ಬೆಂಗಳೂರು:ಕೇರಳದಲ್ಲಿ ಮಂಕಿಪಾಕ್ಸ್ ಸೋಂಕಿಗೆ ಓರ್ವ ಸಾವನ್ನಪ್ಪಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ, ಸೋಂಕು ನಿಯಂತ್ರಣಕ್ಕಾಗಿ ಮಾರ್ಗಸೂಚಿ ಕ್ರಮಗಳನ್ನು ಪ್ರಕಟಿಸಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಮಂಕಿಪಾಕ್ಸ್ ಸರ್ವೇಕ್ಷಣೆಗಾಗಿ ಹೆಚ್ಚಿನ ಮಟ್ಟದ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲು ಮಾರ್ಗಸೂಚಿ ಕ್ರಮಗಳನ್ನು ಕೂಡಲೇ ಕೈಗೊಂಡಿರುವುದನ್ನು ಖಚಿತ ಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಮಾರ್ಗಸೂಚಿ ಕ್ರಮ: ಮಂಕಿಪಾಕ್ಸ್‌ನ ಪ್ರತಿಯೊಂದು ಪ್ರಕರಣವನ್ನು ವರದಿ ಮಾಡಬೇಕು. ತ್ವರಿತ ಪ್ರಕ್ರಿಯಾ ತಂಡದ ವಿವರವಾದ ತನಿಖೆ, ಮಾದರಿ ಸಂಗ್ರಹ ಮತ್ತು ಐಹೆಚ್‌ಐಪಿ ಪೋರ್ಟಲ್‌ನಲ್ಲಿ ವರದಿ ಮಾಡಿದ ನಂತರ ವರದಿ ಮಾಡತಕ್ಕದ್ದು. ಪ್ರಕರಣ ವರದಿ ಮಾಡುವ ಪತ್ರವನ್ನು ಸಂಪೂರ್ಣ ಭರ್ತಿ ಮಾಡಲಾಗಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದು.ಶಂಕಿತ ಹಾಗೂ ಖಚಿತಪಟ್ಟ ಪ್ರಕರಣಗಳಿಗಾಗಿ ನಿರ್ದಿಷ್ಟ ಸಾಂಸ್ಥಿಕ ಪ್ರತ್ಯೇಕತೆ ಸೌಲಭ್ಯವಿರುವುದನ್ನು ಖಚಿತ ಪಡಿಸಿಕೊಳ್ಳುವುದು.ಎಲ್ಲಾ ಶಂಕಿತ ಪ್ರಕರಣಗಳ ಸಂಪರ್ಕಿತರ ಪತ್ತೆಯನ್ನು ಕಡ್ಡಾಯವಾಗಿ ಕೈಗೊಳ್ಳುವುದು.ಸಂಪರ್ಕಿತರಲ್ಲಿ ಲಕ್ಷಣಗಳು, ಚಿನ್ಹೆಗಳು ಕಂಡು ಬರುತ್ತಿದೆಯೇ ಎಂದು 21 ದಿನಗಳವರೆಗೆ ಮೇಲ್ವಿಚಾರಣೆ ಮಾಡಬೇಕು. ಮಂಕಿಪಾಕ್ಸ್‌ನ ಲಕ್ಷಣಗಳು, ಚಿನ್ಹೆಗಳು ಕಂಡು ಬಂದರೆ ಕೂಡಲೇ ಪರೀಕ್ಷೆಗೊಳಪಡಿಸಬೇಕು ಹಾಗೂ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗ ಶಾಲೆಗೆ ಕಳುಹಿಸಿಕೊಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.