ಇಂದಿನ ಕಾಲದಲ್ಲಿ ಮನುಷ್ಯನಿಗೆ ಅನ್ನ, ನೀರು, ಗಾಳಿ ಎಷ್ಟು ಮುಖ್ಯವೋ, ಕೈಯಲ್ಲೊಂದು ಸ್ಮಾರ್ಟ್ಫೋನ್ ಅಷ್ಟೇ ಮುಖ್ಯವಾಗಿದೆ. ಆದರೆ, ನಾವು ಆನಂದದಿಂದ ಬಳಸುತ್ತಿರುವ ಈ ಫೋನ್ಗಳು ನಮ್ಮನ್ನು ನಿರಂತರವಾಗಿ ಗಮನಿಸುತ್ತಿವೆ ಎನ್ನುವ ಕಹಿ ಸತ್ಯ ಬಹುಶಃ ಎಲ್ಲರಿಗೂ ತಿಳಿದಿಲ್ಲ. ನಮ್ಮದೇ ಸ್ಮಾರ್ಟ್ ಫೋನ್ ನಮ್ಮ ಮನೆಯೊಳಗಿನ ಗೂಢಚಾರಿ ಎಂದರೆ ನೀವು ನಂಬಲೇಬೇಕು.

ನಾವು ಬದುಕಿರುವುದು 21ನೇ ಶತಮಾನದ ಅದ್ಬುತ ತಂತ್ರಜ್ಞಾನದ ಯುಗದಲ್ಲಿ. ಆದರೆ ಈ ಸ್ಮಾರ್ಟ್ ಜಗತ್ತಿನ ಹಿಂದೆ ಅಷ್ಟೇ ಭಯಾನಕವಾದ ಡಿಜಿಟಲ್ ಕತ್ತಲೆ ಅಡಗಿದೆ. ಪ್ರತಿಯೊಬ್ಬರ ಕೈಯ್ಯಲ್ಲೂ ಸ್ಮಾರ್ಟ್ ಫೋನ್ ಇದೆ. ಆದರೆ ಈ ಫೋನ್ ನಮ್ಮ ಕೈಯ್ಯಲ್ಲಿದೆಯೋ ಅಥವಾ ನಾವು ಈ ಫೋನಿನ ಕಪಿಮುಷ್ಟಿಯಲ್ಲಿ ಇದ್ದೇವೆಯೋ ಎಂದು ತಿಳಿಯುತ್ತಿಲ್ಲ. ಹಲವು ಬಾರಿ ನಾವು ಗೆಳೆಯರೊಂದಿಗೆ ಯಾವುದೋ ಒಂದು ಕಾರು ಅಥವಾ ಪ್ರವಾಸದ ಬಗ್ಗೆ ಮಾತನಾಡುತ್ತಿರುತ್ತೇವೆ. ಅಚ್ಚರಿಯೆಂದರೆ, ಮುಂದಿನ ಐದು ನಿಮಿಷಗಳಲ್ಲಿ ನಮ್ಮ ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ನಲ್ಲಿ ಅದೇ ವಿಷಯಕ್ಕೆ ಸಂಬಂಧಿಸಿದ ಜಾಹೀರಾತುಗಳು ಪ್ರತ್ಯಕ್ಷವಾಗುತ್ತವೆ! ಇದು ಕಾಕತಾಳೀಯವೋ ಅಥವಾ ನಮ್ಮ ಫೋನ್ ನಮ್ಮ ಮಾತುಗಳನ್ನು ಕದ್ದು ಕೇಳುತ್ತಿದೆಯೇ? ಇದು ಮೈಕ್ರೋಫೋನ್ ಕಳ್ಳಾಟವೇ? ಫೋನಿಗೂ ಕಿವಿ ಇದೆಯೇ? ಎಂಬ ಸಂಶಯ ನಮ್ಮಲ್ಲಿ ಮೂಡುತ್ತದೆ. ಇಂದಿನ ಜಗತ್ತಿನಲ್ಲಿ ಡೇಟಾ ಅತ್ಯಂತ ಅಮೂಲ್ಯವಾದ ವಸ್ತು. ದೊಡ್ಡ ದೊಡ್ಡ ಕಂಪನಿಗಳು ನಮ್ಮ ಇಷ್ಟ-ಕಷ್ಟಗಳು, ನಾವು ಎಲ್ಲಿದ್ದೇವೆ, ಯಾರನ್ನು ಭೇಟಿಯಾಗುತ್ತೇವೆ ಎಂಬ ಪ್ರತಿಯೊಂದು ಮಾಹಿತಿಯನ್ನು ಸಂಗ್ರಹಿಸುತ್ತಿವೆ. ನಮ್ಮ ಅನುಮತಿಯಿಲ್ಲದೆಯೇ ನಮ್ಮ ಬದುಕಿನ ಕ್ಷಣ ಕ್ಷಣದ ಮಾಹಿತಿ ಮಾರಾಟವಾಗುತ್ತಿದೆ ಎಂಬುದು ಆತಂಕಕಾರಿ ವಿಷಯ. ಇದು ಕೇವಲ ತಂತ್ರಜ್ಞಾನದ ಪವಾಡವಲ್ಲ, ಇದು ಅಕೌಷ್ಟಿಕ್ ಫಿಂಗರ್ ಪ್ರಿಂಟಿಂಗ್. ನಮ್ಮ ಫೋನಿನಲ್ಲಿರುವ ಕೆಲವು ಆ್ಯಪ್ ಗಳು ನಮ್ಮ ಅನುಮತಿ ಇಲ್ಲದೆಯೇ ಮೈಕ್ರೋಫೋನ್ ಮೂಲಕ ನಮ್ಮ ಖಾಸಗಿ ಸಂಭಾಷಣೆಗಳನ್ನು ಆಲಿಸುತ್ತಿವೆ ಎಂಬ ಗಂಭೀರ ಆರೋಪಗಳಿವೆ. ನಮ್ಮ ಮಾತುಗಳನ್ನೇ ಬಂಡವಾಳ ಮಾಡಿಕೊಂಡು ಕಂಪನಿಗಳು ಕೋಟ್ಯಂತರ ರೂಪಾಯಿ ಲಾಭ ಮಾಡುತ್ತಿವೆ.

ಉಚಿತ ಎನ್ನುವುದೇ ದೊಡ್ಡ ವಂಚನೆ. ನಮಗೆ ಫೇಸ್ ಬುಕ್ ಉಚಿತ, ಇನ್ಸ್ಟಾಗ್ರಾಂ ಉಚಿತ, ವಾಟ್ಸಾಪ್ ಉಚಿತ. ಯಾವುದಾದರೂ ವಸ್ತು ಉಚಿತವಾಗಿ ಸಿಗುತ್ತಿದೆ ಎಂದರೇ ಅಲ್ಲಿ ನಾವು ಗ್ರಾಹಕರಲ್ಲ, ಬದಲಾಗಿ ನಾವೇ ಮಾರಾಟಕ್ಕಿರುವ ವಸ್ತು. ನಮ್ಮ ಪ್ರತಿಯೊಂದು ಕ್ಲಿಕ್, ವಿಡಿಯೋ ನೋಡುವ ಸಮಯ, ರಾಜಕೀಯ ಒಲವು, ಪ್ರೀತಿ-ಪ್ರೇಮದ ವಿಚಾರಗಳು ಎಲ್ಲವೂ ಡೇಟಾ ರೂಪದಲ್ಲಿ ಮಾರಾಟವಾಗುತ್ತದೆ. ಈ ಡೇಟಾವನ್ನು ಬಳಸಿ ನಮ್ಮ ಮನಸ್ಥಿತಿಯನ್ನು ಬದಲಿಸುವ ಶಕ್ತಿ ಈ ಅಲ್ಗಾರಿದಂಗಳಿಗಿದೆ. ಡೀಪ್ ಫೇಕ್ ತಂತ್ರಜ್ಞಾನದಲ್ಲಿ ಕೇವಲ ಒಂದು ಫೋಟೋ ಇದ್ದರೆ ಸಾಕು, ನಿಮ್ಮ ಮುಖವನ್ನು ಬಳಸಿ ಅಶ್ಲೀಲ ವಿಡಿಯೋಗಳನ್ನು ಅಥವಾ ನೀವು ಆಡದ ಮಾತುಗಳನ್ನು ಆಡಿದಂತೆ ಬಿಂಬಿಸುವ ವಿಡಿಯೋಗಳನ್ನು ಸೃಷ್ಟಿಸಬಹುದು. ಇದು ಮನುಷ್ಯನ ಘನತೆಗೆ ತರುತ್ತಿರುವ ದೊಡ್ಡ ಕುತ್ತು. ಸಣ್ಣ ಮಕ್ಕಳಿಗೂ ಮೊಬೈಲ್ ಇಲ್ಲದೆ ಅನ್ನ ಗಂಟಲಲ್ಲಿ ಇಳಿಯುವುದಿಲ್ಲ ಎನ್ನುವ ಸತ್ಯವನ್ನು ನಾವು ಅರಿತುಕೊಳ್ಳಬೇಕು. ಹಾಗೇಂದು ಇದೊಂದು ಅಭ್ಯಾಸವಲ್ಲ. ಬದಲಾಗಿ ಡಿಜಿಟಲ್ ಡ್ರಗ್. ಮೊಬೈಲ್ ಆಟಗಳು ಮತ್ತು ರೀಲ್ಸ್ ಗಳು ಮೆದುಳಿನಲ್ಲಿ “ಡೋಪಮೈನ್” ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡಿ ನಮ್ಮನ್ನು ವ್ಯಸನಿಗಳನ್ನಾಗಿ ಮಾಡುತ್ತಿವೆ. ಇದರಿಂದ ಏಕಾಗ್ರತೆ ಕಡಿಮೆಯಾಗಿ ಮಾನಸಿಕ ಒತ್ತಡ ಹೆಚ್ಚುತ್ತದೆ. ಈಗ ಎಚ್ಚೆತ್ತು ಕೊಳ್ಳದಿದ್ದರೇ ಮುಂದೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಇನ್ಫೋರ್ಮೇಶನ್ ವಾರ್ ನಡೆಯುತ್ತಿದ್ದು, ಯುವ ಜನತೆ ಈ ಡಿಜಿಟಲ್ ಜಾಲದಲ್ಲಿ ಸಿಲುಕಿ ತಮ್ಮ ಅಮೂಲ್ಯ ಸಮಯ ಮತ್ತು ಗೌಪ್ಯತೆಯನ್ನು ಕಳೆದುಕೊಳ್ಳುತ್ತಿದ್ದಾರೆ.
ಪರಿಹಾರ:
ವಾರದಲ್ಲಿ ಒಂದು ದಿನ ಅಥವಾ ದಿನದಲ್ಲಿ ಕೆಲವು ಗಂಟೆಗಳ ಕಾಲ ಫೋನ್ ನಿಂದ ದೂರವಿರಿ. ನಿಮ್ಮ ಫೋನ್ ಸೆಟ್ಟಿಂಗ್ಸ್ ಗೆ ಹೋಗಿ ಯಾವ ಆ್ಯಪ್ಗಳಿಗೆ ಮೈಕ್ರೋಫೋನ್ ಮತ್ತು ಲೊಕೇಷನ್ ನೀಡಿದ್ದೀರಿ ಎಂದು ಪರೀಕ್ಷಿಸಿ. ಸಾರ್ವಜನಿಕವಾಗಿ ಹೆಚ್ಚು ವೈಯಕ್ತಿಕ ಫೋಟೋಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿ. ತಂತ್ರಜ್ಞಾನವೂ ನಮಗೆ ದಾರಿದೀಪವಾಗಬೇಕೇ ಹೊರತು ಸುಡುವ ಬೆಂಕಿಯಾಗಬಾರದು. ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಸೈಬರ್ ವಂಚನೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದು ಓಟಿಪಿ (OTP) ಹಂಚಿಕೊಂಡರೆ ಸಾಕು, ನಿಮ್ಮ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ. ‘ವರ್ಕ್ ಫ್ರಮ್ ಹೋಮ್’ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ಲೂಟಿ ಮಾಡುವ ಜಾಲಗಳು ಸಕ್ರಿಯವಾಗಿವೆ. ತಂತ್ರಜ್ಞಾನ ನಮಗೆ ಸಹಾಯ ಮಾಡಬೇಕೇ ಹೊರತು, ನಮ್ಮನ್ನು ಗುಲಾಮರನ್ನಾಗಿ ಮಾಡಬಾರದು. ಇದಕ್ಕೆ ನಾವೇನು ಮಾಡಬಹುದು?
ಅಗತ್ಯವಿಲ್ಲದ ಆ್ಯಪ್ಗಳಿಗೆ ಕ್ಯಾಮೆರಾ ಮತ್ತು ಮೈಕ್ರೋಫೋನ್ ಅನುಮತಿ ನೀಡಬೇಡಿ. ಯಾವುದೇ ಅಪರಿಚಿತ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ. ನಿಮ್ಮ ಪಾಸ್ವರ್ಡ್ಗಳನ್ನು ಆಗಾಗ ಬದಲಾಯಿಸುತ್ತಿರಿ. ತಂತ್ರಜ್ಞಾನದ ಈ ಮಾಯಾಲೋಕದಲ್ಲಿ ನಾವು ಎಚ್ಚರ ತಪ್ಪಿದರೆ, ಬೆಲೆ ತೆರಬೇಕಾದವರು ನಾವೇ.
ಯಾವುದೇ ಹೊಸ ಆ್ಯಪ್ ಇನ್ಸ್ಟಾಲ್ ಮಾಡಿದಾಗ ಅದು ಕೇಳುವ ಪರ್ಮಿಷನ್ಗಳನ್ನು ಕುರುಡಾಗಿ ಒಪ್ಪಬೇಡಿ. ಉದಾಹರಣೆಗೆ: ಒಂದು ‘ಟಾರ್ಚ್’ ಆಪ್ಗೆ ನಿಮ್ಮ ‘ಕಾಂಟ್ಯಾಕ್ಟ್’ ಅಥವಾ ‘ಮೈಕ್ರೋಫೋನ್’ ಪರ್ಮಿಷನ್ ಯಾಕೆ ಬೇಕು? ಅನಗತ್ಯ ಪರ್ಮಿಷನ್ಗಳನ್ನು ತಕ್ಷಣವೇ ನಿರಾಕರಿಸಿ. ನಿಮ್ಮ ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ಇಮೇಲ್ ಖಾತೆಗಳಿಗೆ Two-Step Verification ಆನ್ ಮಾಡಿ. ಇದರಿಂದ ಯಾರಾದರೂ ನಿಮ್ಮ ಪಾಸ್ವರ್ಡ್ ಕದ್ದರೂ, ನಿಮ್ಮ ಫೋನ್ಗೆ ಬರುವ ಓಟಿಪಿ (OTP) ಇಲ್ಲದೆ ಅವರು ಲಾಗಿನ್ ಆಗಲು ಸಾಧ್ಯವಿಲ್ಲ. ಬಸ್ ಸ್ಟ್ಯಾಂಡ್, ರೈಲ್ವೆ ಸ್ಟೇಷನ್ ಅಥವಾ ಕೆಫೆಗಳಲ್ಲಿ ಸಿಗುವ ಉಚಿತ ವೈ-ಫೈ ಬಳಸಿ ಬ್ಯಾಂಕಿಂಗ್ ವ್ಯವಹಾರ ಮಾಡಬೇಡಿ. ಹ್ಯಾಕರ್ಗಳು ಇಂತಹ ನೆಟ್ವರ್ಕ್ಗಳ ಮೂಲಕ ನಿಮ್ಮ ಡೇಟಾವನ್ನು ಸುಲಭವಾಗಿ ಕದಿಯಬಹುದು. ಯಾವುದೇ ಬ್ಯಾಂಕ್ ಅಧಿಕಾರಿಗಳು ಫೋನ್ ಮಾಡಿ ನಿಮ್ಮ ಓಟಿಪಿ ಕೇಳುವುದಿಲ್ಲ. ಹಾಗೆಯೇ, “ನಿಮಗೆ ಲಾಟರಿ ಹೊಡೆದಿದೆ”, “ಕೆವೈಸಿ ಅಪ್ಡೇಟ್ ಮಾಡಿ” ಎಂದು ಬರುವ ಅನಾಮಧೇಯ ಲಿಂಕ್ಗಳ ಮೇಲೆ ಕ್ಲಿಕ್ ಮಾಡಲೇಬೇಡಿ. ನಿಮ್ಮ ಫೋನ್ ಸೆಟ್ಟಿಂಗ್ಸ್ನಲ್ಲಿ ‘Privacy’ ವಿಭಾಗಕ್ಕೆ ಹೋಗಿ, ಯಾವೆಲ್ಲಾ ಆ್ಯಪ್ಗಳು ಬ್ಯಾಕ್ಗ್ರೌಂಡ್ನಲ್ಲಿ ಮೈಕ್ರೋಫೋನ್ ಬಳಸುತ್ತಿವೆ ಎಂದು ನೋಡಿ. ಅಗತ್ಯವಿಲ್ಲದಿದ್ದಾಗ ಅವುಗಳನ್ನು ಆಫ್ ಮಾಡಿ. ಎಲ್ಲಾ ಖಾತೆಗಳಿಗೂ ಒಂದೇ ಪಾಸ್ವರ್ಡ್ ಬಳಸಬೇಡಿ. ಪಾಸ್ವರ್ಡ್ಗಳಲ್ಲಿ ಕನಿಷ್ಠ 12 ಅಕ್ಷರಗಳಿರಲಿ ಮತ್ತು ಅವುಗಳಲ್ಲಿ ಅಂಕಿಗಳು, ಚಿಹ್ನೆಗಳು (@, #, $) ಇರಲಿ. ನಿಮ್ಮ ಮನೆಯ ವಿಳಾಸ, ಲೊಕೇಶನ್ ಅಥವಾ ನಿಮ್ಮ ಮಕ್ಕಳು ಶಾಲೆಗೆ ಹೋಗುವ ಫೋಟೋಗಳನ್ನು ‘ಪಬ್ಲಿಕ್’ ಆಗಿ ಶೇರ್ ಮಾಡಬೇಡಿ. ನಿಮ್ಮ ಪೋಸ್ಟ್ಗಳನ್ನು ಕೇವಲ ‘Friends’ ಮಾತ್ರ ನೋಡುವಂತೆ ಸೆಟ್ಟಿಂಗ್ಸ್ ಬದಲಾಯಿಸಿ. ನಿಮ್ಮ ಫೋನ್ ಸಾಫ್ಟ್ವೇರ್ ಅಪ್ಡೇಟ್ ಬಂದಾಗ ತಕ್ಷಣ ಅಪ್ಡೇಟ್ ಮಾಡಿ. ಇವುಗಳಲ್ಲಿ ಹಳೆಯ ಭದ್ರತಾ ದೋಷಗಳನ್ನು ಸರಿಪಡಿಸುವ ‘Security Patches’ ಇರುತ್ತವೆ. ಅಪರಿಚಿತ ವಿಡಿಯೋ ಕಾಲ್ ಬಂದಾಗ ಎಚ್ಚರದಿಂದಿರಿ. ನಿಮ್ಮ ಮುಖದ ಹಾವಭಾವಗಳನ್ನು ರೆಕಾರ್ಡ್ ಮಾಡಿ ನಂತರ ಅದನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಒಂದು ವೇಳೆ ನೀವು ಸೈಬರ್ ವಂಚನೆಗೆ ಒಳಗಾದರೆ, ತಡಮಾಡದೆ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಿ ಅಥವಾ ಸಮೀಪದ ಪೊಲೀಸ್ ಠಾಣೆಯಲ್ಲಿ(ಸೈಬರ್) ದೂರು ದಾಖಲಿಸಿ.
ಸೈಬರ್ ಲೋಕದಲ್ಲಿ “ಅತಿಯಾದ ನಂಬಿಕೆ ಅಪಾಯಕಾರಿ”. ಯಾವಾಗಲೂ ಸಂದೇಹ ಮತ್ತು ಎಚ್ಚರದಿಂದ ಇರುವುದೇ ಸುರಕ್ಷತೆಯ ಮಂತ್ರ.








