ನಿಯಮ ಪಾಲನೆ ಮಾಡದೆ ಗುತ್ತಿಗೆದಾರಿಂದ ಕಬಕ – ವಿಟ್ಲ ರಸ್ತೆ ಡಾಮರೀಕರಣ – ವಾಹನ ಸವಾರರ ಆರೋಪ

0

ಕಾಮಗಾರಿ ಮುಗಿಯುವವರೆಗೆ ಸಾರ್ವಜನಿಕರು ಸಮಸ್ಯೆಯನ್ನು ತಡೆದುಕೊಳ್ಳಲಿ: ಪಿಡಬ್ಲ್ಯೂಡಿ ಇಂಜಿನಿಯರ್ ಪ್ರೀತಮ್ ಎನ್.

ವಿಟ್ಲ: ಕಳೆದ ಹಲವಾರು ದಿನಗಳಿಂದ ಆಮೆಗತಿಯಲ್ಲಿ ನಡೆಯುತ್ತಿದ್ದ ಕಬಕ-ವಿಟ್ಲ ರಸ್ತೆಯ ಡಾಮರೀಕರಣ ಇದೀಗ ಚುನಾವಣೆ ದಿನ ನಿಗದಿಯಾಗುತ್ತಿದ್ದಂತೆ ವೇಗ ಪಡೆಯಿತಾದರೂ ಗುತ್ತಿಗೆದಾರರು ಡಾಮರೀಕರಣದ ವೇಳೆ ಪಾಲಿಸಬೇಕಾದ ನಿಯಮಗಳನ್ನು ಗಾಳಿಗೆ ತೂರಿ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನುವ ಆರೋಪ ನಾಗರೀಕ ವಲಯದಿಂದ ವ್ಯಾಪಕವಾಗಿ ಕೇಳಿಬರುತ್ತಿದೆ. ಸಮಸ್ಯೆಯ ಪರಿಹಾರಕ್ಕಾಗಿ ಪಿಡಬ್ಲೂಡಿ ಇಂಜಿನಿಯರ್ ಪ್ರೀತಮ್ ಎನ್.ರವರಿಗೆ ಮಾಹಿತಿ ನೀಡಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದಾಗ ಅವರು ಹಾರಿಕೆಯ ಉತ್ತರವನ್ನು ನೀಡಿ ಗುತ್ತಿಗೆದಾರರಿಗೆ ಬೆಂಬಲ ನೀಡಿದ ಘಟನೆ ನಡೆದಿದೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಹಂತ-3 ಪ್ಯಾಕೇಜ್ -251ರಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಪೊಳಲಿ ದ್ವಾರದಿಂದ ಕೈಕಂಬ, ನಂದಾವರ ಪೇಟೆಯಲ್ಲಿ ಕಾಂಕ್ರೀಟ್, ಮಾರ್ನಬೈಲು – ಸಾಲೆತ್ತೂರು – ಕಡಂಬು ಹಾಗೂ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಬಕ – ಕಡಂಬು ರಸ್ತೆಗೆ ಸುಮಾರು 26.84 ಕೋಟಿ ಬಿಡುಗಡೆಯಾಗಿ 2016ರ ಅಗಸ್ಟ್ ನಲ್ಲಿ ಎರಡು ವಿಧಾನ ಸಭಾಕ್ಷೇತ್ರಗಳಲ್ಲಿ ಪ್ರತ್ಯೇಕ ಗುದ್ದಲಿಪೂಜೆ ನಡೆದಿತ್ತು.

ರಸ್ತೆ ಬದಿಗೆ ಜಲ್ಲಿ ತುಂಬಿಸಿ ಎರಡು ವರ್ಷ ರಸ್ತೆ ದುರಸ್ತಿ ಮಾಡಿ ಬಳಿಕ ಗುತ್ತಿಗೆದಾರನಿಗೆ ಇಷ್ಟು ದೊಡ್ಡ ಮೊತ್ತದ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಲಾಗದೆ ಡಾಮರೀಕರಣ ಪೂರ್ಣವಾಗದೆ ಉಳಿದುಕೊಂಡಿತ್ತು. ಮೂರು ವರ್ಷವಾದರೂ ಕೆಲಸ ಪೂರ್ಣಗೊಳಿಸುವಲ್ಲಿ ಅಸಾಧ್ಯವಾಗಿತ್ತು. 2022 ಮೇಯಲ್ಲಿ ಹೊಸ ಗುತ್ತಿಗೆ ಕರೆದಿದ್ದು, ಅಗಸ್ಟ್ ತಿಂಗಳಲ್ಲಿ ಕಾರ್ಕಳ ಮೂಲದ ಉದಯ ಶೆಟ್ಟಿ ಎಂಬವರಿಗೆ ಗುತ್ತಿಗೆ ಅಂತಿಮವಾಗಿದ್ದು, ಆ ಬಳಿಕ ಗುದ್ದಲಿಪೂಜೆ ನಡೆದು ರಸ್ತೆ ಅಗಲೀಕರಣಕ್ಕೆ ಹಾಗೂ ಡಾಮರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಗುದ್ದಲಿ ಪೂಜೆ ನಡೆದ ಬಳಿಕ ರಸ್ತೆ ಅಗಲೀಕರಣ ಆರಂಭವಾಗಿ ಇದೀಗ ಕೆಲದಿನಗಳಿಂದ ರಸ್ತೆ ಡಾಮರೀಕರಣ ಆರಂಭವಾಗಿತ್ತು.

ಕಳಪೆ ಕಾಮಗಾರಿ ಎನ್ನುವ ಆರೋಪ:

ರಸ್ತೆ ಡಾಮರೀಕರಣದ ಆರಂಭದ ದಿನದಿಂದಲೂ ಇದೊಂದು ಕಳಪೆ ಕಾಮಗಾರಿಯಾಗಿದೆ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಹಾಗೂ ರಸ್ತೆ ಕಾಮಗಾರಿಯ ಬಗ್ಗೆ ನಾಗರೀಕರು ಪ್ರತಿಭಟನೆಗೆ ಸಜ್ಜಾದ ಹಿನ್ನೆಲೆಯಲ್ಲಿ ಮಾಹಿತಿ ಅರಿತ ಎಸ್.ಎಚ್.ಡಿ.ಪಿ.ಕಾರ್ಯನಿರ್ವಾಹಕ ಅಭಿಯಂತರ ನಾಗರಾಜ ಪಾಟೀಲ್ ರವರ ನೇತೃತ್ವದ ತಂಡ ರಸ್ತೆ ಡಾಮರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ‌ ನಡೆಸಿ ಲೋಪವಿಲ್ಲದೆ ಸರಿಯಾದ ರೀತಿಯಲ್ಲಿ ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿ ತೆರಳಿದ್ದರು.

ಡಾಮರೀಕರಣ ನಡೆಯುವ ವೇಳೆ ಪಾಲನೆಯಾಗದ ನಿಯಮಗಳು:

ದಿನವಿಡೀ ವಾಹನಗಳಿಂದ ತುಂಬಿರುವ ಕಬಕ-ವಿಟ್ಲ ರಸ್ತೆಯಲ್ಲಿ ಗುತ್ತಿಗೆದಾರರು ಯಂತ್ರಗಳ ಮೂಲಕ ರಸ್ತೆ ಡಾಮರೀಕರಣ ನಡೆಸುತ್ತಿರುವ ವೇಳೆ ನಿಯಮಗಳನ್ನು ಸರಿಯಾದ‌ ರೀತಿಯಲ್ಲಿ ಪಾಲನೆ‌ಮಾಡುತ್ತಿಲ್ಲ ಎನ್ನುವ ಆರೋಪ ನಾಗರಿಕರದ್ದಾಗಿದೆ. ವಾಹನ ದಟ್ಟನೆ ಇರುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುವ ರಸ್ತೆಯ ಎರಡೂ ಕಡೆಗಳಲ್ಲಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ವಾಹನವನ್ನು ನಿಯಂತ್ರಿಸ ಬೇಕಾಗಿದ್ದರೂ ಗುತ್ತಿಗೆದಾರರು ಅವ್ಯಾವುದನ್ನು ಇಲ್ಲಿ ಪಾಲನೆ ಮಾಡುತ್ತಿಲ್ಲ. ಈ ಬಗ್ಗೆ ಅಲ್ಲೇ ಇದ್ದ ಸಿಬ್ಬಂದಿಯಲ್ಲಿ ವಾಹನ ದಟ್ಟನೆಯನ್ನು ನಿಯಂತ್ರಿಸುವಂತೆ ವಾಹನಸವಾರರು ಹಾಗೂ ಸಾರ್ವಜನಿಕರು ಸಲಹೆ ನೀಡಿದಾಗ ಆ ವ್ಯಕ್ತಿ ಸಾರ್ವಜನಿಕರ ಮೇಲೆರಗುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಸಾರ್ವಜನಿಕರು ಸಮಸ್ಯೆಯನ್ನು ತಡೆದುಕೊಳ್ಳಲಿ: ಪಿಡಬ್ಲೂಡಿ ಇಂಜಿನಿಯರ್ ಪ್ರೀತಮ್ ಎನ್.

ಈ ಬಗ್ಗೆ ಲೊಕೋಪಯೊಗಿ ಇಲಾಖೆಯ ಪಿಡಬ್ಲೂಡಿ ಇಂಜಿನಿಯರ್ ಪ್ರೀತಮ್ ಎನ್. ರವರನ್ನು ‘ಸುದ್ದಿ’ ಸಂಪರ್ಕಿಸಿ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಕಾಮಗಾರಿ ನಡೆಯುವ ವೇಳೆ ಟ್ರಾಫಿಕ್ ಸಮಸ್ಯೆಯ ಬಗ್ಗೆ ಹಾಗೂ ವಾಹನ ಸವಾರರೊಂದಿಗೆ ಅಲ್ಲಿನ‌ ಸಿಬ್ಬಂದಿಗಳ ವರ್ತನೆಯ ಬಗ್ಗೆ ಮಾಹಿತಿ ನೀಡಿದಾಗ ‘ಯಾವುದೇ ಕೆಲಸವಾಗುವಾಗ ಸಮಸ್ಯೆಯಾಗುವುದು ಸಹಜ ಅದನ್ನು ಸಹಿಸಿಕೊಳ್ಳಬೇಕು. ಡಾಮರೀಕರಣ ಪೂರ್ಣಗೊಂಡ ಬಳಿಕ ಯಾವುದೇ ತಡೆ ಇಲ್ಲದೆ ಸಂಚರಿಸಬಹುದು. ನನ್ನ ಮನೆಯ ಪಕ್ಕ ಕೂಡ ರಸ್ತೆ ಕಾಂಕ್ರೀಟೀಕರಣ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಾನು ಮೂರು ತಿಂಗಳಿನಿಂದ ಸಹಿಸಿಕೊಳ್ಳುತ್ತಿದ್ದೇನೆ. ಅವರೇನು ಮಾಡಲು ಸಾಧ್ಯವಿಲ್ಲ ಜನರು ಸಹಿಸಿಕೊಂಡು ಸುಮ್ಮನಿರಲಿ’ ಎಂದರು.

LEAVE A REPLY

Please enter your comment!
Please enter your name here