ರಂಗಭೂಮಿಯ ನಂದಾದೀಪ “ಅಮ್ಮ ಕುಡ್ಲ ತಂಡ”-ಚಿ|ಸೌ|ಸುಮಂಗಳ ಪ್ರದರ್ಶನಕ್ಕೆ ಸಿದ್ದ

0

ಕರಾವಳಿಯ ಸಾಂಸ್ಕೃತಿಕ ರಾಜಧಾನಿ ಮಂಗಳೂರಿನ ಮಣ್ಣಿನಲ್ಲಿ ಮೂಡಿ, ಕರ್ನಾಟಕ ಸೇರಿದಂತೆ ಇತರಲ್ಲೆಡೆ ರಂಗಭೂಮಿಯ ರಂಗನ್ನು ಪಸರಿಸುತ್ತಿರುವ ಅತ್ಯಂತ ಪ್ರೀತಿಯ ನಾಟಕ ತಂಡವೆಂದರೆ ಅದು “ಅಮ್ಮ ಕುಡ್ಲ”. ಹೆಸರಿನಲ್ಲಿಯೇ ತಾಯಿಯ ಮಮತೆ ಹಾಗೂ ತುಳುನಾಡಿನ ಸಾಂಸ್ಕೃತಿಕ ಹೆಮ್ಮೆಯನ್ನು ಹೊತ್ತಿರುವ ಈ ತಂಡ ಕೇವಲ ನಾಟಕಗಳನ್ನು ಪ್ರದರ್ಶಿಸುವ ಸಂಸ್ಥೆಯಲ್ಲ. ಬದಲಾಗಿ ಕಲೆ ಮತ್ತು ಬದುಕನ್ನು ಜೋಡಿಸುವ ಒಂದು ಅದ್ಬುತ ಕಲಾಸೇತುವೆ. ಕಲಾ ವೈವಿಧ್ಯತೆ ಮತ್ತು ಸಾಮಾಜಿಕ ಕಳಕಳಿ ಇದರ ಬದ್ದತೆಯಾಗಿದೆ.

ಅಮ್ಮ ತಂಡದ ಬಹುದೊಡ್ಡ ಶಕ್ತಿ ಎಂದರೆ ಕಥಾವಸ್ತುಗಳ ಆಯ್ಕೆ. ಕೇವಲ ಮನೋರಂಜನೆಗಷ್ಟೆ ಸೀಮಿತವಾಗದೇ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ, ಕೌಟುಂಬಿಕ ಮೌಲ್ಯವನ್ನು ಎತ್ತಿ ಹಿಡಿಯುವ ಹಾಗೂ ಪ್ರಚಲಿತ ವಿದ್ಯಾಮಾನಗಳಿಗೆ ಕನ್ನಡಿ ಹಿಡಿಯುವಂತಹ ಸದಭಿರುಚಿಯ ನಾಟಕಗಳನ್ನು ಈ ತಂಡ ನಿರಂತರವಾಗಿ ನೀಡುತ್ತಾ ಬಂದಿದೆ. ಹಾಸ್ಯ, ಕರುಣೆ, ಜಾಗೃತಿಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಪ್ರೇಕ್ಷಕರಿಗೆ ಉಣ ಬಡಿಸುವ ಕಲೆ ಈ ತಂಡಕ್ಕೆ ಸಿದ್ದಿಸಿದೆ.

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಬೆಂಗಳೂರು, ಮುಂಬೈ ಸೇರಿದಂತೆ ಹೊರರಾಜ್ಯ, ದೇಶಗಳಲ್ಲಿ ಪ್ರದರ್ಶನ ನೀಡಿ ಗೆದ್ದ ಈ ತಂಡ ಈ ಬಾರಿ ನಾಟಕ ಪ್ರೇಮಿಗಳಿಗೆ ಸೋಮನಾಥ ಶೆಟ್ಟಿ ಮಂಗಳ್ಪಾಡಿ ವಿರಚಿತ ಕಥೆ, ಸಂಭಾಷಣೆ ಹೊಂದಿರುವ ಚಿ|ಸೌ|ಸುಮಂಗಳ ಎಂಬ ಹೊಸ ನಾಟಕದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದು, ಮನೋರಂಜನೆಯ ಔತಣವನ್ನೇ ನೀಡಲಿದೆ. ರಂಗಭೂಮಿಯಲ್ಲಿ 30 ವರ್ಷಗಳ ಸುದೀರ್ಘ ಅನುಭವವನ್ನು ಹೊಂದಿರುವ ಸುಂದರ್‌ ರೈ ಮಂದಾರ ಇದರ ನಿರ್ಮಾಣ, ನಿರ್ದೇಶನದ ಹೊಣೆ ಹೊತ್ತಿದ್ದು, ಪ್ರಮುಖ ಪಾತ್ರದಲ್ಲಿ ನಾಟಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೋಮನಾಥ ಶೆಟ್ಟಿ ಮಂಗಳ್ಪಾಡಿ ಕಥೆ, ಸಂಭಾಷಣೆಯೊಂದಿಗೆ ನೀವೆಂದೂ ಕಂಡು ಕೇಳಿರದ ಹಾಸ್ಯಮಯ ಸನ್ನಿವೇಶಗಳು ಈ ಸಾಂಸಾರಿಕ ನಾಟಕದಲ್ಲಿದೆ.

ಒಂದು ನಾಟಕ ಯಶಸ್ವಿಯಾಗಬೇಕಾದರೆ ನಟನೆ ಅಷ್ಟೇ ಅಲ್ಲ ತಾಂತ್ರಿಕತೆಯು ಮುಖ್ಯ ಎಂಬುವುದನ್ನು “ಅಮ್ಮ ಕುಡ್ಲ” ತಂಡ ಸಾಬೀತುಪಡಿಸಿದೆ. ನಾಟಕಕ್ಕೆ ನಾಗೇಶ್‌ ಅತ್ತಾವರ ಅವರ ಆಕರ್ಷಕ ರಂಗ ಸಜ್ಜಿಕೆ, ಕಣ್ಣಿಗೆ ತಂಪೆರೆದು ಮುದನೀಡುವ ದೇವದಾಸ್‌ ಕಜೆಕ್ಕಾರ್‌ ಅವರ ಧ್ವನಿ ಮತ್ತು ಬೆಳಕಿನ ವಿನ್ಯಾಸ, ಭಾವನೆಗಳನ್ನು ಬಡಿದೇಳಿಸುವ ಶ್ರೇಯಸ್‌ ಕಲ್ಲಡ್ಕ ಅವರ ಹಿನ್ನಲೆ ಸಂಗೀತ ಅತ್ಯಂತ ಉನ್ನತ ಮಟ್ಟದ್ದು, ಪ್ರತಿ ದೃಶ್ಯದಲ್ಲೂ ಪ್ರೇಕ್ಷಕರು ನಾಟಕದಲ್ಲಿ ಒಂದಾಗುವಂತೆ ಮಾಡುವಲ್ಲಿ ಈ ತಾಂತ್ರಿಕ ಶಿಸ್ತು, ಪ್ರಮುಖ ಪಾತ್ರ ವಹಿಸುತ್ತದೆ. ನಿಸ್ವಾರ್ಥ ಕಲಾವಿದರ ಸಂಘಟನೆಯೆಂದೇ ಹೇಳಬಹುದಾದ ತಂಡದಲ್ಲಿರುವ ಪ್ರತಿಯೊಬ್ಬ ಕಲಾವಿದರು ತಮ್ಮ ನೈಜ ಅಭಿನಯದ ಮೂಲಕ ಪಾತ್ರಗಳಿಗೆ ಜೀವ ತುಂಬಲಿದ್ದಾರೆ. ದೀಪಕ್‌ ರೈ ಪಾಣಾಜೆ, ಸುಂದರ್‌ ರೈ ಮಂದಾರ, ಅರುಣ್‌ ಚಂದ್ರ ಬಿ ಸಿ ರೋಡ್‌ , ರಂಜನ್‌ ಬೋಳೂರು, ಜಗನ್ನಿವಾಸ ಶೆಟ್ಟಿ ಮಂಗಳ್ಪಾಡಿ, ಸೋಮನಾಥ ಶೆಟ್ಟಿ ಮಂಗಳ್ಪಾಡಿ, ಸೇರಿದಂತೆ ಹಿರಿಯ ಕಲಾ ಪ್ರತಿಭೆಗಳ ಮಾರ್ಗದರ್ಶನ ಹಾಗೂ ನಿತಿನ್‌ ತುಂಬೆ, ಚಂದ್ರಹಾಸ ಶೆಟ್ಟಿ ಮಾಣಿ, ಜ್ಯುನಿಯರ್‌ ಬೋಳಾರ್‌, ಕುಮಾರಿ ವಿದ್ಯಾ ಪುತ್ತೂರು, ಪೂರ್ಣಿಮಾ ಸುರತ್ಕಲ್‌, ಜೆ ಪಿ ಕೊರಂಗಿಬೆಟ್ಟು, ಸುರೇಶ್‌ ಸರಪಾಡಿಯವರಂತಹ ಯುವ ಪ್ರತಿಭೆಗಳ ಉತ್ಸಾಹದ ಸಮ್ಮಿಲನ ಈ ನಾಟಕ ತಂಡದಲ್ಲಿದೆ. ರಂಗಭೂಮಿಯ ಮೇಲಿನ ಪ್ರೀತಿ ಮತ್ತು ಶಿಸ್ತು ತಂಡದಲ್ಲಿದ್ದು ಸಂಘಟನಾ ಚಾತುರ್ಯತೆ ಇಂದಿನ ಯುವ ತಂಡಗಳಿಗೆ ಮಾದರಿಯಾಗಿದೆ.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here