ಮಾ.3ರಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚಲು ಸಾಮೂಹಿಕ ಧರಣಿ

0

ಬಂಟ್ವಾಳ: ಬ್ರಹ್ಮರಕೂಟ್ಲುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ ಪ್ರಥಮ‌ ಹಂತದ ಸಾಮೂಹಿಕ ಧರಣಿ ಮಾ.3ರಂದು ಬೆಳಿಗ್ಗೆ 9 ರಿಂದ 12.30ರವರೆಗೆ ನಡೆಯಲಿದೆ ಎಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಗೌರವಾಧ್ಯಕ್ಷ , ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.


ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಟಿ ಈ ಬಗ್ಗೆ ಮಾಹಿತಿ ನೀಡಿ, ಟೋಲ್ ಸಂಗ್ರಹಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೂಪಿಸಿರುವ ಹಲವು ನಿಯಮಗಳನ್ನು ಉಲ್ಲಂಘಿಸಿ ಬ್ರಹ್ಮರಕೂಟ್ಲು ಟೋಲ್ ಗೇಟ್ ಕಾರ್ಯನಿರ್ವಹಿಸುತ್ತಿದೆ. ಎರಡು ಟೋಲ್ ಗೇಟ್ ಗಳ ನಡುವೆ ಇರಬೇಕಾದ ಕನಿಷ್ಠ ಅಂತರ, ಸರ್ವಿಸ್ ರಸ್ತೆ ಇಲ್ಲದಿರುವುದು, ತಡೆಯಿಲ್ಲದ ಸಂಚಾರದ ಅವಕಾಶ ಸಹಿತ ಹಲವು ಪ್ರಧಾನ ನಿಯಮಗಳನ್ನು ಉಲ್ಲಂಘಿಸಿ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.


ಕಳೆದ 23 ವರ್ಷಗಳಿಂದ‌ ಈ ಟೋಲ್ ಗೇಟ್ ನಲ್ಲಿ ಸಾಕಷ್ಟು ಹಣ ಸಂಗ್ರಹ ಆಗಿದೆ. ಬ್ರಹ್ಮರಕೂಟ್ಲು ಟೋಲ್ಗೇಟ್ ಮುಚ್ಚಬೇಕು. ಇದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ.‌ ಇಲ್ಲಿನ ಸಿಬ್ಬಂದಿಗಳಿಂದ ಹಲವು ಬಾರಿ ಗೂಂಡಾ ವರ್ತನೆಯೂ ನಡೆದಿದೆ. ನಿಯಮ ಉಲ್ಲಂಘಿಸಿ ಟೋಲ್ ಸಂಗ್ರಹ ಮಾಡಲಾಗುತ್ತಿದ್ದು ಶಾಶ್ವತವಾಗಿ ಮುಚ್ಚಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲೆ ಒತ್ತಡ ತರುವುದಾಗಿ ತಿಳಿಸಿದರು. ಎಲ್ಲಾ ತಾಲೂಕಿನ ನಾಗರಿಕರು ಪ್ರಾಥಮಿಕ ಹಂತದ ಈ ಹೋರಾಟದಲ್ಲಿ ಕೈ ಜೋಡಿಸಬೇಕು ಎಂದರು. ಬೆಂಬಲ‌ ನೀಡುವ ಸಂಘಟನೆಗಳಿಗೆ ಸ್ವಾಗತಿಸುವುದಾಗಿ ತಿಳಿಸಿದರು.

ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ‌ ಮಾತನಾಡಿ, ಕಳೆದ 23 ವರ್ಷಗಳಿಂದ ಹೆದ್ದಾರಿ ಅಭಿವೃದ್ಧಿಗೆ ಹೂಡಿಕೆಯಾದ ದುಡ್ಡ ಬಂದಿಲ್ಲ ಎನ್ನುವುದು ಸರಿಯಲ್ಲ. ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಲೆಕ್ಕಚಾರ ನೀಡಬೇಕು. ಅಕ್ರಮ ಟೋಲ್ ಗೇಟ್ ನಿಲ್ಲಿಸಬೇಕು. ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಬೇಕು. ಇದು ನಮ್ಮ ಬೇಡಿಕೆಯಾಗಿದ್ದು, ಟೋಲ್ಗೇಟ್ ತೆರವಾಗುವರೆಗೆ ಹೋರಾಟ ಮಾಡುತ್ತೇವೆ. ಒಂದೇ ಜಿಲ್ಲೆಯಲ್ಲಿ ಆರು ಟೋಲ್ ಗೇಟ್ ಇರುವುದು ದೇಶದಲ್ಲೇ ಪ್ರಥಮ ಎಂದು ಟೀಕಿಸಿದರು. ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಸಂಚಾಲಕರಾದ ಬಿ.ಶೇಖರ್, ಮೋಹನ್ ಶೆಟ್ಟಿ ಹಾಗೂ ಹೋರಾಟ ಸಮಿತಿಯ ಪ್ರಮುಖರು ಹಾಜರಿದ್ದರು.

LEAVE A REPLY

Please enter your comment!
Please enter your name here