ಬಂಟ್ವಾಳ: ಅಭಿರುಚಿ ಜೋಡುಮಾರ್ಗದ ಆಶ್ರಯದಲ್ಲಿ, ಅಯನಾ ಮೂಡುಬಿದಿರೆ ತಂಡವು ಅ.30,ಶುಕ್ರವಾರ ಸಂಜೆ 6.30ಕ್ಕೆ ಏಕವ್ಯಕ್ತಿ ನಾಟಕ ಊರ್ಮಿಳಾ ಪ್ರದರ್ಶನವನ್ನು ಬಿ.ಸಿ.ರೋಡ್ ನ ಸ್ಪರ್ಶ ಕಲಾಮಂದಿರದಲ್ಲಿ ನೀಡಲಿದೆ.
ಹಿರಿಯ ಸಾಹಿತಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ರಚಿಸಿ , ರಂಗ ನಿರ್ದೇಶಕ ಡಾ . ಶ್ರೀಪಾದ ಭಟ್ ನಿರ್ದೇಶಿಸಿದ, ಸ್ತ್ರೀ ಸಂವೇದನೆಯ ಈ ನಾಟಕವನ್ನು ಮೂಡುಬಿದಿರೆಯ ದೂರದರ್ಶನ ಕಲಾವಿದೆ ವಿದುಷಿ ಅಯನಾ ವಿ. ರಮಣ್ ಅಭಿನಯಿಸಲಿದ್ದಾರೆ ಎಂದು ‘ಅಭಿರುಚಿ’ಯ ಪ್ರಕಟನೆ ತಿಳಿಸಿದೆ.
ವಿಶೇಷ ಆಹ್ವಾನಿತರಾಗಿ ಪಾಣೆಮಂಗಳೂರಿನ ಶ್ರೀ ವೀರ ವಿಠ್ಠಲ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಲಕ್ಷ್ಮೀ ಎನ್. ಪ್ರಮೋದ್ ಭಟ್ ದಂಪತಿ, ತಾಲೂಕು ಕ.ಸಾ.ಪ. ಅಧ್ಯಕ್ಷ ವಿಶ್ವನಾಥ ಬಂಟ್ವಾಳ್, ಸಂಸ್ಕಾರ ಭಾರತಿಯ ದ.ಕ. ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ ಫರಂಗಿಪೇಟೆ, ನಿವೃತ್ತ ಶಿಕ್ಷಕ ಜಯಾನಂದ ಪೆರಾಜೆ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರವಿಚಂದ್ರ ಬಂಟ್ವಾಳ್, ನಿವೃತ್ತ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಸಾವಿತ್ರಿ – ಸೀತಾರಾಮ ಭಟ್ ದಂಪತಿ, ಉದ್ಯಮಿಗಳಾದ ಮೈತ್ರಿ – ಮೋಹನ್ ಪೈ ಮಾಣಿ , ಪುಷ್ಪಲತಾ – ಎಂ.ಎನ್. ಕುಮಾರ್ ಮೆಲ್ಕಾರ್ , ಭಾಗವಹಿಸಲಿದ್ದಾರೆ.
ಈ ವಿಶಿಷ್ಟ ರಂಗಪ್ರಯೋಗವನ್ನು ವೀಕ್ಷಿಸಿ, ಇದರ ಕುರಿತಾಗಿ ಒಂದೆರಡು ಪುಟಗಳ ವಿಮರ್ಶೆ ಬರೆಯುವ ಬಗ್ಗೆ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ನಾಟಕ ನಡೆಯುವ ದಿನ ‘ಅಭಿರುಚಿ ‘ಯ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು, ಇಲ್ಲವೇ 9632430012, 8277557765 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ. ಆಸಕ್ತರಿಗೆ ಮುಕ್ತ ಪ್ರವೇಶವಿದ್ದು 60 ನಿಮಿಷಗಳ ಅವಧಿಯ ನಾಟಕ ಪ್ರದರ್ಶನ ಸಮಯಕ್ಕೆ ಸರಿಯಾಗಿ ನಡೆಯಲಿದ್ದು ಬಳಿಕ ಸಂವಾದ ನಡೆಯಲಿದೆ ಎಂದು ಅಭಿರುಚಿಯ ಪ್ರಕಟಣೆಯಲ್ಲಿ ತಿಳಿಸಿದೆ.








