ಬಂಟ್ವಾಳ: ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದಲ್ಲಿನ ನೆಟ್ಲ ಜಿ.ಪಂ.ಹಿ.ಪ್ರಾಥಮಿಕ ಶಾಲೆಯಲ್ಲಿ “ಆಟಿದಪೊರ್ಲು” ವಿಶೇಷ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ್ ಕುಲಾಲ್ ತೆಂಗಿನ ಹಿಂಗಾರ ಅರಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಪಡೀಲ್ ನ ಅಮೃತ ಕಾಲೇಜ್ ಪ್ರಿನ್ಸಿಪಾಲ್ ಚಂದ್ರಹಾಸ್ ಕಣ್ಣತೀರ್ಥ ಆಟಿ ಆಚರಣೆಯ ವಿಶೇಷತೆ, ಪ್ರಾಮುಖ್ಯತೆ ಯ ಬಗ್ಗೆ ಮಾಹಿತಿ ಹಂಚಿಕೊಂಡರು. ಪತಂಜಲಿ ಯೋಗ ಸಮಿತಿ ನಿಟಿಲಾಪುರ ಇದರ ಗುರುಗಳಾದ ಶ್ರೀಮತಿ ಸರಸ್ವತಿ ಮಾತಾಜಿ ಆಟಿ ತಿಂಗಳಲ್ಲಿ ಬಳಸುವ ಔಷಧಿ ಸಸ್ಯಗಳು, ಹಾಗೂ ಆಹಾರ ಪದ್ಧತಿಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಹಾಗೂ ಪೋಷಕರಿಗೆ ಗತ ಕಾಲದಲ್ಲಿ ಆಟಿ ತಿಂಗಳಲ್ಲಿ ನಡೆಯುತ್ತಿದ್ದ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಮಾತ್ರವಲ್ಲದೇ
ಶಾಲಾ ಮಕ್ಕಳು ಹಾಗೂ ಶಿಕ್ಷಕರಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು.
ಆಟಿ ಕೆಲೆಂಜದ ಸಾಂಪ್ರದಾಯಕ್ಕೆ ಯಾವುದೇ ದಕ್ಕೆ ಬಾರದ ರೀತಿಯಲ್ಲಿ ಆಟಿಕೆಲೆಂಜಾ ವೇಷ ಧರಿಸಿ ನರ್ತಿಸಿದ ಶಾಲಾ ಮಕ್ಕಳು ಪೋಷಕರ ಹಾಗೂ ನೆರೆದಿದ್ದ ಜನರ ಮನಸ್ಸನ್ನು ಮುದ ನೀಡಿದರು.ಮಕ್ಕಳ ಪೋಷಕರು ಮನೆಯಲ್ಲಿಯೇ ತಯಾರಿಸಿದ ಆಟಿಯ ವಿವಿಧ ಆಹಾರ ತಿಂಡಿ-ತಿನಿಸುಗಳನ್ನು, ಪರಸ್ಪರ ಹಂಚಿಕೊಂಡು ಸವಿದು ಸಂತೋಷಪಟ್ಟರು.
ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಚಂಚಲಾಕ್ಷಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶೋಭಲತಾ, ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕಾರುಣ್ಯ ಸ್ವಾಗತಿಸಿ, ಅನನ್ಯ ಬಹುಮಾನಗಳ ಪಟ್ಟಿ ವಾಚಿಸಿ, ಎಂ.ಕೆ ಖುಷಿ ಕಾರ್ಯಕ್ರಮ ನಿರೂಪಿಸಿದರು.ರಾಜೇಶ್ ದೇವಾಡಿಗ,ಶಿಕ್ಷಕರಾದ ಪ್ರವೀಣ್ ಬಿ, ಜಯರಾಮ್ ನಾವಡ, ಅಶ್ವಿನಿ,ನಿಶ್ಮಿತಾ,ಇಂದಿರಾ, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.