- ನಿಸ್ವಾರ್ಥ ಗೋಪ್ರೇಮಕ್ಕೆ ಮಾದರಿಯಾದ ಕಾಡಬೆಟ್ಟಿನ `ಕಾಮಧೇನು’ ಗೋಶಾಲೆ
ವಿಶೇಷ ವರದಿ : ಅಕ್ಷಯ್ ಕುಮಾರ್ ಎ ಕಡೇಶಿವಾಲಯ
ಬಂಟ್ವಾಳ: ಹೈನುಗಾರಿಕೆ ಎನ್ನುವುದು ನಮ್ಮ ದೇಶದ ಪ್ರಮುಖ ಕೃಷಿಪೂರಕ ಚಟುವಟಿಕೆ. ಹೈನುಗಾರಿಕೆ ಮಾಡುವವರು ಉತ್ತಮ ಹಾಲು ನೀಡುವ ತಳಿಯನ್ನು ಸಾಕುವುದು, ಅದರಿಂದ ನಿತ್ಯ ನೂರಾರು ಲೀಟರ್ಗಟ್ಟಲೆ ಹಾಲನ್ನು ಸಂಗ್ರಹಿಸಿ ಮಾರಾಟ ಮಾಡಿ ಲಾಭ ಪಡೆಯುವುದು ಹೈನುಗಾರಿಕೆಯ ಒಂದು ಮುಖವಾದರೆ, ಗೋವುಗಳ ಮೇಲಿನ ಪ್ರೀತಿಯಿಂದ ಅಥವಾ ಊರ ಗೋತಳಿಗಳ ಮೇಲಿನ ಪ್ರೇಮದಿಂದ ಒಂದೆರಡು ಹಸುಗಳನ್ನು ಸಾಕಿಕೊಂಡಿರುವುದು ಇನ್ನೊಂದು ಮುಖ. ಆದರೆ ಇಲ್ಲಿ ಹೇಳಹೊರಟಿರುವ ಗೋವು ಸಾಕುತ್ತಿರುವವರ ವಿಚಾರ ಮಾತ್ರ ಬೇರೆ. ಇಲ್ಲಿ ಲಾಭದ ಯಾವುದೇ ಉದ್ದೇಶವಿಲ್ಲದೇ, ಕೇವಲ ಗೋವುಗಳ ಮೇಲಿನ ಉತ್ಕಟ ಪ್ರೀತಿಯ ಕಾರಣಕ್ಕಾಗಿ ಸುಮಾರು 30ಕ್ಕೂ ಅಧಿಕ ದೇಶೀ ತಳಿಯ ಗೋವುಗಳನ್ನು ಸಾಕಲಾಗುತ್ತಿದೆ. ಮನೆಯ ಮಕ್ಕಳಂತೆ ಲಾಲನೆ ಪಾಲನೆ ಮಾಡಲಾಗುತ್ತಿದೆ. ಇಲ್ಲಿ ಹಟ್ಟಿಯಿಂದ ಶುರುವಾದ ಇವರ ಬದುಕು ಸುಸಜ್ಜಿತ ಹೊಸ ಮನೆಯೊಳಗೆ ಪ್ರವೇಶಿಸುವ ವೇಳೆಯಲ್ಲಿ ಕೂಡ ಮನೆಯಲ್ಲಿದ್ದ ಎರಡು ಗಬ್ಬದ ಹಸುಗಳಿಗೆ ಸೀಮಂತ ಕಾರ್ಯ ನೆರವೇರಿಸಿ ಗೃಹಪ್ರವೇಶ ನಡೆಸಿದ ಅಪ್ರತಿಮ ಗೋಪ್ರೇಮಿ ಕುಟುಂಬದ ಯಶೋಗಾಥೆಯಿದು.

ಈ ಎಲ್ಲಾ ಮಾತುಗಳ ಮೇಲೆ ನಿಮಗೆ ಸಂಪೂರ್ಣ ನಂಬಿಕೆ ಬರಬೇಕೆಂದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಕಾಡಬೆಟ್ಟು ಎಂಬಲ್ಲಿರುವ ಕೇಶವ ಭಂಡಾರಿಯವರ ‘ಕಾಮಧೇನು ಗೋಶಾಲೆ’ಗೆ ಭೇಟಿ ನೀಡಬೇಕು. ಈ ಗೋಶಾಲೆಯೇ ಈ ಲೇಖನದ ಕೇಂದ್ರಬಿಂದು. ಯಾವುದೇ ಲಾಭದ ಆಸೆ ಇಲ್ಲದೆ, ಕೇವಲ ಸೇವಾರ್ಥವಾಗಿ 30ಕ್ಕೂ ಅಧಿಕ ದೇಶಿ ತಳಿಯ ಗೋವುಗಳನ್ನು ಸಾಕಿ ಸಲಹುತ್ತಿರುವ ಈ ಕುಟುಂಬದ ಗೋಪ್ರೇಮ ಇತರರಿಗೆ ಮಾದರಿಯಾಗಿದೆ. ಇವರ ಮನೆಗೆ ಹೊಂದಿಕೊಂಡಿರುವ ಗೋಶಾಲೆಯಲ್ಲಿ ಸುಮಾರು 31ರಷ್ಟು ಮಲೆನಾಡು ಗಿಡ್ಡ, 1 ಗಿರ್ ಹಾಗೂ 1 ಕ್ರಾಸ್ ಜರ್ಸಿ ಸೇರಿದಂತೆ ಒಟ್ಟು 30ಕ್ಕೂ ಅಧಿಕ ಗೋವುಗಳಿವೆ. ಗೋಶಾಲೆಯ ಪಕ್ಕ ಗೋವುಗಳಿಗೆ ಸ್ವಚ್ಛಂದವಾಗಿ ತಿರುಗಾಡಲು ಸುಮಾರು 10 ಸೆಂಟ್ಸ್ ವಿಸ್ತೀರ್ಣದ ಮುಕ್ತವಾದ ಜಾಗವಿದೆ. ಗೋವುಗಳಿಗೆ ಆಹಾರಕ್ಕೆ ಒಣಹುಲ್ಲು, ಹಸಿರು ಹುಲ್ಲು, ಹಿಂಡಿ, ನೀರಿನ ಅಚ್ಚುಕಟ್ಟಾದ ವ್ಯವಸ್ಥೆಗಳನ್ನೂ ಮಾಡಿದ್ದಾರೆ.

ಬಾಲ್ಯದ ಕನಸಿಗೆ ಅಳಿಯನ ಸಾಥ್
ಈ ಗೋಶಾಲೆಯ ಹಿಂದಿರುವುದು ಕೇಶವ ಭಂಡಾರಿ ಮತ್ತು ಯಮುನಾ ದಂಪತಿಯ ಅಳಿಯ ರಾಜೇಶ್ ಅವರ ಬಾಲ್ಯದ ಕನಸು ಮತ್ತು ಅದಕ್ಕಿತ್ತ ವ್ಯವಸ್ಥಿತ ರೂಪ. ಕೇಶವ ಭಂಡಾರಿ ದಂಪತಿಯ ದ್ವಿತೀಯ ಪುತ್ರಿ ಶಿಬಾ ಅವರ ಪತಿ ರಾಜೇಶ್ ಪ್ರಸ್ತುತ ಕುವೈತ್ನಲ್ಲಿ ಉದ್ಯೋಗದಲ್ಲಿದ್ದಾರೆ. ಬಾಲ್ಯದಿಂದಲೇ ಗೋವುಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ರಾಜೇಶ್, ಉದ್ಯೋಗದ ನಿಮಿತ್ತ ಗುಜರಾತ್ನಲ್ಲಿದ್ದಾಗ ಅಲ್ಲಿನ ಗೆಳೆಯರಿಂದ ದೇಶಿ ಹಸುಗಳ ಮಹತ್ವವನ್ನು ಅರಿತುಕೊಂಡಿದ್ದರು. ಕಡೇಶಿವಾಲಯ ಗ್ರಾಮದಲ್ಲಿ ಹೋರಿಗಳಿಗಿರುವ ಪೌರಾಣಿಕ ಹಿನ್ನೆಲೆ ಹಾಗೂ ಆರೋಗ್ಯದ ದೃಷ್ಟಿಯಿಂದ ಪ್ರೇರಿತರಾಗಿ, ತಮ್ಮ ಮಾವನ ಜಾಗದಲ್ಲಿ ಮಲೆನಾಡ ಗಿಡ್ಡ ತಳಿಯ ಹಸುಗಳನ್ನು ಸಾಕಲು ನಿರ್ಧರಿಸಿದರು.
4 ಗೋವುಗಳಿಂದ ಆರಂಭ
ಮನೆಯ ಯಜಮಾನರಾದ ಕೇಶವ ಭಂಡಾರಿ ಅವರು ಮಂಗಳೂರಿನ ಬೈಕಂಪಾಡಿಯ ಪೆಟ್ರೋಲಿಯಂ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಕುಟುಂಬ ಸಮೇತ ಕುಳಾಯಿಯಲ್ಲಿ ನೆಲೆಸಿದ್ದರು. ಈ ಸಂದರ್ಭದಲ್ಲಿ, ಅಂದರೆ 2015ರ ಅಕ್ಟೋಬರ್ನಲ್ಲಿ ರಾಜೇಶ್ ಅವರು ತನ್ನ ಮಾವ ಕೇಶವ ಭಂಡಾರಿಯವರ ಮೂಲ ಜಾಗ ಕಡೇಶಿವಾಲಯದಲ್ಲಿ ಒದಗಿದ್ದ ಜಾಗದಲ್ಲಿ 4 ಗೋವುಗಳೊಂದಿಗೆ ಗೋಶಾಲೆ ಆರಂಭಿಸಿದರು. ಅದನ್ನು ನೋಡಿಕೊಳ್ಳಲು ಕೇಶವರ ಕಿರಿಯ ಮಗ ಶಿವರಾಜ್ ಅವರೇ ಮುಂದೆ ಬರುತ್ತಾರೆ. ಜೊತೆಗೆ ಹಿರಿಯ ಮಗ ಯಶ್ಪಾಲ್ ಅವರ ಬೆಂಬಲವೂ ದೊರೆಯಿತು. ಕೆಲ ವರ್ಷಗಳ ಬಳಿಕ ಕೇಶವ ಭಂಡಾರಿ ಅವರು ಉದ್ಯೋಗದಿಂದ ನಿವೃತ್ತಿ ಹೊಂದಿ ಮೂಲ ಊರಿಗೆ ಮರಳಿದರು. ನಂತರ ಗೋಸೇವೆಯನ್ನೇ ದೈವಿಕ ಕಾರ್ಯವೆಂದು ಭಾವಿಸಿ ಪೂರ್ಣಾವಧಿಯಾಗಿ ತೊಡಗಿಸಿಕೊಂಡರು.
ಕೊಟ್ಟಿಗೆಯೇ ಮನೆ- ಗೋವುಗಳಿಗೆ ಸೀಮಂತ ಕಾರ್ಯ
ನಿವೃತ್ತಿಯ ನಂತರ ಊರಿಗೆ ಬಂದ ಕೇಶವ ಭಂಡಾರಿ ಮತ್ತು ಯಮುನಾ ದಂಪತಿಗೆ ಗೋವುಗಳ ಮೇಲಿನ ಪ್ರೀತಿ ಎಷ್ಟಿತ್ತೆಂದರೆ, ಅವರು ವಾಸಿಸಲು ದೊಡ್ಡ ಮನೆಯನ್ನು ಬಯಸಲಿಲ್ಲ. ಹಸುಗಳ ಕೊಟ್ಟಿಗೆಯ ಪಕ್ಕದಲ್ಲೇ ಇದ್ದ ಎರಡು ಸಣ್ಣ ಕೋಣೆಗಳಲ್ಲೇ ದಂಪತಿ ವರ್ಷಗಟ್ಟಲೆ ವಾಸವಿದ್ದರು. ಅದಕ್ಕೂ ಮುನ್ನ ಅವರ ಕಿರಿಯ ಮಗ ಅಲ್ಲಿ ವಾಸವಿದ್ದು, ಉದ್ಯೋಗದ ನಿಮಿತ್ತ ಬೇರೆಡೆ ತೆರಳಿದ ಬಳಿಕ ದಂಪತಿ ಅಲ್ಲಿಯೇ ವಾಸ್ತವ್ಯ ಮುಂದುವರಿಸಿದ್ದರು. ಕೊಟ್ಟಿಗೆಯಲ್ಲೇ ಜೀವನ ಸಾಗಿಸುತ್ತಿದ್ದ ದಂಪತಿಗೆ ಕೊನೆಗೂ 2023ರಲ್ಲಿ ಹೊಸ ಮನೆ ನಿರ್ಮಾಣವಾಗಿ ಗೃಹಪ್ರವೇಶದ ಭಾಗ್ಯ ಒದಗಿಬಂತು. ಈ ಸಂದರ್ಭದಲ್ಲೂ ತಮ್ಮ ಗೋಪ್ರೇಮ ಮೆರೆದ ಕುಟುಂಬಸ್ಥರು, ಗೃಹಪ್ರವೇಶದ ಶುಭ ಮುಹೂರ್ತದಲ್ಲಿ ಮನೆಯಲ್ಲಿದ್ದ ಎರಡು ಗರ್ಭಿಣಿ (ಗಬ್ಬದ) ಹಸುಗಳನ್ನು ಸುಂದರವಾಗಿ ಅಲಂಕರಿಸಿ, ಅವುಗಳಿಗೆ ಶಾಲು ಹೊದಿಸಿ, ಫಲವಸ್ತುಗಳನ್ನು ನೀಡಿ, ಆರತಿ ಎತ್ತುವ ಮೂಲಕ ಭಕ್ತಿಯಿಂದ ಸೀಮಂತ ಕಾರ್ಯ ನೆರವೇರಿಸಿದರು. ಆ ಬಳಿಕವಷ್ಟೇ ತಮಗಾಗಿ ನಿರ್ಮಿಸಿದ ನೂತನ ಮನೆಗೆ ಪ್ರವೇಶ ಮಾಡಿದರು.
ನಿರಂತರ ಸಾಗುತ್ತಿರುವ ಗೋಸೇವೆ
ಹೈನುಗಾರಿಕೆ ಎನ್ನುವುದು ಸುಲಭದ ಮಾತಲ್ಲ. ಅದರಲ್ಲೂ ಲಾಭವಿಲ್ಲದೇ ಊರ ತಳಿಯ ಗೋವುಗಳ ಸಾಕಣೆಯಂತೂ ಅಗಾಧ ವೆಚ್ಚದಾಯಕ. ಗೋಶಾಲೆಯ ದೈನಂದಿನ ನಿರ್ವಹಣೆಗೆ ದೊಡ್ಡ ಮೊತ್ತದ ವೆಚ್ಚ ತಗುಲುತ್ತಿದ್ದರೂ, ಕುವೈತ್ನಿಂದಲೇ ರಾಜೇಶ್ ಅವರು ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇತ್ತ ಊರಿನಲ್ಲಿ ಕೇಶವ ಭಂಡಾರಿ ಅವರೊಂದಿಗೆ ಸ್ಥಳೀಯರಾದ ಚಂದ್ರಾಕ್ಷ ಎಂಬುವವರು ಅತ್ಯಂತ ಪ್ರೀತಿಯಿಂದ ಗೋವುಗಳ ಆರೈಕೆ ಮತ್ತು ನಿತ್ಯದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ.
ದೇಶಿ ತಳಿಗಳ ಸಂರಕ್ಷಣೆ ಇಂದು ಅತ್ಯಗತ್ಯವಾಗಿ ಆಗಬೇಕಾದ ಕೆಲಸ. ಅದನ್ನು ಸರ್ಕಾರದ ಯಾವುದೇ ಸಹಾಯಧನ ಅಥವಾ ಪ್ರಚಾರದ ಹಪಾಹಪಿಯಿಲ್ಲದೆ, ಒಂದು ಮೌನ ಕ್ರಾಂತಿಯಂತೆ ಮಾಡುತ್ತಿದೆ ಈ ಕುಟುಂಬ. ಕುವೈತ್ನಲ್ಲಿದ್ದರೂ ತಾಯ್ನಾಡಿನ ಗೋವುಗಳ ಮೇಲಿನ ಪ್ರೀತಿ ಉಳಿಸಿಕೊಂಡಿರುವ ರಾಜೇಶ್ ಅವರ ಕನಸು ಮತ್ತು ಅದಕ್ಕೆ ಜೀವ ತುಂಬುತ್ತಿರುವ ಕೇಶವ ಭಂಡಾರಿ ದಂಪತಿಯ ಶ್ರಮಕ್ಕೆ ತಲೆಬಾಗಲೇಬೇಕು. ಗೋವುಗಳನ್ನು ಕೇವಲ ಪ್ರಾಣಿಗಳಾಗಿ ನೋಡದೆ, ತಮ್ಮದೇ ಕುಟುಂಬದ ಸದಸ್ಯರಂತೆ ಕಂಡು, ಅವುಗಳಿಗಾಗಿ ತಮ್ಮ ಸುಖವನ್ನೇ ತ್ಯಾಗ ಮಾಡಿದ ಈ ದಂಪತಿಯ ಮತ್ತು ಇಡೀ ಕುಟುಂಬದ ‘ಗೋಭಕ್ತಿ’ ನಿಜಕ್ಕೂ ಶ್ಲಾಘನೀಯ. ಈ ಕಾಮಧೇನು ಗೋಶಾಲೆ ಹೀಗೆಯೇ ಯಶಸ್ವಿಯಾಗಿ ಮುನ್ನಡೆಯಲಿ, ಇವರ ಗೋಸೇವೆ ಎಲ್ಲರಿಗೂ ಪ್ರೇರಣೆಯಾಗಲಿ ಎಂಬುದೇ ನಮ್ಮ ಆಶಯ.









