ಮಾ.24: ಸಾಂಪ್ರಾದಾಯಿಕ ಆಚರಣಾ ಹಿತರಕ್ಷಣಾ ವೇದಿಕೆಯ ಸಭೆ

0

ಬಂಟ್ವಾಳ: ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಜೂಜು ಮಸ್ತಿ ಎನ್ನುವ ಹಣೆಪಟ್ಟಿ ಕಟ್ಟಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ನಿರ್ಬಂಧ ಹೇರುವ ಮುಖಾಂತರ ಈ ನಾಡಿನ ಜನತೆಯ ಧಾರ್ಮಿಕ ಭಾವನೆಗೆ ನೋವನ್ನುಂಟು ಮಾಡಿದೆ. ಜೂಜು ರಹಿತವಾದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಕಾವಳಪಡೂರು ಗ್ರಾಮದ ವಗ್ಗದಲ್ಲಿರುವ ಸಮೃದ್ಧಿ ಸಹಕಾರ ಸೌಧದಲ್ಲಿ ಮಾ.24ರಂದು ಬೆಳಿಗ್ಗೆ 9.30ರಿಂದ ಸಭೆ ನಡೆಯಲಿದೆ ಎಂದು ವೇದಿಕೆಯ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಶಿವಣ್ಣ ಗೌಡ ಇದ್ಯಾಡಿ ತಿಳಿಸಿದರು.


ಬಿ.ಸಿ.ರೋಡಿನ ಪ್ರೆಸ್‌ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಕರಾವಳಿ ಜಿಲ್ಲೆಯಲ್ಲಿ ದೇವತಾರಾಧನೆ, ದೈವರಾಧನೆ, ನಾಗರಾಧನೆಗಳು ನಡೆಯುತ್ತಿದ್ದು, ಇಂತಹ ಆರಾಧನೆಗಳು ನಡೆಯುವ ಸ್ಥಳಗಳಲ್ಲಿ ಜಾತ್ರೆ, ನೇಮೋತ್ಸವದ ಸಂದರ್ಭ ಸಾಂಪ್ರದಾಯಿಕವಾಗಿ ಕೋಳಿ ಅಂಕಗಳು ನಡೆದುಕೊಂಡು ಬಂದಿದೆ. ಪ್ರಸ್ತುತ ಪಕ್ಷಿ ಹಿಂಸೆ ಎನ್ನುವ ಹಣೆಪಟ್ಟಿ ಕಟ್ಟಿ ಕೋಳಿ ಅಂಕಗಳನ್ನು ನಿಲ್ಲಿಸಲಾಗುತ್ತಿದೆ. ನೇಮೋತ್ಸವ ಜಾತ್ರೋತ್ಸವ ಸಂದರ್ಭ ಪರಂಪರೆಯಿಂದ ಕೋಳಿ ಅಂಕಗಳು ನಡೆದುಕೊಂಡು ಬರುತ್ತಿತ್ತು. ಇದು ಬಡವರ ಕ್ರೀಡೆಯಾಗಿದ್ದು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಕೇಪುವಿನಲ್ಲಿ ಜೂಜು ರಹಿತ ಕೋಳಿ ಅಂಕ ನಡೆಯುತ್ತಿದ್ದರೂ ಅದನ್ನು ನಿಲ್ಲಿಸುವ ಪ್ರಯತ್ನ ನಡೆದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಜೂಜುರಹಿತವಾದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಅವಕಾಶ ನೀಡಬೇಕೆಂದು ಈ ಸಭೆಯ ಮೂಲಕ ಸರಕಾರವನ್ನು ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ವೇದಿಕೆಯ ಅಧ್ಯಕ್ಷ ಬೆಳ್ಳಿಯಪ್ಪ ಗೌಡ ತಿಮರೆಗುಡ್ಡೆ, ಪ್ರಮುಖರಾದ ಆನಂದ ಪೂಜಾರಿ, ಗಂಗಾಧರ ಪೂಜಾರಿ, ಹರೀಶ್‌ದಾಸ್ ಕಾವಳಕಟ್ಟೆ ಉಪಸ್ಥಿತರಿದ್ದರು.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here