ಬಂಟ್ವಾಳ: ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಪರವಾಗಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
2026-27ನೇ ಆರ್ಥಿಕ ವರ್ಷದ ಆರಂಭದಲ್ಲೇ ರಾಜ್ಯದಾದ್ಯಂತ, ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ನೀರಿಲ್ಲದೆ ಬೇಸಾಯ ಮಾಡಲಾಗದೆ ಭತ್ತ ಬೆಳೆಗಾರರು ಆಕಾಶದತ್ತ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಾಶ್ರಿತ ಬೆಟ್ಟಿನ ಗದ್ದೆಗಳಲ್ಲಿ ಇನ್ನೂ ಬಿತ್ತನೆ ಕಾರ್ಯವೇ ಆರಂಭವಾಗಿಲ್ಲ. ಬೆರಳೆಣಿಕೆಯ ರೈತರು ಕೊಳವೆಬಾವಿ ಹಾಗೂ ಕೆರೆಗಳಿಂದ ಪಂಪ್ ಮೂಲಕ ನೀರು ಹಾಕಿ ಬಿತ್ತನೆ ಮಾಡಿದ್ದರೂ, ಈಗ ಕೆರೆಗಳಲ್ಲಿಯೂ ನೀರು ಬತ್ತಿರುವುದರಿಂದ ಭತ್ತದ ಗದ್ದೆಗಳು ಒಣಗುತ್ತಿವೆ. ಮಳೆಯನ್ನು ನಂಬಿ ಬೇಸಾಯಕ್ಕೆ ಮುಂದಾದ ಹಲವು ರೈತರು ಕಂಗಾಲಾಗಿದ್ದಾರೆ. ಮಳೆ ಕೊರತೆ ಹೀಗೆಯೇ ಮುಂದುವರಿದರೆ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಬರಗಾಲ ಎದುರಾಗುವ ಆತಂಕವಿದೆ ಎಂದು ಪ್ರಭಾಕರ ಪ್ರಭು ತಿಳಿಸಿದ್ದಾರೆ.
ಸರ್ಕಾರ ಸಂಬಂಧಪಟ್ಟ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ವರದಿ ತರಿಸಿಕೊಂಡು ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಪ್ರಾಥಮಿಕ ಸಹಕಾರ ಸಂಘಗಳಿಂದ ರೈತರು ಪಡೆದಿರುವ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.








