ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಬೊಳ್ಳಾಯಿ 2021-22ನೇ ಸಾಲಿನಲ್ಲಿ 85 ಕೋಟಿ ರೂಪಾಯಿ ವ್ಯವಹಾರ ನಡೆಸಿ 18,15,07,920 ರೂಪಾಯಿ ಠೇವಣಿ ಹೊಂದಿದ್ದು ಒಟ್ಟು 14,60,47,577 ರೂಪಾಯಿ ಸಾಲವನ್ನು ನೀಡಿ ವರದಿ ವರ್ಷದಲ್ಲಿ 10.65 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ. 25 ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ತಿಳಿಸಿದರು.
ಸಜೀಪಮೂಡ ಸುಭಾಷ ನಗರದ ಶ್ರೀ ಗುರು ಕಲ್ಯಾಣ ಮಂಟಪದಲ್ಲಿ ಸೆ.18ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘವು ೯ ಶಾಖೆಗಳನ್ನು ಹೊಂದಿದ್ದು ಮುಂದಿನ ವರ್ಷದಲ್ಲಿ ಮತ್ತೆ ೫ ಶಾಖೆಗಳನ್ನು ತೆರೆಯುವ ಯೋಜನೆ ಹೊಂದಲಾಗಿದೆ. ಮುಂದಿನ ೫ ವರ್ಷಗಳಲ್ಲಿ ೨೫ ಶಾಖೆಗಳನ್ನು ತೆರೆಯುವ ಯೋಜನೆ ಇದ್ದು ಸಮಾಜದ ಕಡು ಬಡವರಿಗೆ ಉದ್ಯೋಗವಕಾಶವನ್ನು ಕಲ್ಪಿಸಿ ಮುಂದಿನ ದಿನಗಳಲ್ಲಿ ೧೦೦ ಮಂದಿ ಮಹಿಳೆಯರಿಗೆ ಉದ್ಯೋಗವಕಾಶ ನೀಡುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದರು. ಮೂರ್ತೆದಾರರ ಸೇವಾ ಸಹಕಾರಿ ಸಂಘ ವಿಟ್ಲ ಇವರು ತಮ್ಮ ಸಹಕಾರಿ ಸಂಘವನ್ನು ನಮ್ಮ ಸಂಘಕ್ಕೆ ವಿಲೀನಗೊಳಿಸುವಂತೆ ಮಹಾಸಭೆಯಲ್ಲಿ ತೀರ್ಮಾನಿಸಿದ್ದಾರೆ, ಬಂಟ್ವಾಳ ತಾಲೂಕಿನಲ್ಲಿ ಸ್ಥಗಿತಗೊಂಡಿರುವ ಮೂರ್ತೆದಾರರ ಸೇವಾ ಸಹಕಾರಿ ಸಂಘವನ್ನು ನಮ್ಮ ಸಂಘಕ್ಕೆ ಸೇರ್ಪಡೆಗೊಳಿಸುವ ಯೋಜನೆ ಇದೆ, ಸಂಘದ ಕಾರ್ಯವ್ಯಾಪ್ತಿಯಾದ ಸುಭಾಷ್‌ನಗರದಲ್ಲಿ ಆಡಳಿತ ಕಚೇರಿ, ಸಮುದಾಯ ಭವನ, ತರಬೇತಿ ಕೇಂದ್ರ ಹಾಗೂ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವ ಯೋಜನೆ ಹೊಂದಿದ್ದು ಸುಭಾಷ್‌ನಗರದಲ್ಲಿ ಜಾಗವನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ೩೦ ಸಾವಿರ ರೂಪಾಯಿಯ ತ್ವರಿತ ಸಾಲ ಯೋಜನೆ ಹೊಂದಿದ್ದು ಮಹಿಳೆಯರ ಆರ್ಥಿಕ ಸಂಕಷ್ಟಕ್ಕೆ ಸಂಘ ಸ್ಪಂದನೆ ನೀಡುತ್ತಿದೆ. ಸಂಘದ ವತಿಯಿಂದ ನಡೆಯುತ್ತಿರುವ ಗುರುಶ್ರೀ ಸ್ವಸಹಾಯ ಸಂಘದ ಸಂಖ್ಯೆಯನ್ನು ವಿಸ್ತರಿಸಿ ಮಹಿಳೆಯರು ಆ ಮೂಲಕವೂ ಸಾಲ ಪಡೆದು ಸ್ವಾವಲಂಬಿ ಜೀವನಕ್ಕೆ ಅವಕಾಶ ಕಲ್ಪಿಸಲಾಗಿದೆ, ಅನಾರೋಗ್ಯ ಪೀಡಿತ ಸದಸ್ಯರಿಗೆ ಆರ್ಥಿಕ ನೆರವು, ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಕ್ರೀಡಾ ಚಟುವಟಿಕೆಗಳಿಗೂ ಸಂಘ ವಿಶೇಷ ಕೊಡುಗೆ ನೀಡುತ್ತಿದೆ ಎಂದರು.
ಮುಖ್ಯ ಅತಿಥಿ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಡಾ. ರಾಜರಾಮ್ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಸದಸ್ಯರ ಮಕ್ಕಳ ವಿದ್ಯೆಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ ಎಂದರು. ಸಮಾಜ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕಾದರೆ ವಿದ್ಯೆ ಮುಖ್ಯ, ಆಗ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹದಂತೆ ನಮ್ಮ ಬದುಕು ಅಭಿವೃದ್ದಿಯಾಗಲು ಸಾಧ್ಯವಿದೆ. ವಿದ್ಯೆ ಮನುಷ್ಯನಿಗೆ ಭೂಷಣ. ಅಂಕ ಗಳಿಸುವುದೊಂದೆ ವಿದ್ಯೆಯಲ್ಲ. ವಿದ್ಯೆ ಜೊತೆಗೆ ಸಂಸ್ಕಾರವನ್ನು ಪಡೆದಾಗ ವ್ಯಕ್ತಿ ಶಕ್ತಿಯಾಗಿ ಅಭಿವೃದ್ಧಿ ಕಾಣುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಮೂರ್ತೆದಾರರಾದ ಡೊಂಬಯ್ಯ ಪೂಜಾರಿ, ರಾಘವ ಪೂಜಾರಿ, ಮಾರ್ನಬೈಲು ಶಾಖೆಯ ವ್ಯವಸ್ಥಾಪಕಿ ನಿಶ್ಮಿತಾ ಕೆ., ನಿತ್ಯನಿಧಿ ಸಂಗ್ರಾಹಕ ಜೆ.ಎಫ್. ನಿಝಾರ್ ಅವರನ್ನು ಗೌರವಿಸಲಾಯಿತು. ಅತ್ಯಧಿಕ ಅಂಕ ಗಳಿಸಿದ ೬೬ ಮಂದಿ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಶ್ರೀ ಗುರು ಕಲ್ಯಾಣ ಮಂಟಪಕ್ಕೆ ಪೋಡಿಯಂ ಹಸ್ತಾಂತರಿಸಲಾಯಿತು. ಸದಸ್ಯ ರತ್ನಾಕರ ನಾಡಾರ್ ಹಾಗೂ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿ ಸಂದೀಪ್ ಅನಿಸಿಕೆ ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾದ ವಿಠಲ ಬೆಳ್ಚಾಡ, ಅಶೋಕ್, ಸುಜಾತ ಮೋಹನದಾಸ, ವಾಣಿವಸಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕ ರಮೇಶ್ ಅನ್ನಪ್ಪಾಡಿ ಸ್ವಾಗತಿಸಿದರು, ನಿರ್ದೇಶಕ ಜಯಶಂಕರ ಕಾನ್ಸಲೆ ವಂದಿಸಿದರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಮತಾ ಜಿ. ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನಿರ್ದೆಶಕ ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.