ಬಂಟ್ವಾಳ: ರಾತ್ರಿ ಗಸ್ತು ವೇಳೆ ಮನೆಯಿಂದ ಕೇಳಿಬಂದ ಆಕ್ರಂದನಕ್ಕೆ ತಕ್ಷಣ ಸ್ಪಂದಿಸಿ, ಲಘು ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಗೆ ಸಿಪಿಆರ್ ನೀಡಿ ಪ್ರಾಣ ಉಳಿಸಿದ ಬಂಟ್ವಾಳ ನಗರ ಠಾಣೆಯ ನೈಟ್ ಬೀಟ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಗೂಡಿನಬಲಿ ನಿವಾಸಿ ಅಶ್ರಫ್ ಅವರಿಗೆ ಮಧ್ಯರಾತ್ರಿ ತೀವ್ರ ಎದೆನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಮನೆಯಿಂದ ಜೋರಾಗಿ ಬಾಗಿಲು ಬಡಿಯುವ ಹಾಗೂ ಆಕ್ರಂದನದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಗಸ್ತು ತಿರುಗುತ್ತಿದ್ದ ನೈಟ್ ಬೀಟ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.
ಸ್ಥಳಕ್ಕೆ ತಲುಪಿದಾಗ ಅಶ್ರಫ್ ಅವರಿಗೆ ಲಘು ಹೃದಯಾಘಾತ ಸಂಭವಿಸಿರುವುದನ್ನು ಗಮನಿಸಿದ ಪೊಲೀಸ್ ಕಾನ್ಸ್ಟೇಬಲ್ ವಿನೋದ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಜಯಗಣೇಶ್ ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಸಿಪಿಆರ್ ನೆರವು ಒದಗಿಸಿದ್ದಾರೆ. ಬಳಿಕ ಸಮಯ ವ್ಯರ್ಥ ಮಾಡದೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ದೊರಕುವಂತೆ ಕ್ರಮ ಕೈಗೊಂಡಿದ್ದಾರೆ. ಸಿಬ್ಬಂದಿಯ ಸಮಯಪ್ರಜ್ಞೆ, ತುರ್ತು ಸ್ಪಂದನೆ ಮತ್ತು ಮಾನವೀಯ ಸೇವೆಯಿಂದ ಅಶ್ರಫ್ ಅವರ ಜೀವ ಉಳಿದಿದ್ದು, ಇವರ ಕರ್ತವ್ಯನಿಷ್ಠೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.








