ಪಿಯುಸಿ ರಾಜ್ಯ 7ನೇ ರ‍್ಯಾಂಕ್‌ ವಿದ್ಯಾರ್ಥಿ ಪ್ರಿತೇಶ್‌ಗೆ ಸನ್ಮಾನ

0

ಸಿದ್ದಕಟ್ಟೆ: 2025-2026ನೇ ಸಾಲಿನ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 600ಕ್ಕೆ 594 ಅಂಕ ಪಡೆದು ರಾಜ್ಯ ಮಟ್ಟದಲ್ಲಿ 7ನೇ ರ‍್ಯಾಂಕ್‌ ಹಾಗೂ ಕಲ್ಲಡ್ಕ ಶ್ರೀರಾಮ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಪ್ರಿತೇಶ್‌ನನ್ನು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಬೆಳ್ಳಿಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಕೊಯಿಲ ಗ್ರಾಮದ ಉಮೇಶ್ ಪೂಜಾರಿ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರ ಪ್ರಿತೇಶ್‌ಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು. ಅಭಿನಂದಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, “ಸಂಘದ ವ್ಯಾಪ್ತಿಯ ವಿದ್ಯಾರ್ಥಿ ಪ್ರಿತೇಶ್ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲಿ ಪಡೆದು, ಇದೀಗ ಕಲ್ಲಡ್ಕ ಶ್ರೀರಾಮ ಕಾಲೇಜಿನಲ್ಲಿ ಕಲಿತು ರಾಜ್ಯಮಟ್ಟದಲ್ಲಿ 7ನೇ ಸ್ಥಾನ ಪಡೆದಿರುವುದು ಸಂಘಕ್ಕೂ ಹೆಮ್ಮೆ. ಸರಕಾರಿ ಶಾಲೆಯಲ್ಲಿ ಕಲಿತು ಉನ್ನತ ಸ್ಥಾನ ಪಡೆಯಬಹುದು ಎಂಬುದಕ್ಕೆ ಪ್ರಿತೇಶ್ ಮಾದರಿ” ಎಂದರು.

ಉಪಾಧ್ಯಕ್ಷ ಸಂದೇಶ ಶೆಟ್ಟಿ ಪೊಡುಂಬ, ನಿರ್ದೇಶಕರಾದ ಸತೀಶ್ ಪೂಜಾರಿ ಅಲಕ್ಕೆ, ರಶ್ಮಿತ್ ಶೆಟ್ಟಿ ಮುಂದಿನ ಶೈಕ್ಷಣಿಕ ವರ್ಷಗಳಲ್ಲೂ ಇದೇ ರೀತಿ ಸಾಧನೆ ಮಾಡುವಂತೆ ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿದ ಪ್ರಿತೇಶ್ ಸಂಘದ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ನಿರ್ದೇಶಕರಾದ ದಿನೇಶ್ ಪೂಜಾರಿ ಹುಲಿಮೆರು, ಚಂದ್ರಶೇಖರ ಶೆಟ್ಟಿ ಅರಳ, ವಿಶ್ವನಾಥ್ ಶೆಟ್ಟಿಗಾರ್ ಸಂಗಬೆಟ್ಟು, ಜಾರಪ್ಪ ನಾಯ್ಕ, ವೀರಪ್ಪ ಪರವ, ಎ. ಶಿವ ಗೌಡ, ಮಂದಾರತಿ ಎಸ್. ಶೆಟ್ಟಿ, ಪುಷ್ಪಲತಾ ಎಸ್.ಆರ್., ರಾಜೇಶ್ ಶೆಟ್ಟಿ ಕೊನೆರಬೆಟ್ಟು, ನವೀನ ಹೆಗ್ಡೆ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಕೀರ್ತಿರಾಜ್, ಸಂಘದ ಸಿಇಒ ಆರತಿ ಶೆಟ್ಟಿ, ಪ್ರಮುಖರಾದ ಮೋಹನ್ ಕೊಯಿಲ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಸುಭಾಸ್ ಬಂಗೇರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

LEAVE A REPLY

Please enter your comment!
Please enter your name here