ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ

0

ಪಾಣೆಮಂಗಳೂರು: ತಮ್ಮ ಸಮಾಜಮುಖಿ ಸೇವೆಯ ಮೂಲಕ ಮುಂಚೂಣಿಯಲ್ಲಿರುವ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ಶಾರದಾ ಪ್ರೌಢಶಾಲೆ, ಪಾಣೆಮಂಗಳೂರು ಇಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲ ಚಿಂತನೆ ಹಾಗೂ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ಮೇಳವನ್ನು ಆಯೋಜಿಸಲಾಗಿತ್ತು. ವಿಜ್ಞಾನ ಶಿಕ್ಷಕಿಯರಾದ ಸುಜಾತಾ ಹಾಗೂ ಶ್ರೀಲತಾ ಅವರ ಮಾರ್ಗದರ್ಶನದಲ್ಲಿ ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳನ್ನು ಸ್ವತಃ ವಿದ್ಯಾರ್ಥಿಗಳೇ ತಯಾರಿಸಿ, ಪ್ರದರ್ಶಿಸಿ, ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು.

ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಇದರ ಸ್ವಯಂಸೇವಕರಾದ ಶ್ರೀವತ್ಸ ಹಾಗೂ ಮೇಘ ಅವರು ಆಗಮಿಸಿ, ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಮಾದರಿಗಳನ್ನು ವೀಕ್ಷಿಸಿ, ಅವುಗಳ ಕುರಿತು ಮೌಲ್ಯಮಾಪನ ನಡೆಸಿದರು. ಉತ್ತಮ ಮಾದರಿಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಸೂಕ್ತ ಬಹುಮಾನಗಳ ಜೊತೆಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಪ್ರಥಮ ಬಹುಮಾನವನ್ನು ಪಡೆದ 10ನೇ ತರಗತಿಯ ತನ್ವಿತ್ ಹಾಗೂ ಮಹಮ್ಮದ್ ಸವಾದ್ ಅವರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಹಾಗೂ ವಿಜ್ಞಾನ ಮಾದರಿ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಿ, ಉತ್ತೇಜಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸ್ವಯಂಸೇವಕ ಶ್ರೀವತ್ಸ ಅವರು, ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಂತಹ ವಿಜ್ಞಾನ ಮೇಳಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ಪ ನಾಯ್ಕ್ ಎಸ್. ಸ್ವಾಗತಿಸಿದರು. ಹಿರಿಯ ಶಿಕ್ಷಕಿ ವೀಣಾ ಅವರು ಉಪಸ್ಥಿತರಿದ್ದರು. ಹಾಗೂ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿ ಬಂದಿತು. ಕಾರ್ಯಕ್ರಮದ ಕೊನೆಯಲ್ಲಿ ಕನ್ನಡ ಭಾಷಾ ಅಧ್ಯಾಪಕರಾದ ಧನರಾಜ್ ಡಿ ಆರ್ ಧನ್ಯವಾದ ಸಮರ್ಪಿಸಿ, 10ನೇ ತರಗತಿಯ ವಿದ್ಯಾರ್ಥಿ ಅಬ್ದುಲ್ ಶಮ್ಮಾಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here