ಬಂಟ್ವಾಳ: ತಾಲ್ಲೂಕಿನಲ್ಲಿ ಅರ್ಹ ರೈತರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ ಹಲವು ವರ್ಷ ಕಳೆದರೂ ಅವರಿಗೆ ಜಮೀನು ಮಂಜೂರಾತಿ ಮಾಡಿಲ್ಲ. ಆದರೆ ರಾಜಕೀಯ ಹಿಂಬಾಲಕರು ಮತ್ತು ದಲ್ಲಾಳಿಗಳ ಮೂಲಕ ಬಂದು ಅರ್ಜಿ ಸಲ್ಲಿಸಿದರೂ ಜಮೀನು ಮಂಜೂರಾತಿ ಮಾಡಿರುವ ನಿದರ್ಶನಗಳಿವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಆರೋಪಿಸಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಆಡಳಿತ ಸೌಧದಲ್ಲಿ ಸೆ.20ರಂದು ಸಾರ್ವಜನಿಕ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರೊಂದಿಗೆ ಮಾತುಕತೆ ನಡೆಸಿ ಗಮನ ಸೆಳೆದರು. ಈ ಬಗ್ಗೆ ಕಡತ ಪರಿಶೀಲನೆ ನಡೆಸಿ ಮರು ನೋಟೀಸು ನೀಡಲು ತಹಸೀಲ್ದಾರ್ ಡಾ. ಸ್ಮಿತಾ ರಾಮು ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಅಕ್ರಮ ಮರಳುಗಾರಿಕೆ ಮತ್ತು ಗಣಿಗಾರಿಕೆ, ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ, ಪರಿಶಿಷ್ಟ ಜಾತಿ -ಪಂಗಡಕ್ಕೆ ಆದ್ಯತೆ, ಅನಧಿಕೃತ ಕಟ್ಟಡ, ನಿರ್ಮಾಣ, ಬಸ್ ಶೆಲ್ಟರ್, ವಾಹನ ನಿಲುಗಡೆ ಅವಾಂತರ ಬಗ್ಗೆ ನಾಗರಿಕರು ದೂರಿಕೊಂಡರು. ಉಪ ತಹಸೀಲ್ದಾರ್ ನವೀನ್ ಬೆಂಜನಪದವು, ನರೇಂದ್ರನಾಥ ಮಿತ್ತೂರು, ದಿವಾಕರ ಮುಗುಳ್ಯ, ಕಂದಾಯ ನಿರೀಕ್ಷಕ ಜನಾರ್ದನ, ವಿಜಯ್, ಪಂಚಾಯತ್ ರಾಜ್ ಎಇ ಇಂಜಿನಿಯರ್ ತಾರಾನಾಥ್ ಸಾಲಿಯಾನ್, ಪುರಸಭೆ ಮುಖ್ಯಾಧಿಕಾರಿ ಎ.ಆರ್.ಸ್ವಾಮಿ ಮತ್ತಿತರರು ಇದ್ದರು.