ಬಂಟ್ವಾಳ: ಕರ್ನಾಟಕ ವಿಧಾನಸಭೆಗೆ 2023 ರಲ್ಲಿ ನಡೆಯುವ ಚುನಾವಣೆಗೆ ನನ್ನ ಕೊನೆಯ ಸ್ಪರ್ಧೆ,ಜನತೆ ಆಶೀರ್ವಾದ ಮಾಡಿದರೆ ಮುಂದಿನ ಅವಧಿಯಲ್ಲಿ ಅದ್ಬುತವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸುತ್ತೇನೆ.ನಾನು ಹಿಂದೆ ಏನು ಹೇಳಿದ್ದೆನೆ ಅದನ್ನು ಮಾಡಿದ್ದೆನೆ, ಆಗ ಮಾಡಿದನ್ನು ಈಗಲು ಹೇಳುತ್ತೇನೆ ಇದು ನನ್ನ ಜಾಯಮಾನವಾಗಿದೆ ಎಂದು ಮಾಜಿ ಸಚಿವ,ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ತಿಳಿಸಿದರು.
ಬುಧವಾರ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಪಪ್ರಚಾರದಿಂದಾಗಿ ಕಳೆದ ಚುನಾವಣೆಯಲ್ಲಿ ನನಗೆ ಸೋಲಾಗಿರುವುದು ನಿಜ ,ಆದರೆ ಜನರಿಗೆ ಈಗ ಮನವರಿಕೆಯಾಗಿದ್ದು, ಜನರು ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ ಎಂದರು.
ಆರು ಬಾರಿ ಬಂಟ್ವಾಳದ ಜನತೆ ನನ್ನನ್ನು ಶಾಸಕನಾಗಿ ಮಾಡಿದ್ದು,ಇಲ್ಲಿಯ ಜನರ ಋಣ ನನ್ನ ಮೇಲಿದೆ.ಇದನ್ನು ಬದುಕಿನ ಕೊನೆಯವರೆಗೂ ಮರೆಯಲು ಸಾಧ್ಯವಿಲ್ಲ,ರಾಜಕೀಯ ಜೀವನದ ಇದೇ ನನ್ನ ಕೊನೆಯ ಚುನಾವಣಾ ಸ್ಪರ್ಧೆಯಾಗಿದೆ ಎಂದ ಅವರು ಒಬ್ಬ ಪ್ರಾಮಾಣಿಕ ರಾಜಕಾರಣಿಗೆ ರಾಜಕೀಯ ಮಾಡುವುದು ಸುಲಭದ ಮಾತಲ್ಲ, ಭೂಮಿ ಮಾರಿ ರಾಜಕೀಯ ಮಾಡಲು ನನ್ನಿಂದ ಸಾಧ್ಯವಿಲ್ಲ, ನಾನು ಎಂದೂ ಸುಳ್ಳು ಹೇಳುವುದಿಲ್ಲ ಎಂದು ಅವರು ತಿಳಿಸಿದರು.
ನಿರುದ್ಯೋಗ,ಬೆಲೆಏರಿಕೆ:
ನಿರುದ್ಯೋಗ ಮತ್ತು ಬೆಲೆ ಏರಿಕೆ ವಿಚಾರವನ್ನು ಮುಂದಿಟ್ಟು ಈ ಭಾರಿಯ ಚುನಾವಣೆ ನಡೆಯಲಿದೆ. ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದಾಗ ಜನಪರವಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯನ್ನು ಈಡೇರಿಸಿದೆ. ಇದೀಗ ಪಕ್ಷ ಘೋಷಿಸಿರುವ ಮೂರು ಗ್ಯಾರಂಟಿಯನ್ನು ಕೂಡ ಪೂರೈಸುವ ಶಕ್ತಿ ಕಾಂಗ್ರೆಸ್ ಗಿದೆ ಎಂದು ರಮಾನಾಥ ರೈ ತಿಳಿಸಿದರು.
ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೆನೆ:
ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಅತೀ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಬಂಟ್ವಾಳ ಕ್ಷೇತ್ರದಲ್ಲಿ ಮಾಡಿದ್ದೆನೆ.ಸರಿಸುಮಾರು ೫ ಸಾವಿರ ಕೋಟಿಗೂ ಮಿಕ್ಕಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿದ್ದೆನೆ. ಆಗ ಉಸ್ತುವಾರಿ ಮಂತ್ರಿಯಾಗಿ ಎಲ್ಲಾ ಅಭಿವೃದ್ಧಿ ಕೆಲಸವನ್ನು ಬಂಟ್ವಾಳದಲ್ಲಿ ಮಾಡಿದ್ದಾರೆ ಎಂಬ ಸ್ವಪಕ್ಷದ ಶಾಸಕರ ಆರೋಪಕ್ಕೂ ಆಗ ನಾನು ಗುರಿಯಾಗಿದ್ದೆ ಎಂದು ನೆನಪಿಸಿದರು.
ಯಾರೋ ಮಾಡಿದ ಕಾಮಗಾರಿಯನ್ನು ನಾನು ಮಾಡಿದ್ದೆನೆ ಎಂದು ಹೇಳುವಷ್ಟು ಸಣ್ಣ ವ್ಯಕ್ತಿಯಲ್ಲ. ಕಾರಿಂಜ, ಪೊಳಲಿ, ನಿಟಿಲೇಶ್ವರ ದೇವಸ್ಥಾನದ ಜೊತೆಗೆ ಎಲ್ಲಾ ಸಮಾಜದ ಧಾರ್ಮಿಕ ಕೇಂದ್ರ ಗಳ ಅಭಿವೃದ್ಧಿಗೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆನೆ ಎಂದರು.
ಅನಂತಾಡಿಯಲ್ಲಿ ಇಷ್ಟು ವರ್ಷ ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ ಉದಾಹರಣೆ ಇರಲಿಲ್ಲ.ಈಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಗೆಲುವು ಸಾಧಿಸಿರುವುದು ಸಂತಸ ತಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲಿಯಾನ್, ಅಬ್ಬಾಸ್ ಆಲಿ, ವೆಂಕಪ್ಪ ಪೂಜಾರಿ, ರಮೇಶ್ ನಾಯ್ಕ್ ರಾಯಿ, ಸುರೇಶ್ ಜೋರಾ,ಸುಭಾಶ್ಚಂದ್ರ ಶೆಟ್ಟಿ, ಜಗದೀಶ್ ಕೊಯಿಲ ಮತ್ತಿತರರು ಉಪಸ್ಥಿತರಿದ್ದರು.
ಮಾ. 10ರಿಂದ ರಥಯಾತ್ರೆ:
ಕಾಂಗ್ರೆಸ್ ಪಕ್ಷದ ವತಿಯಿಂದ ಮಾ. 10ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದ ವಠಾರದಿಂದ ರಥಯಾತ್ರೆ ಆರಂಭವಾಗಲಿದ್ದು, ಪ್ರತಿದಿನ ಮೂರು ಗ್ರಾಮ ಪಂಚಾಯತನ್ನು ಕ್ರಮಿಸಲಿದೆ. ಈ ಯಾತ್ರೆ 14 ದಿನಗಳ ಕಾಲ ಬಂಟ್ವಾಳ ಕ್ಷೇತ್ರದಲ್ಲಿ ಸಂಚರಿಸಲಿದೆ. ಈ ಸಂದರ್ಭ ಹಿಂದೆ ಆಗಿರುವ ಅಭಿವೃದ್ಧಿ ಕೆಲಸಗಳ ಜತೆಗೆ ಬಿಜೆಪಿ ಸರಕಾರದ ವೈಫಲ್ಯವನ್ನು ಜನರಿಗೆ ತಿಳಿಸುವ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದರು.