ಬಂಟ್ವಾಳ-ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗ ಕಾಮಗಾರಿ-`ಹೈಕೋರ್ಟ್ ಆದೇಶದಂತೆ ಜಮೀನು ಸರ್ವೆಗೆ ಸಹಕರಿಸಿ’-ಜಿಲ್ಲಾಧಿಕಾರಿಯವರಿಂದ ಸಾರ್ವಜನಿಕ ಪ್ರಕಟಣೆ

0

ಬಂಟ್ವಾಳ:ಉಡುಪಿ-ಕಾಸರಗೋಡು ಮಧ್ಯೆ 400 ಕೆ.ವಿ.ವಿದ್ಯುತ್ ಪ್ರಸರಣ ಮಾರ್ಗ ಕಾಮಗಾರಿ ಮಾಡುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕು ವ್ಯಾಪ್ತಿಯ ಜಮೀನಿನ ಸರ್ವೆ ಮಾಡುವಂತೆ 69 ಮಂದಿ ಸಂತ್ರಸ್ತ ಭೂ ಮಾಲೀಕರು ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದ ಮೇರೆಗೆ ಆದೇಶವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸರ್ವೆ ಕಾರ್ಯಕ್ಕೆ ಸಹಕಾರ ನೀಡುವಂತೆ ದ.ಕ. ಜಿಲ್ಲಾಧಿಕಾರಿಯವರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.


ನ್ಯಾಯಾಲಯದ ಆದೇಶದಂತೆ ಅರ್ಜಿದಾರರ ಸಮ್ಮುಖದಲ್ಲಿ ತಹಶೀಲ್ದಾರ್, ಭೂದಾಖಲೆಗಳ ಸಹಾಯಕ ನಿರ್ದೇಶಕರು, ಭೂದಾಖಲೆಗಳ ಉಪನಿರ್ದೇಶಕರು ಹಾಗೂ ಅವರ ತಂಡ ಸರ್ವೆ ಕಾರ್ಯ ನಡೆಸಬೇಕಾಗಿದ್ದು ಈ ಸಂದರ್ಭ ಯಾವುದೇ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳು ಅಡಚಣೆ ಮಾಡದೆ ಸರ್ವೆ ಕಾರ್ಯ ನಡೆಸಲು ಸಹಕರಿಸಬೇಕು.ತಪ್ಪಿದಲ್ಲಿ ನ್ಯಾಯಾಂಗದ ಆದೇಶ ಉಲ್ಲಂಘನೆಯಾಗುವುದಾಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶದಲ್ಲಿ ಏನಿದೆ?

ಕಾಸರಗೋಡು-ಉಡುಪಿ 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಹಾದು ಹೋಗುವ ಬಗ್ಗೆ ಬಂಟ್ವಾಳ ತಾಲೂಕಿನ 69 ಮಂದಿ ಕೃಷಿಕರು ಜಮೀನು ಸರ್ವೆ ನಡೆಸುವಂತೆ ರಾಜ್ಯ ಉಚ್ಛನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.ಅರ್ಜಿ ಪರಿಶೀಲಿಸಿದ ನ್ಯಾಯಪೀಠವು, ತಹಶೀಲ್ದಾರ್ ಅವರು ಕಕ್ಷಿದಾರರೊಂದಿಗೆ ಅವರ ಜಮೀನಿಗೆ ತೆರಳಿ ತಾಲೂಕು ಸರ್ವೇಯರ್ ಮೂಲಕ ಡಿಜಿಟಲ್ ಗ್ಲೋಬಲ್ ಪೊಸಿಷನಿಂಗ್ ಸರ್ವೆ ವಿಧಾನ ಮೂಲಕ ಸರ್ವೆ ಕಾರ್ಯವನ್ನು ಕೈಗೊಳ್ಳಬೇಕು.ಅರ್ಜಿದಾರರ ಸಮ್ಮುಖದಲ್ಲಿ ಸಮೀಕ್ಷೆ ಕಾರ್ಯವನ್ನು ನಡೆಸುವಂತೆ ಹಾಗೂ ಅದಕ್ಕೆ ಸಹಕಾರ ನೀಡುವಂತೆ ಆದೇಶಿಸಿದೆ.ಸಿದ್ಧಪಡಿಸಿದ ಸಮೀಕ್ಷೆಯ ವರದಿಯನ್ನು ಮುಂದಿನ ವಿಚಾರಣೆಯ ಸಂದರ್ಭ ನ್ಯಾಯಾಲಯಕ್ಕೆ ಸಲ್ಲಿಸಬೇಕು.ನ್ಯಾಯಾಲಯದ ಮುಂದೆ ಸಂಬಂಧಪಟ್ಟ ತಾಲೂಕು ಸರ್ವೇಯರ್‌ಗಳು ಸಲ್ಲಿಸುವ ಸಮೀಕ್ಷೆಯ ವರದಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯವನ್ನು ಕಾಯ್ದಿರಿಸಲಾಗಿದೆ.ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆಯ ದಿನಾಂಕದವರೆಗೆ ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

LEAVE A REPLY

Please enter your comment!
Please enter your name here