ಪ್ರತಿ ವರ್ಷ ಮಾರ್ಚ್ 8ರಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದು ಕೇವಲ ಒಂದು ದಿನದ ಆಚರಣೆಯಲ್ಲ, ಬದಲಾಗಿ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಸಾಧಿಸಿದ ಪ್ರಗತಿಯನ್ನು ಗುರುತಿಸುವ, ಅವರ ಹಕ್ಕುಗಳಿಗಾಗಿ ನಡೆದ ಹೋರಾಟವನ್ನು ಸ್ಮರಿಸುವ ಮತ್ತು ಲಿಂಗ ಸಮಾನತೆಯತ್ತ ಹೆಜ್ಜೆ ಹಾಕುವ ಸಂಕಲ್ಪದ ದಿನ.
ಮಹಿಳೆಯರ (Women’s) ಸಾಧನೆಗಳನ್ನು ಗೌರವಿಸಲು, ಮನೆ ಹಾಗೂ ಸಮಾಜಕ್ಕೆ ಅವರ ಕೊಡುಗೆಗಳನ್ನು ಸ್ಮರಿಸಲು, ಒಬ್ಬ ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ಆಕೆಯ ತ್ಯಾಗ, ಪರಿಶ್ರಮವನ್ನು ಗೌರವಿಸಲು ಪ್ರತಿ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿರುತ್ತದೆ. ಆಕೆ ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ. ವೈಯಕ್ತಿಕವಾಗಿ ಮನೆಯ ಅರ್ಧ ಜವಾಬ್ದಾರಿಯನ್ನು ಹೊರುವ ಜೊತೆಗೆ ಒಬ್ಬ ಶಿಕ್ಷಕಿಯಾಗಿ, ಇಂಜಿನಿಯರ್ ಆಗಿ, ಪೈಲೆಟ್ ಆಗಿ ಕೂಡ ತನ್ನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಕೂಡ ಈಗಿನ ಆಧುನಿಕ ದಿನಗಳಲ್ಲಿ ಆಕೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ.
ಮಹಿಳಾ ದಿನದ ಹಿನ್ನೆಲೆ ಏನು?
ಅಂತಾರಾಷ್ಟ್ರೀಯ ಮಹಿಳಾ ದಿನದ ಹೊರಹೊಮ್ಮುವಿಕೆಯ ಇತಿಹಾಸವು ಅನೇಕ ಹೋರಾಟಗಳು ಮತ್ತು ತ್ಯಾಗಗಳನ್ನು ಒಳಗೊಂಡಿದೆ. 20ನೇ ಶತಮಾನದ ಆರಂಭದಲ್ಲಿ ಅಮೆರಿಕ ಮತ್ತು ಯುರೋಪಿನ ಮಹಿಳಾ ಕಾರ್ಮಿಕರು ತಮಗೆ ನ್ಯಾಯಯುತ ವೇತನ ನೀಡಬೇಕು ಹಾಗೂ ಕಡಿಮೆ ಕೆಲಸದ ಸಮಯವನ್ನು ನಿಗದಿಪಡಿಸಬೇಕು ಎಂದು ಧ್ವನಿ ಎತ್ತಲು ಪ್ರಾರಂಭಿಸಿದರು. ನಿರ್ದಿಷ್ಟವಾಗಿ ಹೇಳುವುದಾದರೆ, 1908 ರಲ್ಲಿ ಸಾವಿರಾರು ಮಹಿಳೆಯರು ತಮ್ಮ ಮತದಾನದ ಹಕ್ಕಿಗಾಗಿ ಹೋರಾಡಲು ನ್ಯೂಯಾರ್ಕ್ ನಗರದಲ್ಲಿ ಒಟ್ಟುಗೂಡಿದರು. ಇದರ ನಂತರ 1910ರಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಕ್ಲಾರಾ ಜೆಟ್ಕಿನ್ ಎಂಬ ಮಹಿಳೆ ಮಾಡಿದ ವಿನಂತಿಯ ಆಧಾರದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರಿಗಾಗಿ ಒಂದು ದಿನವನ್ನು ಮೀಸಲಿಡಲು ನಿರ್ಧರಿಸಲಾಯಿತು. 1975ರಲ್ಲಿ ಮಾತ್ರ ವಿಶ್ವಸಂಸ್ಥೆಯು ಮಾರ್ಚ್ 8 ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನವೆಂದು ಅಧಿಕೃತವಾಗಿ ಘೋಷಿಸಿತು.
2026ರ ಮಹಿಳಾ ದಿನದ ಘೋಷವಾಕ್ಯ (Theme)
2026ನೇ ಸಾಲಿನ ಮಹಿಳಾ ದಿನಾಚರಣೆಯ ಅಧಿಕೃತ ಘೋಷವಾಕ್ಯ “ಗಿವ್ ಟು ಗೈನ್” (Give to Gain) ಎಂಬುದಾಗಿದೆ. ಇದು ಮಹಿಳೆಯರ ಅಭಿವೃದ್ಧಿ ಮತ್ತು ಸಮಾನತೆಗಾಗಿ ಹೂಡಿಕೆ ಮಾಡುವ ಹಾಗೂ ಸಮುದಾಯಕ್ಕೆ ಕೊಡುಗೆ ನೀಡುವ ಮಹತ್ವವನ್ನು ಸಾರುತ್ತದೆ.







