ಬೆಂಗಳೂರು: ನಾಲ್ವರ ಹಂತಕ ಪ್ರವೀಣ್ ಕುಮಾರ್ ಬಿಡುಗಡೆ ವಿಚಾರ ಕುರಿತಂತೆ ಅಧಿಕಾರಿಗಳ ಸಭೆ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಂಗಳೂರಿನ ವಾಮಂಜೂರಿನಲ್ಲಿ 1994ರಲ್ಲಿ ತನ್ನ ನಾಲ್ವರು ಸಂಬಂಧಿಕರನ್ನು ಹತ್ಯೆಗೈದ ಪ್ರವೀಣ್ ಕುಮಾರ್ ಬಿಡುಗಡೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು.
ಪ್ರವೀಣ್ ಗೆ 14 ವರ್ಷದ ಹಿಂದೆ ಶಿಕ್ಷೆ ಆಗಿದೆ. ಮೊದಲು ಗಲ್ಲು ಶಿಕ್ಷೆ ಆಗಿತ್ತು. ಬಳಿಕ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷಗೆ ಬದಲಾವಣೆ ಮಾಡಿತ್ತು. ರಾಷ್ಟ್ರಪತಿಗಳು ಅದನ್ನು ಎತ್ತಿ ಹಿಡಿದಿದ್ದರು. ಅವರ ಹಿನ್ನೆಲೆ ಈಗ ನಮಗೆ ಗೊತ್ತಾಗುತ್ತಿದೆ ಎಂದರು.
ಅವರ ಮನೆಯವರು ಬೆಂಗಳೂರಿಗೆ ಬಂದಿದ್ದಾರೆ, ಯಾವುದೇ ಕಾರಣಕ್ಕೂ ಅವರ ಬಿಡಬೇಡಿ ಅಂತಿದ್ದಾರೆ, ಹೊರಗೆ ಬಂದರೆ ಮತ್ತೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ. ಬೆಳಗಾವಿ ಜೈಲಿನಿಂದ ಕೋರ್ಟ್ ಗೆ ಬರುವಾಗ ಈತ ಹಿಂದೆ ತಪ್ಪಿಸಿಕೊಂಡು ಹೋಗಿದ್ದ, ಗೋವಾದಲ್ಲಿ ಮದುವೆ, ಮಗು ಇತ್ತು ಅಂತ ಕುಟುಂಬವರು ಹೇಳಿದ್ದಾರೆ ಎಂದರು.
ಹಳೆಯ ಸರ್ಕಾರದ ಆದೇಶದಲ್ಲಿ 14 ವರ್ಷ ಈತನಿಗೆ ಸನ್ನಡತೆ ಇದೆ. ಹೀಗಾಗಿ ಅವನಿಗೆ ಬಿಡುಗಡೆ ಮಾಡುವ ಪ್ರಸ್ತಾಪ ಬಂದಿದೆ. ಇದೊಂದು ವಿಶೇಷ ಕೇಸ್. ಅಧಿಕಾರಿಗಳ ಸಭೆ ಕರೆದಿದ್ದೇನೆ. ಕಾನೂನಿನ ಪ್ರಕಾರ ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ. ಎರಡು ಕುಟುಂಬಕ್ಕೆ ಭದ್ರತೆ ಕೊಡುತ್ತೇವೆ. ಕಳೆದ ಕ್ಯಾಬಿನೆಟ್ ನಲ್ಲಿ ಕೊಲೆ ಮಾಡಿದವರಿಗೆ, ರೇಪ್ ಮಾಡಿದವರಿಗೆ ಬಿಡಬಾರದು ಅಂತ ನಿಯಮ ಮಾಡಿದ್ದೇವೆ. ಇನ್ಮುಂದೆ ಇಂತಹ ಕೇಸ್ ನಲ್ಲಿ ಹೊರಗೆ ಬರಲು ಬಿಡುವುದಿಲ್ಲ ಎಂದರು.