ಇಬ್ಬರು ಮದ್ರಸಾ ವಿದ್ಯಾರ್ಥಿಗಳಿಗೆ ಸಲಿಂಗರತಿ ಕಿರುಕುಳ ನೀಡಿದ ಪ್ರಕರಣ ಆರೋಪಿ ವಿಟ್ಲ ಪಡ್ನೂರು ನಿವಾಸಿ ಅಧ್ಯಾಪಕನಿಗೆ 53ವರ್ಷ ಕಠಿಣ ಸಜೆ

0

ವಿಟ್ಲ: ಇಬ್ಬರು ಮದ್ರಸಾ ವಿದ್ಯಾರ್ಥಿಗಳಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ವಿಟ್ಲ ಮೂಲದ ಮದ್ರಸಾ ಅಧ್ಯಾಪಕರೋರ್ವರಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶರಾದ ಎ. ಮನೋಜ್‌ ಅವರು ಪೋಕ್ಸೋ ಕಾನೂನು ಹಾಗೂ ಇತರ ಸೆಕ್ಷನ್‌ಗಳಲ್ಲಾಗಿ ಒಟ್ಟು 53 ವರ್ಷ ಕಠಿಣ ಸಜೆ ಹಾಗೂ 3.25 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.

ಬಂಟ್ವಾಳ ತಾಲೂಕು ವಿಟ್ಲಪಡ್ನೂರು ಗ್ರಾಮದ ಬದ್ರಕಡಂಬು ನಿವಾಸಿ ಅಬ್ದುಲ್ ಹನೀಫ್ ಮದನಿ (44 ವ.) ಶಿಕ್ಷೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ. ಪೋಕ್ಸೋದ ಎರಡು ಸೆಕ್ಷನ್‌ಗಳಲ್ಲಾಗಿ ನ್ಯಾಯಾಲಯ ಆರೋಪಿಗೆ ತಲಾ 20 ವರ್ಷ ಸಜೆ ಐಪಿಸಿಯ ಎರಡು ಸೆಕ್ಷನ್‌ಗಳಲ್ಲಾಗಿ 13 ವರ್ಷ ಸೇರಿದಂತೆ ಆರೋಪಿಗೆ ಒಟ್ಟು 53 ವರ್ಷ ಸಜೆ ವಿಧಿಸಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರೂವರೆ ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ. ಆ ಹಣವನ್ನು ಸಂತ್ರಸ್ತರಾದ ಇಬ್ಬರು ಬಾಲಕರಿಗೆ ನೀಡುವಂತೆಯೂ ತೀರ್ಪಿನಲ್ಲಿ ನ್ಯಾಯಾಲಯ ತಿಳಿಸಿದೆ.

ಅಂಬಲತರ ಪೊಲೀಸರು ಆರೋಪಿ ವಿರುದ್ಧ 2016ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. 2016ರಲ್ಲಿ ಹಲವು ದಿನಗಳಲ್ಲಾಗಿ ಆರೋಪಿ 10 ಮತ್ತು 11 ವರ್ಷದ ಇಬ್ಬರು ಮದ್ರಸಾ ವಿದ್ಯಾರ್ಥಿಗಳಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸರಿಗೆ ನೀಡಲಾದ ದೂರಿನಲ್ಲಿ ಆರೋಪಿಸಲಾಗಿತ್ತು. ಅಂದು ಅಂಬಲತರ ಪೊಲೀಸ್‌ ಠಾಣೆಯ ಎಸ್.ಐ. ಆಗಿದ್ದ ಕೆ.ವಿ. ಶಶೀಂದ್ರನ್ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಶಿಕ್ಷೆಯನ್ನು ಆರೋಪಿ ಒಟ್ಟಿಗೆ ಅನುಭವಿಸಿದರೆ ಸಾಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.

ಪ್ರೋಸಿಕ್ಯೂಷನ್ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಪಿ.ಆರ್. ಪ್ರಕಾಶ್ ಅಮ್ಮಣ್ಣಾಯ ನ್ಯಾಯಾಲಯದಲ್ಲಿ ವಾದಿಸಿದ್ದರು.

ಇದೇ ರೀತಿಯ ಇನ್ನೊಂದು ಪ್ರಕರಣವೊಂದರಲ್ಲಿ ಎರಡು ವರ್ಷಗಳ ಹಿಂದೆ ಆರೋಪಿಗೆ ನ್ಯಾಯಾಲಯ 20 ವರ್ಷ ಶಿಕ್ಷೆ ವಿಧಿಸಿತ್ತು.

LEAVE A REPLY

Please enter your comment!
Please enter your name here