ಬಂಟ್ವಾಳ: ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ತಲೆಮೆರೆಸಿಕೊಂಡಿದ್ದ ಆರೋಪಿಯೊರ್ವನನ್ನು ಬಂಧಿಸುವಲ್ಲಿ ಕೊನೆಗೂ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರು ಕೋಟೆಕಾರು ಮಜಲು ನಿವಾಸಿ ಮೂಸಬ್ಬ ಅವರ ಮಗ ಸಿದ್ದಿಕ್ ಎಂಬಾತ ಗಾಂಜಾಸೇವನೆ ಮಾಡಿ ಪೊಲೀಸ್ ಅತಿಥಿಯಾಗಿ ಜೈಲು ಸೇರಿದ್ದ.
ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡು ಕಳೆದ 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಸಿದ್ದಿಕ್ ನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಕೇರಳ ಗಡಿಭಾಗದ ತಲಪಾಡಿ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ಸಿದ್ದಿಕ್ 2015ರ ಡಿಸೆಂಬರ್ ನಲ್ಲಿ ಸಾರ್ವಜನಿಕ ಸ್ಥಳವೊಂದರಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಈತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಷರತ್ತು ಬದ್ಧ ಜಾಮೀನ ಮೇಲೆ ಬಿಡುಗಡೆಗೊಂಡಿದ್ದ ಸಿದ್ದಿಕ್ ಆ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಎಂಟು ವರ್ಷಗಳಿಂದ ತಲೆಮರಿಸಿಕೊಂಡಿದ್ದ.