಾರೆಂದು ಮಾಹಿತಿ ಪಡೆದು 3 ಜನ ಆರೋಪಿಗಳನ್ನು ಕುಲಶೇಖರ ಚರ್ಚ್ ಗೇಟ್ ಬಳಿ ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ಅವರಿಂದ ಸುಲಿಗೆ ಮಾಡಿದ ಚಿನ್ನಾಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ 2 ಸ್ಕೂಟರ್ ಮತ್ತು 3 ಮೊಬೈಲ್ ಪೋನ್, 1 ತಲವಾರು, 2 ಮಂಕಿಕ್ಯಾಪ್ ಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಮಂಗಳೂರು ಸಿಸಿಬಿ ಘಟಕದಲ್ಲಿ ಪ್ರಸ್ತುತ ಪೊಲೀಸ್ ನಿರೀಕ್ಷಕರಾಗಿರುವ ಈ ಹಿಂದೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿದ್ದ ಪುತ್ತೂರು ಮೂಲದ ಮಹೇಶ್ ಪ್ರಸಾದ್ ಮತ್ತು ಸಿಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆರೋಪಿಗಳ ಪತ್ತೆ ಕಾರ್ಯ ನಡೆಸಿದ್ದರು. ಒಂಟಿ ಮಹಿಳೆ ಕಮಲಾರವರಿಗೆ ಹಿಂದೆ ಮುಂದೆ ಯಾರೂ ಸಂಬಂಧಿಕರಿಲ್ಲವೆಂದು, ಅವರಿಗೆ ಹಲ್ಲೆ ನಡೆಸಿ, ಸುಲಿಗೆ ಮಾಡಿದರೆ ಯಾರೂ ಕೂಡ ಪೊಲೀಸ್ ಠಾಣೆಗೆ ದೂರು ನೀಡಲು ಬರುವುದಿಲ್ಲವೆಂದು ದಿನೇಶ್ ಪೂಜಾರಿ, ಸುಕೇಶ್ ಪೂಜಾರಿ ಹಾಗೂ ಹರೀಶ್ ಪೂಜಾರಿ ಸಂಚು ರೂಪಿಸಿದ್ದರು. ದಿನೇಶನು ಮಹಿಳೆಗೆ ಹಲ್ಲೆ ನಡೆದು ಸುಲಿಗೆಯಾದ ನಂತರ ಸಹಾಯ ಮಾಡುವ ಹಾಗೆ ನಾಟಕ ಮಾಡಿಕೊಂಡು ಈ ಕೃತ್ಯ ಎಸಗಿದ್ದ ಎಂದು ಆರೋಪಿಸಲಾಗಿದೆ.

ಆರೋಪಿಗಳಾದ ದಿನೇಶ್ ಪೂಜಾರಿ, ಸುಕೇಶ್ ಪೂಜಾರಿ ಮತ್ತು ಹರೀಶ್ ಪೂಜಾರಿ ವಿರುದ್ಧ ಈ‌ ಹಿಂದೆಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳವು ಪ್ರಕರಣ ದಾಖಲಾಗಿದ್ದು, ೩ ಜನ ಕೂಡ ಸದ್ರಿ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಆರೋಪಿಗಳ ಪೈಕಿ ಸುಕೇಶ್ ಪೂಜಾರಿ ಎಂಬಾತನ ವಿರುದ್ಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ 307 ಐಪಿಸಿಯಂತೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಈ ಎರಡೂ ಪ್ರಕರಣದಲ್ಲೂ ಆರೋಪಿಗಳಿಂದ ಚಿನ್ನದ ಕರಿಮಣಿ ಸರ-1, 20 ಗ್ರಾಂ ತೂಕದ ಚಿನ್ನದ ಕೈ ಬಳೆ 2, ಬಿಳಿ ಬಣ್ಣದ ಕೇಸರಿ ಕೆಂಪು ಕಪ್ಪು ಸ್ಟಿಕ್ಕರ್ ಇರುವ ಹೋಂಡಾ ಡಿಯೋ ಸ್ಕೂಟರ್ -1, ಸುಝುಕಿ ಸ್ಕೂಟರ್ 1, ಕಪ್ಪು ಮೆಟಾಲಿಕ್ ಬಣ್ಣದ ವಿವೋ ಕಂಪೆನಿಯ ಮೊಬೈಲ್ ಪೋನ್ 1, ಟೆಕ್ನ ಸ್ಟಾರ್ಕ್ 6 ಗೋ ಕಂಪೆನಿಯ ಮೊಬೈಲ್ ಫೋನ್ 1, ಮೆಟಾಲಿಕ್ ಬಣ್ಣದ ಸ್ಯಾಮ್ ಸಂಗ್ ಕಂಪೆನಿಯ ಗ್ಯಾಲೆಕ್ಸಿ ಎ10 ಮೊಬೈಲ್ ಫೋನ್ 1, ಮಂಕಿ ಕ್ಯಾಪ್ 2, ನೀಲಿ ಬಣ್ಣದ ಹ್ಯಾಂಡ್ ಸರ್ಜಿಕಲ್ ಗ್ಲೌಸ್ 4, ಕಬ್ಬಿಣದ ಹಿಡಿಯ ಸುಮಾರು 15 ಇಂಚು ಉದ್ದದ ತಲವಾರು 1 ಮತ್ತು 3 ಹೆಲ್ಮೆಟ್ ವಶಪಡಿಸಿಕೊಳ್ಳಲಾಗಿದೆ‌.

LEAVE A REPLY

Please enter your comment!
Please enter your name here