ಮಂಗಳೂರು :ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ನಡೆದಿರುವ ಮೂರು ಕೊಲೆ, ನಂತರದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಹೊರತಾಗಿ ಇತರರ ಪ್ರಯಾಣಕ್ಕೆ ನಿಬಂಧ ವಿಧಿಸಲು ಅಧಿಕಾರಿಗಳಿಗ ಸೂಚಿಸಿರುವ ಕುರಿತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಹೇಳಿದ್ದರಾದರೂ ಈ ಕುರಿತು ಯಾವುದೇ ಅಧಿಕೃತ ಆದೇಶ ಜಾರಿಯಾಗಲಿಲ್ಲ. ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರ ಪ್ರಯಾಣ ನಿರ್ಬಂಧಕ್ಕೆ ಸೂಚಿಸಿದ್ದ ಕುರಿತು ಎಡಿಜಿಪಿಯವರು ನೀಡಿದ್ದ ಹೇಳಿಕೆ ಬೆನ್ನಲ್ಲೇ ಈ ಕುರಿತು ಹಲವು ವೆಬ್‌ಸೈಟ್, ಚಾನೆಲ್ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ವರದಿಯಾಗಿತ್ತು. ಈ ಕುರಿತು ಹಲವಾರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು.
ಕಮಿಷನರೇಟ್ ವ್ಯಾಪ್ತಿಯಲ್ಲಿ ಆದೇಶ ಜಾರಿ- ಹಿಂತೆಗೆತ: ಎಡಿಜಿಪಿಯವರು ಸೂಚನೆ ನೀಡಿದ ನಂತರ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ, ಸಾರ್ವಜನಿಕ ಹಿತದೃಷ್ಟಿಯಿಂದ ಸಂಜೆ 6 ಗಂಟೆಯಿಂದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರ ಪ್ರಯಾಣ ನಿರ್ಬಂಧಿಸಿ ಆದೇಶ ಜಾರಿಯಾಗಿತ್ತು.ಆದರೆ ನಂತರದ ಬಳಿಕದ ಬೆಳವಣಿಗೆಯಲ್ಲಿ ಈ ಆದೇಶವನ್ನು ಹಿಂತೆಗೆದುಕೊಳ್ಳಲಾಗಿತ್ತು.ಆದೇಶವನ್ನು ಹಿಂತೆಗೆದುಕೊಂಡಿರುವ ಕುರಿತು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರೇ ಮಾಹಿತಿ ನೀಡಿದ್ದರು.ಒಟ್ಟಾರೆ ದ್ವಿಚಕ್ರ ವಾಹನಗಳಲ್ಲಿ ಸಹಸವಾರರ ಪ್ರಯಾಣ ನಿರ್ಬಂಧ ವಿಚಾರದಲ್ಲಿ ಜನರು ಗೊಂದಲಕ್ಕೊಳಗಾಗಿದ್ದಂತೂ ನಿಜ.