ಬಂಟ್ವಾಳ:ರಾಜ್ಯ ಸರಕಾರದ 2018 ನೇ ಸಾಲಿನ, ಪ್ರತಿಷ್ಠಿತ ಮೊಹರೆ ಹಣಮಂತರಾಯ ಪ್ರಶಸ್ತಿಗೆ ಆಯ್ಕೆಯಾಗಿರುವ ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರವರಿಗೆ ಮಾ.13ರಂದು ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಕಂದಾಯ ಸಚಿವ ಆರ್.ಅಶೋಕ್,ಮಾಜಿ ಸಂಸದ ವಿಜಯ ಸಂಕೇಶ್ವರ, ಪಬ್ಲಿಕ್ ಟಿವಿಯ ಮುಖ್ಯಸ್ಥ ಹೆಚ್.ಆರ್.ರಂಗನಾಥ್, ವಾರ್ತಾ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪುತ್ತೂರು, ಸುಳ್ಯ, ಬೆಳ್ತಂಗಡಿಗಳಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ ಮಾತ್ರವಲ್ಲದೆ ಮಾಹಿತಿ, ಸುದ್ದಿ ವೆಬ್‌ಸೈಟ್, ಸುದ್ದಿ ನ್ಯೂಸ್ ಚಾನೆಲ್ ಜೊತೆಗೆ ಬಲಾತ್ಕಾರದ ಬಂದ್, ಸಾಮಾಜಿಕ ಜಾಲತಾಣಗಳ ದುರುಪಯೋಗ, ಲಂಚ-ಭ್ರಷ್ಟಾಚಾರದ ವಿರುದ್ಧ ಜನಾಂದೋಲನಗಳ ಮೂಲಕ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿರುವ ಡಾ.ಯು.ಪಿ.ಶಿವಾನಂದ ಅವರು, ಕೊರೋನಾ ಸಂದರ್ಭದ ವಾರಾಂತ್ಯ ಕರ್ಫ್ಯೂ ವಿರುದ್ಧ ಜಾಗೃತಿ ಮೂಡಿಸುವಲ್ಲಿಯೂ ಯಶಸ್ವಿಯಾಗಿ ರಾಜ್ಯ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.ಇತ್ತೀಚೆಗಷ್ಟೆ ಪುತ್ತೂರುನಲ್ಲಿ ಸಸ್ಯ ಜಾತ್ರೆಯನ್ನು ಯಶಸ್ವಿಯಾಗಿ ಸಂಘಟಿಸಿದ್ದರು.ಶಿಕ್ಷಣ,ಉದ್ಯೋಗ ಮತ್ತು ಕೃಷಿ ಮಾಹಿತಿ ಕೇಂದ್ರವನ್ನು ಆರಂಭಿಸಿರುವುದು ಸೇರಿದಂತೆ ಹಲವು ಪ್ರಥಮಗಳಿಗೆ ನಾಂದಿ ಹಾಡಿರುವ ಡಾ.ಯು.ಪಿ.ಶಿವಾನಂದರವರು ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.