ವಿಟ್ಲ: ದಾಖಲೆಗಳಿಲ್ಲದೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಪತ್ತೆ ಹಚ್ಚಿದ ವಿಟ್ಲ ಠಾಣಾ ಪೊಲೀಸರು ವಾಹನ ಸಹಿತ ಜಾನುವಾರುಗಳನ್ನು ವಶಕ್ಕೆ ಪಡೆದು ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕರೈ ಪ್ರದೇಶದಲ್ಲಿ ಫೆ.26ರಂದು ರಾತ್ರಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನ ನಿಂತಿರುವ ಬಗ್ಗೆ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ, ವಿಟ್ಲ ಪೊಲೀಸ್ ಠಾಣೆಯ ಎಸ್.ಐ. ರಾಮಕೃಷ್ಣ ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದರು. ಈ ವೇಳೆ ಅಲ್ಲಿ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನ ರಸ್ತೆ ಬದಿಯಲ್ಲಿ ನಿಂತಿದ್ದು, ಅದರಲ್ಲಿ ಎರಡು ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು ಸಾಗಿಸುತ್ತಿರುವುದು ಕಂಡುಬಂದಿತ್ತು. ವಾಹನದಲ್ಲಿದ್ದ ಮಂಡ್ಯ ಜಿಲ್ಲೆಯ ನಿವಾಸಿಗಳಾದ ಚಾಲಕ ನವೀನ ಮತ್ತು ಚೇತನ್ ಅವರನ್ನು ವಿಚಾರಿಸಿದಾಗ, ಚನ್ನರಾಯಪಟ್ಟಣದ ಶಂಕರ ಎಂಬಾತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಶಾಫಿ ಎಂಬಾತನಿಗೆ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಕಳುಹಿಸಿರುವುದು ತಿಳಿದುಬಂದಿದೆ. ಜಾನುವಾರು ಸಾಗಾಟಕ್ಕೆ ಬೇರೊಬ್ಬರ ಹೆಸರಿನಲ್ಲಿ ದಾಖಲೆಗಳನ್ನು ಪಡೆದಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಾಹನ ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆದ ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.








