ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವ ಕಾರ್ಯ ಚುರುಕುಗೊಳಿಸಲು ಕೂಡಲೇ ಕಾರ್ಯಪ್ರವೃತ್ತವಾಗಬೇಕು ; ಇಲಾಖೆಗಳಿಗೆ ದ.ಕ.ಜಿಲ್ಲಾಧಿಕಾರಿ ಸೂಚನೆ

0

ಮಂಗಳೂರು: ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವ ಕಾರ್ಯವನ್ನು ಚುರುಕುಗೊಳಿಸಲು ಎಲ್ಲಾ ಇಲಾಖೆಗಳು ಕೂಡಲೇ ಕಾರ್ಯಪ್ರವೃತ್ತವಾಗಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಸೂಚಿಸಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಯವರು, ಸರಕಾರದ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಎಪಿಕ್ಕಾ ರ್ಡ್‌ಗೆ ಆಧಾರ್ ಅಥವಾ ಅದನ್ನು ಹೊರತು ಪಡಿಸಿ ನಿಗದಿಪಡಿಸಿದ ನರೇಗಾ ಜಾಬ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಪಾಸ್‌ಬುಕ್, ಆರೋಗ್ಯ ವಿಮೆ, ಚಾಲನಾ ಪರವಾನಗಿ, ಪಾನ್‌ಕಾರ್ಡ್, ಎನ್‌ಪಿಆರ್‌ನಡಿ ನೀಡಲಾದ ಸ್ಮಾರ್ಟ್‌ಕಾರ್ಡ್, ಪಾಸ್‌ಪೋರ್ಟ್, ಪಿಂಚಣಿ ದಾಖಲಾತಿಗಳು, ಕೇಂದ್ರ ಅಥವಾ ರಾಜ್ಯ ಸರಕಾರ ಅಥವಾ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಿದ ನೌಕರರ ಗುರುತಿನ ಚೀಟಿ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ನೀಡಿದ ಅಧಿಕೃತ ಗುರುತಿನ ಚೀಟಿ ಸಹಿತ 11 ದಾಖಲಾತಿಗಳಲ್ಲಿ ಯಾವುದಾದರೂ ಒಂದನ್ನು ಜೋಡಿಸಬೇಕು. ಈ ಪ್ರಕ್ರಿಯೆಯ ಬಗ್ಗೆ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳಿಗೆ ಕಚೇರಿಗಳಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಬೇಕು,ಸಿಬ್ಬಂದಿಗಳ ಸಮ್ಮುಖ ಅಧಿಕಾರಿಗಳು ತಮ್ಮ ಎಪಿಕ್ ಕಾರ್ಡ್‌ಗೆ ಆಧಾರ್‌ನ್ನು ಲಿಂಕ್ ಮಾಡಬೇಕು.ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವು ಈ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಕರೆ:

ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ದೃಢೀಕರಿಸಲು ಸ್ವಯಂ ಪ್ರೇರಿತ ಆಧಾರದ ಮೇಲೆ ವೋಟರ್ ಹೆಲ್ಪ್‌ಲೈನ್ ಆಪ್ ಮೂಲಕ ಆನ್‌ಲೈನ್‌ನಲ್ಲಿ ೬ಬಿ ನಮೂನೆ ಸಲ್ಲಿಸಿ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ಜೋಡಣೆ ಮಾಡಲು ಕ್ರಮ ವಹಿಸುವಂತೆ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಕರೆ ನೀಡಿದ್ದಾರೆ.

ಎಲ್ಲಾ ರಾಜಕೀಯ ಪಕ್ಷದವರು ಪ್ರತಿಯೊಂದು ಮತಗಟ್ಟೆಗೆ ಬಿಎಲ್‌ಎ (ಮತಗಟ್ಟೆ ಏಜೆಂಟ್) ನೇಮಕ ಮಾಡಬೇಕು,ಬಿಎಲ್‌ಎಗಳು ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು, ಒಂದು ವೇಳೆ ಪಟ್ಟಿಯಲ್ಲಿರುವ ಮತದಾರರು ಮೃತರಾಗಿದ್ದರೆ ಅಥವಾ ವಲಸ ಹೋಗಿದ್ದರೆ ಅಂತಹವರ ಮಾಹಿತಿಯನ್ನು ಬಿಎಲ್‌ಒಗಳಿಗೆ ನೀಡಬೇಕು, ೧೮ ವರ್ಷ ಮೇಲ್ಪಟ್ಟ ಅರ್ಹ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ಬಗ್ಗೆ ಪರಿಶೀಲಿಸಬೇಕು, ಮತದಾರರ ಪಟ್ಟಿಯಲ್ಲಿ ಒಂದೇ ಕುಟುಂಬದ ಸದಸ್ಯರ ಹೆಸರು ಒಂದೇ ಕಡೆ ಬರುವಂತೆ ನೋಡಿಕೊಳ್ಳಬೇಕು, ಈ ಬಗ್ಗೆ ಸಮಸ್ಯೆಗಳಿದ್ದರೆ ರಾಜಕೀಯ ಪಕ್ಷದಿಂದ ನೇಮಕವಾಗಿರುವ ಬಿಎಲ್‌ಎಗಳು ಬೂತ್ ಮಟ್ಟದ ಅಧಿಕಾರಿಗಳ ಸಮನ್ವಯದೊಂದಿಗೆ ಸರಿಪಡಿಸಿಕೊಳ್ಳಬೇಕು.ಎಲ್ಲಾ ಬಿಎಲ್‌ಎಗಳು ತಮ್ಮ ವ್ಯಾಪ್ತಿಗೆ ಬರುವ ಅರ್ಹ ವಿಕಲಚೇತನರನ್ನು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವ ಬಗ್ಗೆ ಕ್ರಮ ವಹಿಸಬೇಕು.ಎಲ್ಲಾ ಮತದಾರರಿಗೆ ಎಪಿಕ್ ಕಾರ್ಡ್ ನೀಡಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.ತೃತೀಯ ಲಿಂಗದ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಮತಗಟ್ಟೆಗಳಿರುವ ಕಟ್ಟಡಗಳು ಶಿಥಿಲಗೊಂಡಿದ್ದರೆ ಅಥವಾ ಅಪಾಯಕಾರಿ ಹಂತದಲ್ಲಿದ್ದರೆ ಆ ಬಗ್ಗೆ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಮತಗಟ್ಟೆ ವಿಲೀನ/ವಿಭಜನೆಗೆ ತಹಶೀಲ್ದಾರ್ ಮೂಲಕ ವರದಿ: ೩೦೦ಕ್ಕಿಂತ ಕಡಿಮೆ ಮತದಾರರಿರುವ ಮತಗಟ್ಟೆಗಳಿದ್ದಲ್ಲಿ ಅಂತಹ ಮತಗಟ್ಟೆಗಳನ್ನು ಹತ್ತಿರದ ಮತಗಟ್ಟೆಗೆ ವಿಲೀನ ಮಾಡುವ ಬಗ್ಗೆ ಮತ್ತು ೧೫೦೦ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳಿದ್ದಲ್ಲಿ ಅಂತಹ ಮತಗಟ್ಟೆಗಳನ್ನು ವಿಭಜನೆ ಮಾಡುವ ಬಗ್ಗೆ ಪ್ರಸ್ತಾವನೆಗಳಿದ್ದಲ್ಲಿ ತಹಶೀಲ್ದಾರ್ ಮುಖಾಂತರ ವರದಿ ಸಲ್ಲಿಸುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದರು.

ಪ್ರತಿ ಕಾಲೇಜಿನಲ್ಲೂ ಕ್ಯಾಂಪಸ್ ಅಂಬಾಸಿಡರ್:

ಜಿಲ್ಲೆಯ ಪ್ರತಿಯೊಂದು ಕಾಲೇಜಿನಲ್ಲೂ ಕ್ಯಾಂಪಸ್ ಅಂಬಾಸಿಡರ್ ನೇಮಕ ಮಾಡಬೇಕು.ಅವರ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ಅವರ ಹಾಗೂ ಅವರ ಕುಟುಂಬದವರ ಆಧಾರ್ ಹಾಗೂ ಗುರುತಿನ ಚೀಟಿ ತರುವಂತೆ ತಿಳಿಸಿ, ಕಾಲೇಜು ಹಂತದಲ್ಲಿಯೇ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ವೋಟರ್ ಹೆಲ್ಪ್‌ಲೈನ್ ಆಪ್ ಮೂಲಕ ಜೋಡಣೆ ಮಾಡಿಸಲು ಕ್ರಮ ಜರಗಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಡಿಸಿ ಸೂಚಿಸಿದರು.ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ.,ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್,ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

ಆ.21ರಂದು ಬಿಎಲ್‌ಎಗಳು ಮತಗಟ್ಟೆಯಲ್ಲಿ ಹಾಜರಿರಬೇಕು

ಆ.21ರ ಬೆಳಗ್ಗೆ 10ರಿಂದ ಸಂಜೆ ೫ರವರೆಗೆ ಎಲ್ಲಾ ಬಿಎಲ್‌ಒಗಳು ಮತಗಟ್ಟೆಯಲ್ಲಿ ಹಾಜರಿದ್ದು, ಮತಗಟ್ಟೆ ಅಧಿಕಾರಿಗಳು, ಮೇಲ್ವಿಚಾರಕರು, ಮತಗಟ್ಟೆ ಏಜೆಂಟ್‌ರೊಂದಿಗೆ 6ಬಿ ಸಂಬಂಧಿಸಿದಂತೆ ಆಯಾ ಗ್ರಾಮ ವ್ಯಾಪ್ತಿಯಲ್ಲಿ ಎಪಿಕ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವ ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಳ್ಳಬೇಕು – ಡಾ.ಕುಮಾರ್, ಸಿಇಒ ದ.ಕ.ಜಿ.ಪಂ.

ಮತದಾರರು ವೋಟರ್ ಹೆಲ್ಪ್‌ಲೈನ್ ಆಪ್ (Voter Helpline App)ನಲ್ಲಿ ಆನ್‌ಲೈನ್ ಮೂಲಕ 6ಬಿ ನಮೂನೆಯನ್ನು ಸಲ್ಲಿಸಿ ಆಧಾರ್ ಸಂಖ್ಯೆಯನ್ನು ಚುನಾವಣಾ ಗುರುತಿನ ಚೀಟಿಗೆ ಲಿಂಕ್ ಮಾಡಬಹುದಾಗಿದೆ -ಡಾ.ರಾಜೇಂದ್ರ ಕೆ.ವಿ., ದ.ಕ.ಜಿಲ್ಲಾಧಿಕಾರಿ

LEAVE A REPLY

Please enter your comment!
Please enter your name here