ಒಮನ್ ಕರಾವಳಿಯಲ್ಲಿ ಹಡಗಿಗೆ ಇರಾನ್ ಕ್ಷಿಪಣಿ ದಾಳಿ : ಬಿಳಿಯೂರಿನ ಯುವ ನಾವಿಕ ರಚನ್ ಆರ್ ಕೆ ಅಪಾಯದಿಂದ ಪಾರು

0

ಬಂಟ್ವಾಳ: ಒಮನ್ ಕರಾವಳಿಯಲ್ಲಿದ್ದ ವಾಣಿಜ್ಯ ಹಡಗಿನ ಮೇಲೆ ಜು.12ರಂದು ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇದರಲ್ಲಿದ್ದ 10 ಭಾರತೀಯರ ಪೈಕಿ ಓರ್ವ ಕಾಣೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರುವೇಲು ಬಿಳಿಯೂರು ಗ್ರಾಮದ ಯುವಕ ರಚನ್ ಆರ್ ಕೆಯವರನ್ನು ರಕ್ಷಣೆ ಮಾಡಲಾಗಿದೆ.

ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದ ಬಳಿಕ ಒಮನ್ ನೌಕಾಪಡೆಯು ಹಡಗಿನಲ್ಲಿದ್ದವರನ್ನು ರಕ್ಷಿಸಿದೆ. ಪ್ರಸ್ತುತ ಅವರು ಒಮನ್‌ನಲ್ಲಿ ತಮ್ಮ ಶಿಪ್ಪಿಂಗ್ ಕಂಪನಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸುರಕ್ಷಿತವಾಗಿದ್ದು, ದುಬೈಯತ್ತ ಪ್ರಯಾಣ ಬೆಳೆಸಿದ್ದಾರೆ.

ಜು.12ರಂದು ಏಕಾಏಕಿ ಕ್ಷಿಪಣಿ ದಾಳಿ:
ರಚನ್ ಆರ್ ಕೆ ಒಮನ್ ಹಡಗಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಜುಲೈ 12ರಂದು ಏಕಾಏಕಿ ಇರಾನ್ ಸಿಡಿಸಿದ ಕ್ಷಿಪಣಿ ಇವರ ಹಡಗಿಗೆ ಬಡಿದಿದ್ದು, ಎಂಜಿನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸಿಬ್ಬಂದಿ ಜೀವರಕ್ಷಕ ದೋಣಿಯ ಮೂಲಕ ಹಡಗನ್ನು ತೊರೆದು ಹೊರಬಂದಿದ್ದು, ಕೂಡಲೇ ಒಮನ್ ನೌಕಾಪಡೆಯು ಬಹುತೇಕ ಸಿಬ್ಬಂದಿಯನ್ನು ರಕ್ಷಿಸಿ, ಸುರಕ್ಷಿತವಾಗಿ ತನ್ನ ನೆಲೆಗೆ ಕರೆದುಕೊಂಡು ಹೋಗಿದೆ.

ರಚನ್ ಮನೆಯಲ್ಲಿ ಮಡುಗಟ್ಟಿದ್ದ ಆತಂಕ:
ಒಮನ್ ಹಡಗಿನ ಮೇಲೆ ದಾಳಿಯಾಗುತ್ತಿದ್ದಂತೆ ರಚನ್ ಕಾರ್ಯನಿರ್ವಹಿಸುತ್ತಿದ್ದ ಹಡಗಿನ ಸಂಸ್ಥೆಯ ಅಧಿಕಾರಿಗಳು ರಚನ್ ತಂದೆ ಕೃಷಿಕರಾಗಿರುವ ರೋಹಿತಾಕ್ಷರಿಗೆ ಕರೆ ಮಾಡಿ ತಿಳಿಸಿದ್ದಾರೆ. ಅಲ್ಲದೇ, ರಚನ್ ಸಹೋದರ ಗಗನ್ ರವರಿಗೂ ವಿಷಯ ಗೊತ್ತಾಗಿತ್ತು. ರಚನ್ ಸಹೋದರರು ತಮ್ಮ ತರವಾಡು ಮನೆಯಲ್ಲಿ ದೈವದ ಕಾರ್ಯದಲ್ಲಿ ನಿರತರಾಗಿದ್ದು, ವಿಷಯ ಗೊತ್ತಾಗಿದ್ದರೂ ಅಲ್ಲಿ ಯಾರಿಗೂ ವಿಷಯ ತಿಳಿಸದೇ, ದೈವದ ಕೆಲಸ ಮುಗಿಸಿ ಮನೆಗೆ ಬಂದಿದ್ದಾರೆ. ಆದರೆ ರಚನ್ ತಾಯಿ ಲಲಿತಾರವರು ಮಾತ್ರ ತನ್ನ ಮಗ ಸುರಕ್ಷಿತವಾಗಿದ್ದಾನೆಂದು ಅಧಿಕಾರಿ ಹೇಳಿದ್ದರೂ ತನಗೆ ರಚನ್ ಜೊತೆ ಮಾತನಾಡಲೇಬೇಕು, ಅಂತ ಕಣ್ಣೀರಿಡುತ್ತಿದ್ದರು.


ವಾಯ್ಸ್ ಮೆಸೆಜ್ ನೀಡಿತು ಚೈತನ್ಯ:
ಅಧಿಕಾರಿ ಕರೆ ಮಾಡಿ ರಚನ್ ಆರ್ ಕೆ ಸೇಫ್ ಆಗಿದ್ದಾರೆ ಅಂದರೂ ಕೂಡ ತಾಯಿ ಲಲಿತಾರವರು ಮಗನ ವಾಟ್ಸಾಪ್ ನಂಬರ್ ಗೆ ವಾಯ್ಸ್ ಮೆಸೆಜ್ ಕಳುಹಿಸಿದ್ದರು. ನೀನು ಸೇಫ್ ಆಗಿದ್ದೀಯಾ ಅಂತ ಕೇಳಿ ವಾಯ್ಸ್ ಮೆಸೆಜ್ ಕಳುಹಿಸಿದ್ದರು. ಆದರೆ ಸುಮಾರು 4 ಗಂಟೆಯ ನಂತರ ಮಗನ ವಾಯ್ಸ್ ಮೆಸೆಜ್ ಬಂತು, ಅಲ್ಲಿಂದ ನಂತರವೇ ಬಿಳಿಯೂರಿನಲ್ಲಿರುವ ರೋಹಿತಾಕ್ಷರ ಮನೆಯಲ್ಲಿ ನಗು ಮೂಡಿದೆ.


ವೀಡಿಯೋ ಕಾಲ್ ಮಾಡಿದ್ದ ರಚನ್ ಆರ್ ಕೆ, ಕೆಲ ದಿನಗಳಲ್ಲೇ ಊರಿಗೆ ವಾಪಾಸ್ :
ವಾಯ್ಸ್ ಮೆಸೆಜ್ ಬಂದ ಕೆಲ ಗಂಟೆಗಳ ನಂತರ ರಚನ್ ವೀಡಿಯೋ ಕರೆ ಮಾಡಿದ್ದು, ಅದನ್ನು ನೋಡಿದ ನಂತರ ರೋಹಿತಾಕ್ಷರ ಕುಟುಂಬ ಆತಂಕದಿಂದ ಹೊರ ಬಂದು ನಿರಾಳವಾಗಿದೆ. ನಂತರ ರಚನ್ ಆರ್ ಕೆ ನಿರಂತರವಾದ ಸಂಪರ್ಕದಲ್ಲಿದ್ದು, ಜು.14ರಂದು ಅವರನ್ನು ದುಬೈಗೆ ಕರೆದುಕೊಂಡು ಹೋಗಲಾಗುತ್ತಿದೆ ಅನ್ನುವ ಮಾಹಿತಿ ಲಭಿಸಿದ್ದು, ಈ ವಾರಾಂತ್ಯ ಅಥವಾ ಮುಂದಿನ ವಾರ ತವರಿಗೆ ಮರಳುವ ಸಾಧ್ಯತೆಯಿದೆ.


ಪುತ್ತೂರಿನ ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿ:
ಕರುವೇಲು ಬಿಳಿಯೂರಿನ ರಚನ್ ಆರ್ ಕೆ ಯವರು ತಮ್ಮ ಪದವಿ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ನಂತರ ಮುಂಬೈನಲ್ಲಿ ಮೆರೈನ್ ಕೋರ್ಸ್ ಮುಗಿಸಿ ಓಮನ್ ಕಂಪೆನಿಯ ಹಡಗು ಸೇವೆಗೆ ಸೇರಿದ್ದರು.


ಮಗನನ್ನು ನೋಡಲು ಕಾಯುತ್ತಿರುವ ತಾಯಿ:
ರಚನ್ ಆರ್ ಕೆಯವರು ವೀಡಿಯೋ ಕಾಲ್, ವಾಯ್ಸ್ ಕಾಲ್ ಮಾಡಿದ್ದರೂ ಕೂಡ ರಚನ್ ತಾಯಿ ಲಲಿತಾ, ಸಹೋದರರಾದ ಗಗನ್, ರಾಹುಲ್, ತಂದೆ ರೋಹಿತಾಕ್ಷರವರು ರಚನ್ ರನ್ನು ನೋಡಲು ಕಾಯುತ್ತಿದ್ದಾರೆ. ಅವರು ಊರಿಗೆ ಬರುವುದನ್ನೇ ಎದುರು ನೋಡುತ್ತಿದ್ದಾರೆ. ಅಲ್ಲದೇ, ರಚನ್ ಆರ್ ಕೆಯವರು ಮಧ್ಯಪ್ರಾಚ್ಯದಲ್ಲಿ ಯುದ್ಧದ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದರಿಂದ ಕುಟುಂಬದವರು ಅವರ ಸುರಕ್ಷತೆಯ ಬಗ್ಗೆ ತೀವ್ರ ಆತಂಕದಲ್ಲಿದ್ದರು. ಪ್ರಯಾಣದ ವೇಳೆ ಹಡಗಿನ ಸಿಬ್ಬಂದಿ ಎದುರಿಸುತ್ತಿದ್ದ ಭಯ ಹಾಗೂ ಉದ್ವಿಗ್ನತೆಯ ಕುರಿತು ಅವರು ಆಗಾಗ ಕುಟುಂಬದವರಿಗೆ ಮಾಹಿತಿ ನೀಡುತ್ತಿದ್ದರು, ಆದರೆ ನಂತರ ಯುದ್ಧದ ವಿಷಯ ಕಡಿಮೆ ಹೇಳುತ್ತಾ ಇದ್ದು,ನಮಗೇನೂ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದರು ಎಂದು ಮನೆಯವರು ತಿಳಿಸಿದ್ದಾರೆ.

ನಾವು ನಂಬಿದ ದೇವರೇ ಮಗನನ್ನು ಉಳಿಸಿದ್ದಾರೆ
ನನಗೆ ಕ್ಷಿಪಣಿ ದಾಳಿಯ ಸುದ್ದಿ ತಿಳಿದ ನಂತರ ಮಗ ಸುರಕ್ಷಿತವಾಗಿದ್ದಾನೆ ಅಂತ ಅಧಿಕಾರಿ ಹೇಳಿದ್ದರೂ ಕೂಡ ಆತಂಕವಿತ್ತು. ಯಾವಾಗ ನನ್ನ ಮಗ ನನ್ನಲ್ಲಿ ಮಾತಾಡುತ್ತಾನೋ ಅಂತ ಕಾಯುತ್ತಿದ್ದೇ, ನಾನು ವಾಯ್ಸ್ ಮೆಸೆಜ್ ಕಳುಹಿಸಿದ್ದೆ, ಅದಕ್ಕೆ ಆತ ಸೇಫ್ ಆಗಿದ್ದೇನೆ ಅಂತ ರಿಪ್ಲೈ ಕಳುಹಿಸಿದ್ದಾಗಲೇ ನನಗೆ ಸಮಾಧಾನವಾಗಿದೆ. ನಾವು ದೈವ ದೇವರನ್ನು ನಂಬುತ್ತೇವೆ. ಆ ದೈವ ದೇವರುಗಳೇ ನಮ್ಮ ಮಗನನ್ನು ಕಾಪಾಡಿದ್ದಾರೆ. ದೇವರನ್ನು ಭಕ್ತಿಯಿಂದ ನಂಬಿದರೆ ಅವರು ಸದಾ ಕಾಯುತ್ತಾರೆ ಅನ್ನುವ ನಂಬಿಕೆ ನಮ್ಮ ಪಾಲಿಗೆ ನಿಜವಾಗಿದೆ. ಈಗ ಆತನನ್ನು ನೋಡಲು ನಾನು ಕಾಯುತ್ತಿದ್ದೇನೆ. ಅವನ ಜೊತೆಗಿದ್ದ ಮುಂಬೈನ ವ್ಯಕ್ತಿಯೊಬ್ಬರು ಕಾಣೆಯಾಗಿದ್ದಾರೆ ಅನ್ನುವ ನೋವಲ್ಲಿ ಆತನೂ ಇದ್ದಾನೆ. ಅವರು ಸುರಕ್ಷಿತವಾಗಿ ಸಿಗುವಂತಾಗಲಿ.ಈ ಯುದ್ಧ ಬೇಡ, ಯುದ್ಧದ ಬಗ್ಗೆ ಮಾತನಾಡುವವರು ಸುರಕ್ಷಿತವಾಗಿರುತ್ತಾರೆ. ಅಮಾಯಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ನಮಗೆ ಯುದ್ಧ ಶುರುವಾಗಿದೆ ಅಂದಾಗಲೇ ಭಯವಾಗುತ್ತಿತ್ತು. ಕ್ಷಿಪಣಿ ದಾಳಿಯ ನಂತರ ಮಗ ಸುರಕ್ಷಿತವಾಗಿದ್ದಾನೆ ಎಂಬುದು ಅತ್ಯಂತ ಖುಷಿಯ ಕ್ಷಣ ಅಲ್ಲದೇ ಇದು ದೇವರ ರಕ್ಷಣೆ. ನನ್ನ ಮಗ ಮಿಲಿಟರಿಗೆ ಸೇರಬೇಕು ಅಂತ ಕನಸು ಕಂಡವನು, ಭುಜಕ್ಕೆ ಏಟಾದ ಕಾರಣ ಅದು ಸಾಧ್ಯವಾಗಲಿಲ್ಲ. ನಂತರ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಹೊಂದಿದ್ದನು. ನಂತರ ಮೆರೈನ್ ಕೋರ್ಸ್ ಕಲಿತು ಸೈಲರ್ ಆಗಿದ್ದಾನೆ. ಇಂದು ಅವನನ್ನು ದೇವರು ಕಾಪಾಡಿದ್ದಾರೆ.
-ಲಲಿತಾ, ತಾಯಿ‌

ಅವನನ್ನು ನೋಡಿದ ನಂತರವೇ ನಮಗೆ ಸಮಾಧಾನ
ನಾವು ನಮ್ಮ ತರವಾಡು ಮನೆಯಲ್ಲಿ ದೈವದ ಕೆಲಸದಲ್ಲಿ ನಿರತರಾಗಿದ್ದಾಗ ನನಗೆ ವಿಷಯ ಗೊತ್ತಾಯಿತು. ಆಗ ನಾನು ತಮ್ಮ ರಾಹುಲ್ ಇಬ್ಬರೂ ಕೂಡ ಮಾತನಾಡಿದೆವು. ಆದರೆ,ತರವಾಡು ಮನೆಯಲ್ಲಿ ಯಾರಿಗೂ ವಿಷಯ ತಿಳಿಸದೇ ಅಲ್ಲಿ ದೈವದ ಕಾರ್ಯವನ್ನು ಮುಗಿಸಿ ಮನೆಗೆ ಬಂದೆವು. ಮನೆಯಲ್ಲಿ ಅಪ್ಪ ಅಮ್ಮ ಆತಂಕದಲ್ಲಿದ್ದರು. ತಮ್ಮ ಸುರಕ್ಷಿತವಾಗಿರುವುದಾಗಿ ತಿಳಿಸಿದ ನಂತರವೇ ನಾವು ಕೊಂಚ ನಿರಾಳವಾದೆವು. ಈಗಲೂ ಅವನು ಊರಿಗೆ ಬರುವುದನ್ನು ಕಾಯುತ್ತಿದ್ದೇವೆ. ಅವನನ್ನು ನೋಡಿದ ನಂತರವೇ ನಮಗೆ ಸಮಾಧಾನವಾಗುತ್ತದೆ.
-ಗಗನ್ ಆರ್ ಕೆ, ಸಹೋದರ


ನಮಗೆ ಆತಂಕವಿತ್ತು,ಅವರ ಕರೆಯ ನಂತರವೇ ನಿರಾಳವಾದೆವು
ನನಗೆ ಒಮನ್ ಹಡಗಿನ ಅಽಕಾರಿ ಕರೆ ಮಾಡಿ ಕ್ಷಿಪಣಿ ದಾಳಿಯ ವಿಷಯ ತಿಳಿಸಿದರು. ಆವಾಗ ನಮಗೆ ಆತಂಕವಾಗಿತ್ತು. ಅವನು ನಮಗೆಲ್ಲರಿಗಿಂತ ಧೈರ್ಯವಂತ ಯಾವುದೇ ರೀತಿಯಲ್ಲೂ ಕೂಡ ಧೃತಿಗೆಡುವವನಲ್ಲ. ಕೆಲ ಗಂಟೆಗಳ ನಂತರ ಅವನು ವಾಯ್ಸ್ ಮೆಸೆಜ್ ಕಳುಹಿಸಿ, ನಂತರ ಕರೆ ಮಾಡಿದ್ದಾನೆ. ನಾವು ನಂಬುವ ಮಹಾವಿಷ್ಣು ದೇವರು, ರಾಘವೇಂದ್ರ ಸ್ವಾಮಿ, ಕುಟುಂಬದ ದೈವ ದೇವರು ಆತನನ್ನು ಕಾಪಾಡಿದ್ದಾರೆ. ಅವನ ತಾಯಿಯ ಭಕ್ತಿಯೇ ಆತನ ಸುರಕ್ಷತೆಗೆ ಕಾರಣ.ಅವನು ಸುರಕ್ಷಿತವಾಗಿದ್ದು, ಈಗ ದುಬೈಗೆ ಹೋಗುತ್ತಿದ್ದೇನೆಂದು ತಿಳಿಸಿದ್ದಾನೆ. ಮುಂದಿನ ವಾರ ಊರಿಗೆ ಬರುವ ಸಾಧ್ಯತೆಯಿದೆ.
-ರೋಹಿತಾಕ್ಷ, ತಂದೆ

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here