ವಿಟ್ಲದ ಇನ್ಸ್‌ಪೆಕ್ಟರ್ ಹೆಚ್.ಇ.ನಾಗರಾಜ್,ಪುತ್ತೂರು ನಗರ ಠಾಣೆ ಹೆಚ್.ಸಿ. ಪರಮೇಶ್ವರ ಗೌಡರಿಗೆ ಮುಖ್ಯಮಂತ್ರಿ ಚಿನ್ನದ ಪದಕ

0

ಪುತ್ತೂರು:ವಿಟ್ಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹೆಚ್.ಇ.ನಾಗರಾಜ್ ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಪರಮೇಶ್ವರ ಗೌಡ ಅವರು ೨೦೨೨ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.


ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ಗಂಭೀರ ಪ್ರಕರಣಗಳ ತನಿಖೆ ಹಾಗೂ ಪತ್ತೆ ಕಾರ್ಯದಲ್ಲಿ ಸಮಗ್ರವಾಗಿ ಕರ್ತವ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ನಾಗರಾಜ್ ರವರನ್ನು ಮುಖ್ಯಮಂತ್ರಿ ಪದಕ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. 2007ನೇ ಬ್ಯಾಚ್‌ನ ಪಿಎಸ್‌ಐ ಅಗಿರುವ ಹೆಚ್.ಈ. ನಾಗರಾಜ್ ರವರು ಆರಂಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪ್ರೊಬೇಷನರಿ ಅವಧಿ ಮುಗಿಸಿ ಚಿಕ್ಕಮಗಳೂರು ತರಿಕೆರೆ ಪೊಲೀಸ್ ಠಾಣೆಯಲ್ಲಿ ಎಸ್.ಐ. ಆಗಿ ಕರ್ತವ್ಯ ಆರಂಭಿಸಿದ್ದರು. ಆ ಬಳಿಕ ಕಡಬ, ಬಂಟ್ವಾಳ ಗ್ರಾಮಂತರ, ಪುತ್ತೂರು ಸಂಚಾರ ಠಾಣೆ, ವಿಟ್ಲ, ವೇಣೂರು ಠಾಣೆಯಲ್ಲಿ ಎಸ್.ಐ. ಆಗಿ ಕರ್ತವ್ಯ ನಿರ್ವಹಿಸಿ ಅಲ್ಲಿಂದ ಇನ್ಸ್ ಪೆಕ್ಟರ್ ಆಗಿ ಭಡ್ತಿ ಹೊಂದಿ ಭಟ್ಕಳ ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಆ ಬಳಿಕ ಮೇಲ್ದರ್ಜೆಗೇರಿದ್ದ ವಿಟ್ಲ ಪೊಲೀಸ್ ಠಾಣೆಗೆ ಪ್ರಥಮ ಇನ್ಸ್ ಪೆಕ್ಟರ್ ಆಗಿ ಆಗಿಮಿಸಿ, ಇದೀಗ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಕ್ಷ ಪೊಲೀಸ್ ಅಧಿಕಾರಿಯಾಗಿರುವ ಹೆಚ್.ಈ. ನಾಗರಾಜ್ ರವರು ಹಲವಾರು ಕಠಿಣ ಪ್ರಕರಣಗಳನ್ನು ಭೇದಿಸುವಲ್ಲಿ ಸಫಲರಾಗಿದ್ದರು ಮಾತ್ರವಲ್ಲದೆ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ನಾಗರಾಜ್ ರವರು ಮೂಲತಃ ಹಾಸನ ಜಿಲ್ಲೆಯವರಾಗಿದ್ದಾರೆ.


ಪರಮೇಶ್ವರ ಗೌಡ:
ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಪರಮೇಶ್ವರ ಗೌಡ ಅವರು 2022ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ವಾರಂಟ್ ಕರ್ತವ್ಯ ನಿರ್ವಹಿಸುತ್ತಿರುವ ಅವರು ನ್ಯಾಯಾಲಯದಲ್ಲಿ ವಿಚಾರಣೆಗೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಮಾಡಿದ ಸಾಧನೆ ಮತ್ತು ಕರ್ತವ್ಯ ನಿಷ್ಠೆಗೆ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.ನೆಟ್ಟಣಿಗೆ ಆಜಡ್ಕ ತರವಾಡು ಮನೆತನದ ದಿ.ಬಿ.ಕೆ.ಸುಬ್ಬಣ್ಣ ಗೌಡ ಮತ್ತು ದಿ.ಮೀನಾಕ್ಷಿ ದಂಪತಿ ಪುತ್ರ ಪರಮೇಶ್ವರ ಗೌಡ ಅವರು ಪ್ರಸ್ತುತ ಕೌಡಿಚ್ಚಾರು ಕುತ್ಯಾಡಿಯಲ್ಲಿ ವಾಸ್ತವ್ಯ ಹೊಂದಿದ್ದಾರೆ.ಸಿದ್ಧಾಪುರದಲ್ಲಿ ತನ್ನ ಪೊಲೀಸ್ ಕರ್ತವ್ಯ ಆರಂಭಿಸಿದ್ದ ಇವರು ಕೊಡಗು, ವಿರಾಜ್‌ಪೇಟೆ, ಪೊನ್ನಂಪೇಟೆ, ಮಡಿಕೇರಿ ಗ್ರಾಮಾಂತರದಲ್ಲಿ ಕರ್ತವ್ಯ ನಿರ್ವಹಿಸಿ ೨೦೧೫ರಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಆಗಮಿಸಿದ್ದರು.ಇವರ ಪತ್ನಿ ಧನಲಕ್ಷ್ಮಿ ಗೃಹಿಣಿಯಾಗಿದ್ದು, ಪುತ್ರಿ ತಕ್ಷಿತಾ ಎಮ್.ಎ ಮಾಡಿದ್ದಾರೆ. ಪುತ್ರ ಶ್ರೀಕಾಂತ್ ಪದವಿ ಶಿಕ್ಷಣ ಪಡೆದಿದ್ದಾರೆ.

LEAVE A REPLY

Please enter your comment!
Please enter your name here