ಬಂಟ್ವಾಳ: ಪಶ್ಚಿಮ ಏಷ್ಯಾದ ಯುದ್ಧದ ಕಿಚ್ಚು ಈಗ ದಕ್ಷಿಣ ಭಾರತದ ಕೋಳಿ ಫಾರ್ಮ್ಗಳನ್ನು ತಲ್ಲಣಗೊಳಿಸುತ್ತಿದೆ. ವಿಶೇಷವಾಗಿ ಕರ್ನಾಟಕ ಮತ್ತು ತಮಿಳುನಾಡಿನ ಕೋಳಿ ಸಾಕಾಣಿಕೆ ವಲಯದ ಮೇಲೆ ನೇರ ಪರಿಣಾಮ ಬೀರಿದೆ.
ದಕ್ಷಿಣ ಭಾರತದ ಅದರಲ್ಲೂ ಮುಖ್ಯವಾಗಿ ತಮಿಳುನಾಡಿನ ನಾಮಕ್ಕಲ್ ಭಾಗದಿಂದ ಪಶ್ಚಿಮ ಏಶ್ಯಾದ ದೇಶಗಳಾದ ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಗೆ ಪ್ರತಿ ತಿಂಗಳು ಕೋಟ್ಯಾಂತರ ಮೊಟ್ಟೆಗಳು ರಫ್ತಾಗುತ್ತವೆ. ಇರಾನ್-ಇಸ್ರೇಲ್ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಹಡಗು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಗಲ್ಫ್ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದ ಕೋಳಿ ಮೊಟ್ಟೆಗಳ ವ್ಯಾಪಾರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಇದರ ಪರಿಣಾಮವಾಗಿ, ವಿದೇಶಕ್ಕೆ ರಫ್ತಾಗುತ್ತಿದ್ದ ಲಕ್ಷಾಂತರ ಮೊಟ್ಟೆಗಳು ಈಗ ಸ್ಥಳೀಯ ಮಾರುಕಟ್ಟೆಗೆ ಹರಿದು ಬರುತ್ತಿವೆ. ಗ್ರಾಹಕರಿಗೆ ಇದು ಖುಷಿಯ ವಿಚಾರವಾದರೆ, ರೈತರು ಮಾತ್ರ ತೀವ್ರ ಆತಂಕದಲ್ಲಿದ್ದಾರೆ.
ಭಾರತದ ‘ಮೊಟ್ಟೆಯ ತೊಟ್ಟಿಲು’ ಎಂದೇ ಹೆಸರಾದ ತಮಿಳುನಾಡಿನ ನಾಮಕ್ಕಲ್ ಮತ್ತು ಕರ್ನಾಟಕದಿಂದ ಪ್ರತಿ ತಿಂಗಳು 5 ರಿಂದ 6 ಕೋಟಿ ಮೊಟ್ಟೆಗಳು ಗಲ್ಫ್ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದವು. ಯುದ್ಧದ ಕಾರಣದಿಂದಾಗಿ ಅನೇಕ ಶಿಪ್ಪಿಂಗ್ ಆರ್ಡರ್ಗಳು ರದ್ದಾಗಿದ್ದು, ರಫ್ತು ಪ್ರಮಾಣ 25ರಿಂದ 30 ಶೇಕಡ ಕುಸಿತ ಕಂಡಿದೆ. ಕೆಲವು ದಿನಗಳ ಹಿಂದೆ 6 ರೂಪಾಯಿಗಿಂತ ಹೆಚ್ಚಿದ್ದ ಮೊಟ್ಟೆಯ ಸಗಟು ಬೆಲೆ ಈಗ 4.60 ರಿಂದ 4.70 ರೂಪಾಯಿಗೆ ಕುಸಿದಿದೆ. ಕರ್ನಾಟಕದ ಹೊಸಪೇಟೆ, ಬಳ್ಳಾರಿ, ಕೊಪ್ಪಳ ಭಾಗದ ಕೋಳಿ ಫಾರ್ಮ್ ಗಳು ಹೆಚ್ಚಾಗಿ ದೇಶಿಯ ಮಾರುಕಟ್ಟೆಯನ್ನು ನಂಬಿಕೊಂಡಿವೆ. ಆದರೆ ತಮಿಳುನಾಡಿನಿಂದ ರಫ್ತಾಗಬೇಕಿದ್ದ ಮೊಟ್ಟೆಗಳು ಕರ್ನಾಟಕದ ಮಾರುಕಟ್ಟೆಗೆ ಬರುತ್ತಿರುವುದರಿಂದ ಸ್ಥಳೀಯ ರೈತರಿಗೆ ಸಿಗುತ್ತಿದ್ದ ಸಗಟು ದರದಲ್ಲಿ ಕುಸಿತ ಕಂಡಿದೆ.
ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ದಾಳಿ ಹೆಚ್ಚಾಗಿರುವುದರಿಂದ ಮತ್ತು ಹರ್ಮೋಝ್ ಜಲಸಂಧಿ ಬಂದ್ ಆಗಿರುವುದರಿಂದ ಹಡಗುಗಳು ಈಗ ಆಫ್ರಿಕಾ ಖಂಡವನ್ನು ಸುತ್ತುವರಿದು ಬರಬೇಕಾಗಿದೆ. ಇದರಿಂದ ಪ್ರಯಾಣದ ವೆಚ್ಚ, ಸಮಯ ಮತ್ತು ಇನ್ಶೂರೆನ್ಸ್ ಮೊತ್ತ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು ರಫ್ತುದಾರರಿಗೆ ದೊಡ್ಡ ಹೊರೆಯಾಗಿದೆ. ಕೋಳಿ ಆಹಾರದ ಬೆಲೆ ಏರಿಕೆಯಾಗಿರುವುದರಿಂದ, ಒಂದು ಮೊಟ್ಟೆ ಉತ್ಪಾದಿಸಲು ರೈತರಿಗೆ ಸುಮಾರು 4.50 ರಿಂದ 5.00 ರೂಪಾಯಿ ಖರ್ಚಾಗುತ್ತದೆ. ಇನ್ನೊಂದೆಡೆ ಕೋಳಿ ಸಾಕಾಣಿಕೆಯ ವೆಚ್ಚ ಹೆಚ್ಚಾಗುತ್ತಿರುವುದು ಫಾರ್ಮ್ ಗಳ ಮಾಲಕರ ತಲ್ಲಣಕ್ಕೆ ಕಾರಣವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಕೇವಲ 4.60 ರೂಪಾಯಿ ಸಿಗುತ್ತಿರುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ.
ಈಗ ಬೇಸಿಗೆ ಕಾಲವಾಗಿರುವುದರಿಂದ ಮೊಟ್ಟೆಗಳು ಬೇಗನೆ ಹಾಳಾಗುತ್ತವೆ. ಶೈತ್ಯಾಗಾರಗಳ ವೆಚ್ಚ ಭರಿಸಲಾಗದೆ, ರೈತರು ಸಿಕ್ಕ ಬೆಲೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಮೊಟ್ಟೆಗಳನ್ನು ಮಾರಾಟ ಮಾಡಲು ಅನಿವಾರ್ಯವಾಗಿ ಮುಂದಾಗುತ್ತಿದ್ದಾರೆ. ಒಟ್ಟಾರೆಯಾಗಿ ಅಮೇರಿಕಾ- ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ದವೂ ಇಲ್ಲಿನ ಸಾಮಾನ್ಯ ರೈತ ಮತ್ತು ಉದ್ಯಮಿಯ ಆರ್ಥಿಕ ಸ್ಥಿತಿಯ ಮೇಲೆ ಕರಿನೆರಳು ಬೀರಿದೆ. ಈ ಸಂಕಷ್ಟದಿಂದ ಪಾರಾಗಲು ರಫ್ತುದಾರರು ಪಶ್ಚಿಮ ಏಶ್ಯಾದ ಬದಲಿಗೆ ಶ್ರೀಲಂಕಾ, ಮಲೇಶ್ಯಾ ಮತ್ತು ಆಫ್ರಿಕಾದ ಕೆಲವು ರಾಷ್ಟ್ರಗಳತ್ತ ಗಮನ ಹರಿಸುತ್ತಿದ್ದಾರೆ. ಆದರೆ ಹೆಚ್ಚಿದ ಸ್ಪರ್ಧೆಯಿಂದಾಗಿ ತಕ್ಷಣದ ಪರಿಹಾರ ಅಸಾಧ್ಯವಾಗಿದೆ. ಜಾಗತಿಕ ಮಟ್ಟದ ರಾಜಕೀಯ ಬೆಳವಣಿಗೆಗಳು ಸ್ಥಳೀಯವಾಗಿ ಹೇಗೆ ʼಬಟರ್ ಫ್ಲೈ ಎಫೆಕ್ಟ್ʼ ಉಂಟು ಮಾಡುತ್ತವೆ ಎಂಬುದಕ್ಕೆ ಇದು ಒಂದು ಉದಾಹರಣೆ.
ಮಂಡೇ ಟು ಸಂಡೇ ಮೊಟ್ಟೆ ತಿನ್ನುವ ಮೊಟ್ಟೆ ಪ್ರಿಯರಿಗೆ ಬೆಲೆ ಇಳಿಕೆಯಾಗಿರುವುದು ಖುಷಿ ಕೊಟ್ಟಿದೆ. ಆದರೆ ಅಡುಗೆ ಗ್ಯಾಸ್ ನ ಕೊರತೆ ಮತ್ತು ಬೆಲೆ ಏರಿಕೆ ಮಾತ್ರ ಇನ್ನಿಲ್ಲದಂತೆ ಕಾಡಿದೆ.








