ಮಂಗಳೂರು:ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೆನ್ನಟ್ಟಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಹರೀಶ್ ಪೂಂಜ ಅವರ ಕಾರು ಚಾಲಕ ನವೀನ್ ಪೂಜಾರಿಯವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.
ಶಾಸಕರ ಚಾಲಕ ನೀಡಿದ ದೂರು: ‘ಶಾಸಕ ಹರೀಶ್ ಪೂಂಜ ಅವರು ಅ.12ರಂದು ಬೆಂಗಳೂರಿಗೆ ಹೋಗಿದ್ದು ಅ.13ರಂದು ಸಂಜೆ 6.20ರ ವಿಮಾನದಲ್ಲಿ ಮಂಗಳೂರಿಗೆ ಬರುವ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಅವರ ಕಾರಲ್ಲಿ(ಕೆ.ಎ.19-ಎಂ.ಪಿ. 0369)ಸಂಜೆ 5.40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿದ್ದು ಶಾಸಕರು ರಾತ್ರಿ 7.07ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು.ಅಲ್ಲಿಂದ ಶಾಸಕರನ್ನು ಕುಳ್ಳಿರಿಸಿಕೊಂಡು ಕಾರಲ್ಲಿ ಮಂಗಳೂರು ಸರ್ಕ್ಯೂಟ್ ಹೌಸ್ಗೆ ಹೋಗಿದ್ದೆ.ಅಲ್ಲಿ ಶಾಸಕರು ಮೀಟಿಂಗ್ನಲ್ಲಿ ಭಾಗವಹಿಸಿ ರಾತ್ರಿ 10.45ಕ್ಕೆ ತಾನು ಓರ್ವನೇ ಶಾಸಕರ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದು, ಶಾಸಕರು ಅವರ ಸಂಬಂಧಿಕರಾದ ಪ್ರಶಾಂತ್ ಮತ್ತು ಕುಶಿತ್ ಅವರ ಕಾರಲ್ಲಿ(ಕೆಎ.19:ಎಂಇ-5560)ಸರ್ಕ್ಯೂಟ್ ಹೌಸ್ನಿಂದ ಹೊರಟಿದ್ದರು. ಎದುರಿನಿಂದ ಅವರ ಕಾರು ಹೋಗುತ್ತಿತ್ತು. ನಂತೂರು, ಪಡೀಲ್ ಮಾರ್ಗವಾಗಿ ಬರುತ್ತಾ ನಾಗುರಿ ರೈಲ್ವೇ ಓವರ್ ಬ್ರಿಡ್ಜ್ ತಳಭಾಗದಲ್ಲಿ ಒಂದು ಸ್ಕಾರ್ಪಿಯೋ ಕಾರು ನಾನು ಚಲಾಯಿಸಿಕೊಂಡು ಬರುತ್ತಿದ್ದ ಶಾಸಕರ ಕಾರನ್ನು ಹಿಂಬಾಲಿಸಿಕೊಂಡು ಬರುತ್ತಿತ್ತು. ತಾನು ಈ ವಿಚಾರವನ್ನು ಶಾಸಕರಿಗೆ ಮೊಬೈಲ್ ಮೂಲಕ ತಿಳಿಸಿದ್ದೆ. ಕಾರನ್ನು ಹಿಂಬಾಲಿಸಿಕೊಂಡು ಬರುವಂತೆ ಶಾಸಕರು ತಿಳಿಸಿದ್ದು ಅದರಂತೆ ನಾನು ಶಾಸಕರಿದ್ದ ಕಾರನ್ನು ಹಿಂಬಾಲಿಸಿಕೊಂಡು ಹೋಗುತ್ತಾ ಕಾರಿನ ಗ್ಲಾಸನ್ನು ಕೆಳಗೆ ಸರಿಸಿದಾಗ ಸ್ಕಾರ್ಪಿಯೋ ಕಾರಿನ ಚಾಲಕ ನಾನು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರನ್ನು ಬಿಟ್ಟು ಎದುರಿನಿಂದ ಹೋಗುತ್ತಿದ್ದ ಶಾಸಕರ ಕಾರನ್ನು ಫರಂಗಿಪೇಟೆ ಮೀನು ಮಾರ್ಕೆಟ್ನ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ ರಾತ್ರಿ 11.15 ಗಂಟೆಗೆ ಶಾಸಕರ ಕಾರಿಗೆ ಅಡ್ಡಲಾಗಿ ಬಂದು ಕಾರು ಚಾಲಕ ಕುಶಿತ್ ಅವರನ್ನುದ್ದೇಶಿಸಿ ಅವಾಚ್ಯವಾಗಿ ಬೈದು, ತನ್ನ ಕೈಯಲ್ಲಿದ್ದ ಆಯುಧವನ್ನು ತೋರಿಸಿ ಬೆದರಿಕೆ ಒಡ್ಡಿರುತ್ತಾನೆ.ಕೂಡಲೇ ತಾನು ಫರಂಗಿಪೇಟೆಯ ಹೊರಠಾಣೆಯ ಬಳಿ ಕಾರನ್ನು ನಿಲ್ಲಿಸಿದ ಸಮಯ ಸ್ಕಾರ್ಪಿಯೋ ಕಾರನ್ನು ರಭಸವಾಗಿ ಬಿಸಿ ರೋಡ್ ಕಡೆಗೆ ಚಲಾಯಿಸಿಕೊಂಡು ಹೋಗಿರುತ್ತಾನೆ.ಆದ್ದರಿಂದ ಶಾಸಕ ಹರೀಶ್ ಪೂಂಜ ಅವರಿದ್ದ ಹಾಗೂ ನಾನು ಚಲಾಯಿಸಿಕೊಂಡಿದ್ದ ಶಾಸಕರ ಕಾರಿಗೆ ಅಡ್ಡಗಟ್ಟಿ ಜೀವಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದ ಬಿಳಿ ಸ್ಕಾರ್ಪಿಯೋ ಕಾರಿನ ಚಾಲಕನ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಹರೀಶ್ ಪೂಂಜ ಅವರ ಕಾರಿನ ಚಾಲಕ ನವೀನ್ ಪೂಜಾರಿಯವರು ದೂರಿನಲ್ಲಿ ತಿಳಿಸಿದ್ದಾರೆ.ಅವರು ನೀಡಿದ್ದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಕಲಂ 341, 504, 506ರಡಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಓರ್ವನ ಸೆರೆ
ಘಟನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಽಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ ರಾತ್ರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಅವರು, ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಫಳ್ನೀರು ನಿವಾಸಿ ರಿಯಾಜ್ (38ವ.)ಎಂಬಾತನನ್ನು ಬಂಧಿಸಿ, ಸ್ಜಾರ್ಪಿಯೋ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಬಂಧಿತ ಆರೋಪಿ ಮೇಲೆ ಇದುವರೆಗೆ ಯಾವುದೇ ಕ್ರಿಮಿನಲ್ ಕೇಸ್ ಇರಲಿಲ್ಲ ಹಾಗೂ ಯಾವುದೇ ಆಯುಧಗಳು ಆತನ ಬಳಿ ಇರಲಿಲ್ಲ. ಸ್ಕಾಪಿಯೋ ಕಾರಲ್ಲಿ ಆರೋಪಿ ಒಬ್ಬನೇ ಇದ್ದದ್ದು, ರಸ್ತೆಯಲ್ಲಿ ವಾಹನ ಓವರ್ಟೇಕ್ ಮಾಡುವ ಸಂದರ್ಭದ ಜಗಳ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.