ಮಂಗಳೂರು :ಬೆಳ್ಳಾರೆಯಲ್ಲಿ ಜು.26ರಂದು ರಾತ್ರಿ ನಡೆದಿದ್ದ ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಎನ್ಐಎಯಿಂದ ತನಿಖೆಗೆ ಚುರುಕು ;
ಪ್ರವೀಣ್ ಹತ್ಯೆ ಪ್ರಕರಣದ ತನಿಖೆಯನ್ನು ಈಗಾಗಲೇ ಕೇಂದ್ರ ತನಿಖಾ ದಳ(ಎನ್ಐಎ)ಕ್ಕೆ ವಹಿಸಲಾಗಿದ್ದು ಎನ್ಐಎ ತಂಡ ತನಿಖೆ ಚುರುಕುಗೊಳಿಸಿದೆ.ಈಗಾಗಲೇ ಬೆಳ್ಳಾರೆ ಪೊಲೀಸರಿಂದ ಮಾಹಿತಿ ಪಡೆದುಕೊಂಡಿರುವ ಎನ್ಐಎ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದೆ.
ಸುಳ್ಯ ನಾವೂರು ಮಹಾಮಾಯಿ ದೇವಳದ ಬಳಿಯ ಯಾಕೂಬ್ ಎಂಬವರ ಮಗ ಆಬಿದ್(22ವ)ಹಾಗೂ ಬೆಳ್ಳಾರೆ ಗೌರಿ ಹೊಳೆ ಮೊಹಮ್ಮದ್ ಎಂಬವರ ಮಗ ನೌಫಲ್ (28ವ.)ಎಂಬವರನ್ನು ಪ್ರಕರಣಕ್ಕೆ ಸಂಬಂಧಿಸಿ ಇದೀಗ ಬಂಧಿಸಲಾಗಿದೆ.ಇದರೊಂದಿಗೆ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.ಈಗ ಬಂಧಿತರಾಗಿರುವ ಆರೋಪಿಗಳಾದ ಆಬಿದ್ ಮತ್ತು ನೌಫಲ್ ಹತ್ಯೆ ಯೋಜನೆ ಮತ್ತು ಹಂತಕರ ರಕ್ಷಣಾ ತಂಡದ ಭಾಗವಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.
ಎಲ್ಲ ದಾಳಿಕೋರರನ್ನು ಗುರುತಿಸಲಾಗಿದ್ದು ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.ಇದುವರೆಗೆ ನಡೆಸಿದ ತನಿಖೆಯ ಆಧಾರದಲ್ಲಿ ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿಯವರು ಹೇಳಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸವಣೂರಿನ ಝಾಕಿರ್, ಬೆಳ್ಳಾರೆಯ ಶಫೀಕ್, ಬೆಳ್ಳಾರೆ ಪಳ್ಳಿಮಜಲಿನ ಸದ್ದಾಂ ಮತ್ತು ಹ್ಯಾರೀಸ್ ಎಂಬವರನ್ನು ಬಂಧಿಸಲಾಗಿತ್ತು.ಬಂಧಿತನಾಗಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದ ಆರೋಪಿ ಶಫೀಕ್ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.